ಹೋರಾಟಗಾರ್ತಿಯರ ಸಮುದಾಯ ಪ್ರಜ್ಞೆ: 33 ಕೆರೆಗಳು ಭರ್ತಿ! #ನೀಲಾಕೆ.

Spread the love

ಹೋರಾಟಗಾರ್ತಿಯರ ಸಮುದಾಯ ಪ್ರಜ್ಞೆ: 33 ಕೆರೆಗಳು ಭರ್ತಿ! #ನೀಲಾಕೆ.

ಕಲಬುರ್ಗಿ: ಅಂತರ್ಜಲ ಹೆಚ್ಚಿಸಲು ಮತ್ತು ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡಲು ಮುಂದಾದ ಮಹಿಳೆಯರ ಹೋರಾಟವು ಚಳವಳಿ ರೂಪ ಪಡೆದುಕೊಂಡ ಪರಿಣಾಮ ಜಿಲ್ಲೆಯಲ್ಲಿ 33 ಕೆರೆಗಳು ಈಗ ಮೈದುಂಬಿಕೊಂಡಿವೆ. ತಾಲ್ಲೂಕಿನ ಆಜಾದಪುರ ಕೆರೆಯು ಹೂಳು ಮತ್ತು ಗಿಡಗಂಟಿಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅಲ್ಲಿಯ ಜನ ಕೆಲಸ ಅರಸಿ ನಗರಕ್ಕೆ ಬರುತ್ತಿದ್ದರು. ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡರೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ಜೊತೆಗೆ, ಕೆರೆಗಳನ್ನು ಸಂರಕ್ಷಿಸ ಬಹುದು ಎನ್ನುವ ಉದ್ದೇಶದಿಂದ ಪ್ರಜ್ಞಾ ಕಾನೂನು ಸಲಹಾ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆಯವರು ಹೋರಾಟಕ್ಕೆ ಇಳಿದರು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸವನ್ನು ಕೈಗೆತ್ತಿಕೊಂಡು ಹೂಳೆತ್ತಿಸಿದರು. ಮಳೆಗಾಲದಲ್ಲಿ ಕೆರೆ ತುಂಬಿತು! ಈ ಯಶಸ್ಸೇ ಮುಂದಿನ ಯಶೋ ಗಾಥೆಗೆ ಪ್ರೇರಣೆ ಆಯಿತು. ಉದ್ಯೋಗ ಖಾತರಿ ಯೋಜನೆಯಡಿ ಅಲ್ಲಿಷ್ಟು, ಇಲ್ಲಿಷ್ಟು ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಒಂದೇ ಕಡೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದರೆ ಹೆಚ್ಚು ಅನುಕೂಲ ಎನ್ನುವುದನ್ನು ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ, ಉಪಾಧ್ಯಕ್ಷ ಡಾ.ಪ್ರಭು ಖಾನಾಪುರೆ, ಕಾರ್ಯದರ್ಶಿ ನೀಲಾ ಕೆ., ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಚಂದಮ್ಮ ಗೋಳಾ, ಉಪಾಧ್ಯಕ್ಷೆ ಡಾ.ಶಾಂತಾ ಮಠ, ಕಾರ್ಯದರ್ಶಿ ನಂದಾದೇವಿ ಮಂಗೊಂಡಿ ಅರಿತರು. ಜಿಲ್ಲೆಯಲ್ಲಿ 33 ಕೆರೆಗಳ ಹೂಳನ್ನು ಎತ್ತಿಸಿದರು. ಅಷ್ಟೂ ಕೆರೆಗಳಲ್ಲಿ ನೀರು ನಿಂತಿದೆ. ಇಷ್ಟೇ ಅಲ್ಲ. ಸುತ್ತಲಿನ ಕೊಳವೆಬಾವಿ, ತೆರೆದಬಾವಿಗಳು ಮರುಪೂರಣಗೊಂಡಿವೆ.‘ಕೆರೆ, ಬಾವಿಗಳು ಊರಿನ ಜೀವ ನಾಡಿಗಳು. ನಮ್ಮ ನಿರ್ಲಕ್ಷ್ಯದಿಂದ ಅಂತರ್ಜಲ ಮಟ್ಟ ಕುಸಿಯುತ್ತ ಹೋಗುತ್ತಿದೆ. ಈಗ ನಾವು ಫ್ಲೋರೈಡ್, ಆರ್ಸೆನಿಕ್‌ಯುಕ್ತ ನೀರನ್ನು ಕುಡಿಯುವಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭವಿಷ್ಯ ಕಠಿಣ ಎನ್ನುವುದನ್ನು ಅರಿತು ಉದ್ಯೋಗ ಖಾತರಿ ಯೋಜನೆ ಮೂಲಕ ಕೆರೆಗಳ ಹೂಳೆತ್ತುವ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಬೇಕು ಎಂಬ ನಿರ್ಣಯಕೈಗೊಂಡೆವು. ಅಷ್ಟಕ್ಕೆ ಸುಮ್ಮನಾಗದೆ, ಹಗಲು–ರಾತ್ರಿ ಬೆನ್ನು ಹತ್ತಿದ್ದರಿಂದ ಕೆರೆಗಳ ಒಡಲು ಈಗ ಭರ್ತಿಯಾಗಿವೆ’ ಎಂದು ಹೋರಾಟಗಾರ್ತಿ ನೀಲಾ ಕೆ. ಖುಷಿಯಿಂದ ಹೇಳುತ್ತಾರೆ. ಆಜಾದಪುರ ಕೆರೆಯ ನಂತರ ಅಫಜಲಪುರ, ಆಳಂದ ಮತ್ತು ಚಿಂಚೋಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ಕೆರೆಗಳ ಕಾಮಗಾರಿ ಜೊತೆಗೆ ಹಳ್ಳ, ನಾಲಾ, ಗೋಕಟ್ಟೆ, ಚೆಕ್‌ಡ್ಯಾಂ ಮತ್ತು ರೈತರ ಹೊಲದಲ್ಲಿ ಕೃಷಿಹೊಂಡ ಕಾಮಗಾರಿಯನ್ನೂ ಕೈಗೊಂಡರು. ಎಷ್ಟೋ ಕಡೆ ಜನಪ್ರತಿನಿಧಿಗಳು, ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ. ಕೆಲವೆಡೆ ಅವರೇ ಅಡ್ಡಗಾಲು ಹಾಕಿದರು. ಆದರೆ ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಪಿ. ಅವರು ಬೆನ್ನೆಲುಬಾಗಿ ನಿಂತರು ಎಂದು  ನೆನಪಿಸಿಕೊಳ್ಳುತ್ತಾರೆ. ‘ಕೆಲವು ಹಳ್ಳಿಗಳಲ್ಲಿ ರಾಜಕೀಯ ಜೋರಾಗಿದೆ. ಹೀಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕಿದರು. ನಾವೇ ಬೆನ್ನುಬಿದ್ದು, ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಕೊಟ್ಟೆವು. ಪ್ರತಿನಿತ್ಯ ಉರಿ ಬಿಸಿಲಲ್ಲೇ ನಿಂತು ಹುರುಪು ತುಂಬಿದ್ದರಿಂದ ಸಾವಿರಾರು ಮಹಿಳೆಯರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದರು. ಪರಿಣಾಮ ಕೆರೆಯ ಅಭಿವೃದ್ಧಿ ಜತೆಗೆ ಅವರ ಆರ್ಥಿಕ ಸ್ಥಿತಿಯೂ ಬದಲಾಯಿತು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಹೋರಾಟವನ್ನು ಗುರುತಿಸಿದ ರಾಜ್ಯ ಸರ್ಕಾರವು ಚಂದಮ್ಮ ಗೋಳಾ, ನಂದಾದೇವಿ ಮಂಗೊಂಡಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ. ಅಭಿವೃದ್ಧಿಗೊಂಡ ಕೆರೆಗಳು ಆಳಂದ ತಾಲ್ಲೂಕು: ಕಡಗಂಚಿ, ತಡಕಲ್‌, ನರೋಣಾ ಗ್ರಾಮಗಳಲ್ಲಿ ತಲಾ ಎರಡು,  ಹೊನ್ನಳ್ಳಿ, ಧುತ್ತರಗಾಂವ, ವೈಜಾಪುರ, ಮುನ್ನಳ್ಳಿ, ಆಳಂದ, ಸಾಲೇಗಾಂವ, ಚಿತ್ತಲು, ದಣ್ಣೂರ, ನಿಂಬರ್ಗಾ, ತೆಲ್ಲೂರ, ಎಲೆನಾವದಗಿ. ಗುಳೆ ತಪ್ಪಿಸಲು, ಅಂತರ್ಜಲ ಹೆಚ್ಚಿಸಲು ಸುದೀರ್ಘ ಹೋರಾಟ ಮಾಡಿದ್ದರ ಫಲದಿಂದ ಕೆರೆಗಳು ನೀರಿನಿಂದ ಭರ್ತಿಯಾಗಿವೆ. ನೀಲಾ ಕೆ. ಕಾರ್ಯದರ್ಶಿ, ಪ್ರಜ್ಞಾ ಕಾನೂನು ಸಲಹಾ ಸಮಿತಿ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *