ಮುದೇನೂರಿನ  ಡಾ ॥ ಚಂದ್ರಶೇಖರ್ ಮಹಾಸ್ವಾಮಿಗಳ ಅಜ್ಜನ ಜಾತ್ರೆಗೆ ಬನ್ನಿ….

Spread the love

ಮುದೇನೂರಿನ  ಡಾ ॥ ಚಂದ್ರಶೇಖರ್ ಮಹಾಸ್ವಾಮಿಗಳ ಅಜ್ಜನ ಜಾತ್ರೆಗೆ ಬನ್ನಿ….

 ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಆರಾಧ್ಯದೈವ ನಡೆದಾಡುವ ದೇವರೆಂದೇ ಪ್ರಸಿದ್ದರಾದ ಡಾ ಚಂದ್ರಶೇಖರ್ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ವರದ ಉಮಾಚಂದ್ರ ಮೌಲೇಶ್ವರ ದೇವಸ್ಥಾನದ ಜಾತ್ರೆ ನಡೆಯಲಿದ್ದು ಸಮಸ್ತ ಡಾ ॥ ಚಂದ್ರಶೇಖರ್ ಸ್ವಾಮಿಜಿಗಳ ಅಭಿಮಾನಿಗಳು ಭಕ್ತರೆಲ್ಲರೂ ಪಾಲ್ಗೊಂಡು ಅಜ್ಜನ ಕೃಪೆಗೆ ಪಾತ್ರರಾಗಲು ವಿನಂತಿ. ಡಾ॥ ಚಂದ್ರಶೇಖರ್ ಮಹಾಸ್ವಾಮೀಜಿಯವರು ಹುನಗುಂದ ತಾಲ್ಲೂಕಿನ ಅಮರಾವತಿಯ 1876 ರಲ್ಲಿ ಜನಿಸಿ, ಬಾಲ್ಯದಲ್ಲಿಯೇ ವೈದಿಕ, ಉಪನಿಷತ್ತು, ವೇದಾಗಮನ ಸಂಸ್ಕೃತ ಅದ್ಯಯನ ಮಾಡಿ ಹೊಳೆಆಲೂರಿನಲ್ಲಿ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸ್ಥಾಪಿಸಿ ಆ ಭಾಗದ ಜನರಲ್ಲಿ ಭಕ್ತಿಯ ಚಿಂತನೆಯ ಜ್ಯೋತಿಯನ್ನು ಹಚ್ಚಿದವರು. ಪೂಜ್ಯರು ಸೊಲ್ಲಾಪುರದಲ್ಲಿ ಅಧ್ಯಯನ ಮಾಡಿ ನಂತರ ಹೆಚ್ಚಿನ ಅಭ್ಯಾಸಕ್ಕಾಗಿ ಸಾಂಗ್ಲಿಯಲ್ಲಿ ಆರ್ಯಾಂಗ್ಲ ವೈದ್ಯಕೀಯ ಶಾಲೆಯಲ್ಲಿ ಕಲಿತು ನಂತರ ಸಮಾಜಸೇವೆಗಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡು ಗದುಗಿನಲ್ಲಿ ಬಂದು, ಅಲ್ಲಿ ಡಾ ಕಲ್ಲೋಳಗಿಯವರ ಬಳಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿ, ನಂತರ ಅವರಲ್ಲಿದ್ದ ಸಾಮಾಜಿಕ ಸೇವೆ ಬಡವರಿಗೆ ಉಚಿತ ವೈದ್ಯಕೀಯ ನೆರವು ಹಾಗೂ ಜನರಲ್ಲಿ ಅಧ್ಯಾತ್ಮಿಕ ಚಿಂತನೆಯನ್ನು ಬೆಳಗುವ ಮಹೋದ್ಧೇಶದಿಂದ ಉತ್ತರ ಕರ್ನಾಟಕ ಭಾಗದ ಅನೇಕ ಕಡೆ ಸಂಚರಿಸಿ, ಉಚಿತ ವೈದ್ಯಕೀಯ ಸೇವೆಯನ್ನು ಮಾಡುತ್ತಾ ಮುದೇನೂರಿನಲ್ಲಿ ಬಂದು ಶ್ರೀ.ಉಮಾಚಂದ್ರಮೌಳೇಶ್ವರ ದೇವಸ್ಥಾನವನ್ನು ಸ್ಥಾಪಿಸಿ, ಪೂಜಾನುಷ್ಠಾನರಾಗಿ ಈ ಭಾಗದ ಗ್ರಾಮೀಣ ಜನರಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಭಕ್ತಿ ಮಾರ್ಗಗಳನ್ನು ಭೋದಿಸಿ ನುಡಿದಂತೆ ನಡೆಯುವ ಶರಣರಾಗಿ ಪರಮಪೂಜ್ಯರಾಗಿ ಭಕ್ತರ ಹೃದಯದಲ್ಲಿ ನೆಲೆಯೂರಿ ನಿಂತ ಶ್ರೀ. ವಿಜಯ ಚಂದ್ರಶೇಖರ ಶಿವಯೋಗಿಗಳಾಗಿ ಭಕ್ತರಲ್ಲಿ ಗುರುತಿಸಿಕೊಂಡಿದ್ದಾರೆ. ಪರಮಪೂಜ್ಯರು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಿಜಾಮನ ಆಡಳಿತ ಸಂದರ್ಭದಲ್ಲಿ ಮುದೇನೂರಿನ ಶ್ರೀ ಮಠದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಸ್ವಾತಂತ್ರದ ಕಿಚ್ಚನ್ನು  ಜನರಲ್ಲಿ ಮೂಡಿಸಿದ ಶ್ರೇಯಸ್ಸು ಪರಮಪೂಜ್ಯರದು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನುಡಿದಂತೆ ನಡೆದ ಶರಣರು ಹಾಗೂ ಈ ಅಜ್ಜನವರು ನಡೆದಾಡುವ ದೇವರೆಂದೇ ಪ್ರಸಿದ್ದಿಯನ್ನು ಪಡೆದು ವಾಕ್‌ಸಿದ್ದಿಯನ್ನು ಪಡೆದ ಮಹಾಮಹಿಮರಾಗಿದ್ದಾರೆ. ಮುದೇನೂರಿನ ಶ್ರೀಮಠದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರೆ ಒಂದು ದಿನ ಸರ್ವ ಧರ್ಮ ಜನರಿಗಾಗಿ ಜಾತಿ, ಮತ, ಪಂತವನ್ನು ಬದಿಗೊತ್ತಿ, ಎಲ್ಲಾ ಸಮುದಾಯದವರನ್ನು ಒಳಗೊಂಡ ಜಾತ್ರಾ ಮಹೋತ್ಸವ ಒಂದು ದಿನ, ಎರಡನೇಯ ದಿನ ಮಹಿಳೆಯರಿಗಾಗಿ ವಿಶೇಷವಾದಂತಹ ಜಾತ್ರೆ ಇದ್ದು, ಎಲ್ಲಾ ಮಹಿಳೆಯರಿಂದಲೇ ಆ ಜಾತ್ರಾ ಕಾರ್ಯಕ್ರಮಗಳಂದು ನಡೆಯುವುದೊಂದು  ವಿಶೇಷ ಅಜ್ಜನವರು ದೂರದೃಷ್ಟಿಯಿಂದ ಮಹಿಳಾ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆಯೆಂದರೆ ತಪ್ಪಾಗಲಾರದು. ಮೂರನೇಯ ದಿನ ಕೇವಲ ಮಕ್ಕಳಿಗಾಗಿ ಜಾತ್ರೆ ಇದ್ದು, ಮಕ್ಕಳೇ ತೇರನ್ನು ಎಳೆಯುವುದಲ್ಲದೇ, ಎಲ್ಲ ಉಸ್ತುವಾರಿಯನ್ನು ಮಕ್ಕಳೇ ಮಾಡುವುದು ಒಂದು ವಿಶೇಷ. ಇಂತಹ ವಿಶಿಷ್ಟವಾದ ಅಜ್ಜನ ಜಾತ್ರೆ ದಿನಾಂಕ 3, 4 ಮತ್ತು 5 ನೇ ಮಾರ್ಚ್ 2022 ರಂದು ಮುದೇನೂರಿನಲ್ಲಿ ಜರುಗಲಿದ್ದು, ಶ್ರೀವರದ ಉಮಾಚಂದ್ರಮೌಳೇಶ್ವರ ಈ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಚಂದ್ರಶೇಖರ ಅಜ್ಜನ ಕೃಪೆಗೆ ಪಾತ್ರರಾಗಬೇಕು. ಪರಮಪೂಜ್ಯ ಡಾ॥ ಚಂದ್ರಶೇಖರ ಸ್ವಾಮಿಜಿಯವರು ಸುಮಾರು 10-12 ವೈದ್ಯಕೀಯ ಹಾಗೂ ಅಧ್ಯಾತ್ಮಿಕ ಪುಸ್ತಕಗಳನ್ನು ಬರೆದು ಭಕ್ತರಿಗೆ ಎಲ್ಲೆಲ್ಲಿ ಆಶೀರ್ವದಿಸಿದ್ದಾರೆ ಅಂತಹ ಭಕ್ತರ ಹೃದಯದಲ್ಲಿ ಇಂದಿಗೂ ಪೂಜ್ಯರು ಶಾಶ್ವತವಾಗಿ ನೆಲೆಗೊಂಡಿರುತ್ತಾರೆ. ಇಂತಹ ಪೂಜ್ಯರು ಕುಷ್ಟಗಿ ತಾಲ್ಲೂಕಿನ, ಎಲ್ಲಾ ಗ್ರಾಮಗಳ ಮನೆಗಳಲ್ಲೂ ಪೂಜ್ಯರ ಭಾವಚಿತ್ರವಿರುವುದನ್ನು ಕಾಣುತ್ತೇವೆ. ಇಂತಹ ಮಹಾಮಹಿಮರು ಪ್ರಾರಂಭಿಸಿದ ಜಾತ್ರೆ ಮುದೇನೂರಿನ ಸಮಸ್ತ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಅಜ್ಜನವರ ತತ್ವ, ಆದರ್ಶಗಳು ಮತ್ತು ಅವರ ಸಂದೇಶಗಳು ಇಡೀ ಜಿಲ್ಲೆಯ ಜನತೆಗೆ ಮುಟ್ಟಬೇಕಾಗಿದೆ. ಅವರ ಕುರಿತಾದ ಸಾಹಿತ್ಯಕ ಪುಸ್ತಕಗಳು ಮತ್ತು ಉಪನ್ಯಾಸಕ ಮಾಲಿಕೆಗಳು ಏರ್ಪಟ್ಟು ಅನುದಿನವು ಅಜ್ಜನನ್ನು ನೆನೆಯೋಣಾ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳೋಣಾ !! ವಿಶೇಷ ಲೇಖನ ಇವರಿಂದ :-ಬಿ. ಎಸ್. ಪಾಟೀಲ್ ಸರ್ಕಾರಿ ಅಭಿಯೋಜಕರು, ಬೆಂಗಳೂರು,

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *