ಕೋವಿಡ್ ನಿಂದ ಮೃತರ ಕುಟುಂಬಕ್ಕೆ ೧ ಲಕ್ಷ ಪರಿಹಾರ ಘೋಷಣೆ

Spread the love

ಕೋವಿಡ್ ನಿಂದ ಮೃತರ ಕುಟುಂಬಕ್ಕೆ ಲಕ್ಷ ಪರಿಹಾರ ಘೋಷಣೆ

ಬೆಂಗಳೂರು, ಜೂನ್ 14; ಕೋವಿಡ್ ಸೋಂಕಿನಿಂದಾಗಿ ಕುಟುಂಬದಲ್ಲಿ ವಯಸ್ಕರು ಮೃತಪಟ್ಟಿದ್ದರೆ ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಇಂತಹ ಘೋಷಣೆ ಮಾಡಿದ ಮೊದಲ ರಾಜ್ಯ ಕರ್ನಾಟಕ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಈ ಕುರಿತು ಘೋಷಣೆ ಮಾಡಿದರು. ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮೃತಪಟ್ಟರೆ ಒಂದು ಕುಟುಂಬದಲ್ಲಿ ಒಬ್ಬರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದರು. “ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಕೋವಿಡ್‌ನಿಂದ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ ಒಬ್ಬರಿಗೆ ಪರಿಹಾರವನ್ನು ನೀಡಲಾಗುತ್ತದೆ. ಇದರಿಂದ ಒಟ್ಟು 20 ರಿಂದ 30 ಸಾವಿರ ಕುಟುಂಬಕ್ಕೆ ನೆರವು ಸಿಗಲಿದೆ” ಎಂದು ಯಡಿಯೂರಪ್ಪ ಹೇಳಿದರು. ಕೋವಿಡ್‌ ಸೋಂಕಿಗೆ ಕುಟುಂಬದಲ್ಲಿ ಅಪ್ರಾಪ್ತರು ಬಲಿಯಾಗಿದ್ದರೆ ಪರಿಹಾರ ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ವಯಸ್ಕರು ಮೃತಪಟ್ಟಿದ್ದರೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ಸಿಗಲಿದೆ. ಯಡಿಯೂರಪ್ಪ ಈ ಕುರಿತು ಇಂದು ಘೋಷಣೆ ಮಾಡಿದ್ದು, ಈ ಕುರಿತ ವಿವರವಾದ ಮಾರ್ಗಸೂಚಿ ಇನ್ನೂ ಪ್ರಕಟವಾಗಬೇಕಿದೆ. ದೇಶದಲ್ಲಿಯೇ ಇಂತಹ ಘೋಷಣೆಯನ್ನು ಮಾಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ ಕೋವಿಡ್ ಕಾರಣದಿಂದಾಗಿ ಹಲವಾರು ಕುಟುಂಬದಲ್ಲಿ ದುಡಿಯುವವರು ಮೃತಪಟ್ಟಿದ್ದಾರೆ. ಕುಟುಂಬದ ಆಧಾರ ಸ್ತಂಭವನ್ನೇ ಕಳೆದುಕೊಂಡು ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಕುಟುಂಬಗಳ ನೆರವಿಗೆ ಸರ್ಕಾರ ಈಗ ಧಾವಿಸಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, “ಇದಕ್ಕಾಗಿ ಸುಮಾರು 250 ರಿಂದ 300 ಕೋಟಿ ರೂ. ಖರ್ಚಾಗುತ್ತದೆ. ದೇಶದಲ್ಲೇ ಮೊದಲು ಇಂತಹ ಹಣಕಾಸು ಯೋಜನೆಯನ್ನು ನಾವು ನೀಡುತ್ತಿದ್ದೇವೆ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ” ಎಂದರು. ಈ ಘೋಷಣೆಗೂ ಮೊದಲು ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಆರ್ಥಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್. ಎನ್. ಪ್ರಸಾದ್, ಇಲಾಖೆ ಕಾರ್ಯದರ್ಶಿಗಳಾದ ಪಿ. ಸಿ. ಜಾಫರ್, ಏಕ ರೂಪ್ ಕೌರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *