ಹೊಸ ವೇತನ ಒಪ್ಪಂದದ ಮೂಲಕ ವೇತನ-ಸಾಮಾಜಿಕ ಸೌಲಭ್ಯ ಭತ್ತೆಗಳನ್ನು ಹೆಚ್ಚಿಸಲು ಒತ್ತಾಯಿಸಿ ಜನವರಿ ೧೦ ರಂದು ಧಾರವಾಡ ಟಾಟಾ ಕಾರ್ಮಿಕರ ಹೋರಾಟ-TUCI.

Spread the love

ಹೊಸ ವೇತನ ಒಪ್ಪಂದದ ಮೂಲಕ ವೇತನಸಾಮಾಜಿಕ ಸೌಲಭ್ಯ ಭತ್ತೆಗಳನ್ನು ಹೆಚ್ಚಿಸಲು ಒತ್ತಾಯಿಸಿ ಜನವರಿ ೧೦ ರಂದು ಧಾರವಾಡ ಟಾಟಾ ಕಾರ್ಮಿಕರ ಹೋರಾಟ-TUCI.

ಹಳೆಯ ವೇತನ ಒಪ್ಪಂದ ಮುಗಿದು ೨೧ ತಿಂಗಳುಗಳು ಗತಿಸಿವೆ. ಹೊಸ ವೇತನ ಒಪ್ಪಂದಕ್ಕಾಗಿ ಟಾಟಾ ಕಾರ್ಮಿಕರು ೨೦-೧-೨೦೨೦ ರಂದು ಸಲ್ಲಿಸಿದ ‘ಬೇಡಿಕೆ ಪತ್ರ’ಕ್ಕೆ ಒಂದು ವರ್ಷದ ನಂತರ ಟಾಟಾ ಆಡಳಿತ ವರ್ಗ ಪ್ರತಿ ಬೇಡಿಕೆ ಪಟ್ಟಿ ಸಲ್ಲಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಸರಾಸರಿ ೭೫ ಸುತ್ತಿನ ದ್ವಿತಿಯ ಪಕ್ಷೀಯ ಮಾತುಕತೆಗಳು ನಡೆದಿವೆ. ಇಷ್ಟಾದರು ಟಾಟಾ ಆಡಳಿತ ವರ್ಗ ಹೊಸ ವೇತನ ಒಪ್ಪಂದವನ್ನು ಕಾರ್ಮಿಕರ ಕಾನೂನು ಹಾಗೂ ಕಂಪನಿಯ ಉತ್ಪತ್ತಿ ಮತ್ತು ಲಾಭಾಂಶ ಆಧರಿಸಿ ಇಲ್ಲಿನ ಕಾರ್ಮಿಕರ ವೇತನ ಹೆಚ್ಚಳಕ್ಕೆ ಮುಂದೆ ಬರುತ್ತಿಲ್ಲ. ಆದ್ದರಿಂದ, ಆಡಳಿತ ವರ್ಗದ ಈ ಕಾರ್ಮಿಕ ವಿರೋಧಿ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಮುಂದುವರೆದು, ಈ ಕೂಡಲೇ ದ್ವಿಪಕ್ಷೀಯ ಮಾತುಕತೆಯ ಮೂಲಕ ಕಾರ್ಮಿಕರ ವೇತನ ಸಾಮಾಜಿಕ ಸೌಕರ್ಯ ಭತ್ತೆಗಳು ಮತ್ತು ಸುರಕ್ಷಾ ಕ್ರಮಗಳನ್ನು ಹೆಚ್ಚಿಸಲು ತ್ವರಿತ ಗತಿಯಲ್ಲಿ ಮುಂದೆ ಬರಬೇಕೆಂದು ಒತ್ತಾಯಿಸಿ ದಿ: ೧೦-೦೧-೨೦೨೨ ಮದ್ಯಾಹ್ನ ೩ ಗಂಟೆಯಿAದ ೧೧-೧-೨೦೨೨ ಮದ್ಯಾಹ್ನ ೩ ಗಂಟೆ ವರೆಗೆ ೨೪ ಗಂಟೆಗಳ ಹಗಲು ರಾತ್ರಿ ಪ್ರತಿಭಟನೆ ಧರಣಿಯನ್ನು ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸಲು ಟಾಟಾ ಮಾರ್ಕೊಪೋಲ ಕ್ರಾಂತಿಕಾರಿ ಕಾರ್ಮಿಕ ಸಂಘ(ಟಿಯುಸಿಐ) ನಿರ್ಧರಿಸಿದೆ. ಈ ಪ್ರತಿಭಟನಾ ಧರಣಿಯಲ್ಲಿ ಕಾರ್ಮಿಕರೊಂದಿಗೆ, ಅವರ ಹೆಂಡರು ಮಕ್ಕಳು ಹಾಗೂ ಹಿತೈಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವರಿಗೆ ಹೋರಾಟದ ಒತ್ತಾಯ ಪತ್ರ ಸಲ್ಲಿಸಲಿದ್ದೇವೆ. ಉತ್ಪತ್ತಿಯ ಸ್ಥಿತಿಗತಿ ಹಾಗೂ ಕಾರ್ಮಿಕರ ವೇತನ ಟಾಟಾ-ಮಾರ್ಕೊಪೋಲೊ ಬಸ್ಸುಗಳ ಬಾಡಿ ನಿರ್ಮಾಣ ಕಾರ್ಖಾನೆಯಲ್ಲಿ ೧೨೦೦ಕ್ಕೂ ಹೆಚ್ಚು ಕಾಯಂ ಕಾರ್ಮಿಕರಿದ್ದು, ಇವರ ಪೈಕಿ ಬಹುತೇಕರು ಇದೇ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಭೂ ಸಂತ್ರಸ್ಥರಾಗಿದ್ದಾರೆ. ೨೦೦೮ ರಿಂದ ೨೦೧೬ರ ವರೆಗೆ ಕೇವಲ ೧೦-೧೨ ಸಾವಿರ ಸಂಬಳ ಪಡೆದು ಕಂಪನಿಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ೨೦೧೬ ರಲ್ಲಿ ಹಲವಾರು ಸುತ್ತಿನ ಹೋರಾಟದ ನಂತರ ಕಾರ್ಮಿಕರ ಗ್ರೇಡ್ ೧ ಹುದ್ದೆಗೆ ೨೩೦೦೦ರೂ. ಗ್ರೇಡ್೨ ಹುದ್ದೆಗೆ ೨೨೦೦೦ರೂ. ಗ್ರೇಡ್೩ ಹುದ್ದೆಗೆ ೨೦೦೦೦ರೂ. ಹಾಗೂ ಗ್ರೇಡ್೪ ಹುದ್ದೆಗೆ ಕೇವಲ ೧೯೦೦೦ರೂ. ಪಾವತಿಸಲು ಮುಂದೆ ಬಂದ ಕಂಪನಿಯು ಕಳೆದ ೫ ವರ್ಷಗಳಿಂದ ಇದೇ ಸಂದರ್ಭದಲ್ಲಿ ಕಾರ್ಮಿಕರನ್ನು ದುಡಿಸುತ್ತಿದೆ. ಕಳೆದ ೧೩ ವರ್ಷಗಳಲ್ಲಿ ೧ ಲಕ್ಷ ೩೦ ಸಾವಿರ ಬಸ್‌ಗಳನ್ನು ತಯಾರಿಸಿ ರಸ್ತೆಯ ಮೇಲೆ ರಾರಾಜಿಸುವಂತೆ ಮಾಡಿದ ಹಿರಿಮೆ ಕಾರ್ಮಿಕರದ್ದಾಗಿದೆ. ಕಳೆದ ಕೋವಿಡ್ ಅವಧಿಯಲ್ಲೂ ಉತ್ಪಾದನೆ ನಿಲ್ಲಿಸದೆ ರಕ್ಷಣಾ ಇಲಾಖೆಯ ಅಂಬುಲೆನ್ಸ್, ಕಸ ವಿಲೆವಾರಿ ವಾಹನ ಸಮೇತ ಅತೀ ಹೆಚ್ಚಿನ ಉತ್ಪಾದನೆಗೆ ಇಲ್ಲಿನ ಕಾರ್ಮಿಕರು ಪಾತ್ರರಾಗಿದ್ದಾರೆ. ಆದರೆ, ಇವರ ವೇತನ ಹಾಗೂ ಭತ್ತೆಗಳು ಮಾತ್ರ ಹೆಚ್ಚಾಗಿಲ್ಲ. ಕಂಪನಿ ಮೂಲಗಳ ಪ್ರಕಾರ, ಏಷಿಯಾ ಖಂಡದಲ್ಲಿಯೆ ನಂಬರ್ ಒನ್ ಬಸ್ ಬಿಲ್ಡರ್ ಎಂಬ ಖ್ಯಾತಿಯ ಜೊತೆ ಮಾರಾಟದಲ್ಲಿ ಹೊಸ ಮೈಲುಗಲ್ಲು ಎಂದು ಕಂಪನಿಯ ಉತ್ಪಾದನೆಯ ಗುಣ-ಪ್ರಮಾಣವನ್ನು ಬಣ್ಣಿಸಿದೆ. ಕಂಪನಿಯ ಪ್ರಕಾರ ೨೦೨೦ರಲ್ಲಿ ೩೪.೯೯%(೧೭೭೨೦ ಬಸ್ಸುಗಳು) ರಷ್ಟು ಹೆಚ್ಚಾಗಿದ್ದು ಉತ್ಪಾದನೆಯು, ೨೦೨೧ ನವೆಂಬರ್ ಹೊತ್ತಿಗೆ ೪೩.೭೯%(೨೫೧೩೨ ಬಸ್ಸುಗಳು) ರಷ್ಟು ಏರಿಕೆಯಾಗಿದೆ. ಅಂದರೆ, ಉತ್ಪತ್ತಿ ಹಾಗೂ ಲಾಭಾಂಶ ತಾರಕಕ್ಕೇರಿದೆ, ಉತ್ಪಾದಕರಾದ ಇಲ್ಲಿನ ಕಾರ್ಮಿಕರ ವೇತನ ಪಾತಾಳದಲ್ಲಿದೆ. ತಿಂಗಳ ಪೂರ್ತಿ ದುಡಿದರೂ ಸರಾಸರಿ ೨೦೦೦೦ ಸಂಬಳ ಕೊಡಲಾಗುತ್ತದೆ. ಉತ್ಪಾದನಾ ಪ್ರೋತ್ಸಾಹ ಧನವಂತು ಇಲ್ಲವೇ ಇಲ್ಲ. ಕೋವಿಡ್ ಅವಧಿಯ ಉತ್ಪಾದನೆಗೆ ಯಾವುದೇ ಹೆಚ್ಚಿನ ಸಂಭಾವನೆ ಇಲ್ಲ. ಅಧಿಕಾರಿಗಳು ಮಾತ್ರ ತಮ್ಮ ಸಂಬಳವನ್ನು ಹಾಲಿ ಸಂಬಳದ ಮೇಲೆ ೩೫೦೦೦ ದಿಂದ ೫೦೦೦೦ರೂ. ಗೆ ಹೆಚ್ಚಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಇಲ್ಲಿನ ಕ್ಯಾಂಟಿನ್‌ನಲ್ಲಿ ಸಿಗುವ ಆಹಾರ ಪದಾರ್ಥವು ಜೈಲುಗಳಲ್ಲಿ ಸಿಗುವ ಆಹಾರ ಪದಾರ್ಥಕ್ಕಿಂತ ಕಡಿಮೆ ಗುಣಮಟ್ಟ ಹೊಂದಿದೆ. ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಕಾರ್ಮಿಕ ಸಂಘ ಕಟ್ಟಿದರೆಂಬ ಕಾರಣಕ್ಕೆ ವಜಾಗೊಳಿಸಲ್ಪಟ್ಟ ಇನ್ನುಳಿದ ೭ ಜನ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂಬ ನ್ಯಾಯಾಲಯದ ಆದೇಶವಿದ್ದರೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಲವು ನೆಪ ಒಡ್ಡಿ ಮತ್ತೆ ೪ಜನ ಕಾರ್ಮಿಕರನ್ನು ವಜಾಗೊಳಸಲಾಗಿದೆ. ಇದುವರೆಗೆ ಈ ಕಾರ್ಮಿಕರಿಗೆ ತಲಾ ಒಂದು ಮಾಸ್ಕ್ ಗಳನ್ನು ಕಂಪನಿ ಒದಗಿಸಿದೆ. ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ೨ ದಿನ ಅಮಾನತ್ತು ಮಾಡಿ ತಲಾ ೧೩೦೦ರೂ. ದಂಡದ ಹಣ ವಸೂಲಿ ಮಾಡಲಾಗಿದೆ. ಕೈತೋರಿಸಿ ಕೆಲಸ ಮಾಡಿಸುವ ಕಂಪನಿಯ ಅಧಿಕಾರಿಗಳು ಸಂಬಳ ಹಾಗೂ ಸೌಲಭ್ಯ ಕೊಡುವಾಗ ಕಾಲಿನಿಂದ ಒದೆಯುತ್ತಾರೆ. ಮಾತು ಮಾತಿಗೂ ಕಂಪನಿ ಮುಚ್ಚುವ ಬೆದರಿಕೆ ಹಾಕುತ್ತಾರೆ. ಹಾಗಾಗಿ, ಕಂಪನಿ ಆಡಳಿತ ಮಂಡಳಿಯ ಈ ಕಾನೂನ ಬಾಹೀರ ನಡುವಳಿಕೆಯ ವಿರುದ್ದ ಹಾಗೂ ಹೊಸ ವೇತನ ಒಪ್ಪಂದದ(ದ್ವಿಪಕ್ಷೀಯ) ಮೂಲಕ ವೇತನ ಹೆಚ್ಚಳ, ಸಾಮಾಜಿಕ ಸೌಲಭ್ಯಗಳ ಹೆಚ್ಚಳ, ಶಾಸನಬದ್ದ ಸೌಕರ್ಯಗಳ ಖಾತ್ರಿ ಹಾಗೂ ವಜಾಗೊಂಡ ಕಾರ್ಮಿಕ ಮುಂದಾಳುಗಳು ಹಾಗೂ ಕಾರ್ಮಿಕರಿಗೆ ಪುನಾ: ಕೆಲಸಕ್ಕೆ ಒತ್ತಾಯಿಸಿ ಜನವರಿ ೧೦ ರಂದು ಹೋರಾಟಕ್ಕೆ ಕರೆ ನೀಡಲಾಗಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಉಳಿದೆಲ್ಲ ಕಾರ್ಮಿಕರ ಹಾಗೂ ಜನಪರ ಶಕ್ತಿಗಳ ಬೆಂಬಲದೊAದಿಗೆ ಹಂತ ಹಂತದ ತೀವ್ರ ಹೋರಾಟಕ್ಕೆ ಸಿದ್ದರಾಗಿದ್ದೇವೆಂದು ಈ ಮೂಲಕ ಪ್ರಕಟಿಸಲಾಗಿದೆ. ಆರ್.ಮಾನಸಯ್ಯ ರಾಜ್ಯಾಧ್ಯಕ್ಷರು (ಟಿಯುಸಿಐ) ಕೆ.ಬಿ.ಗೋನಾಳ ರಾಜ್ಯ ಉಪಾಧ್ಯಕ್ಷರು (ಟಿಯುಸಿಐ) ಮಲ್ಲಿಕಾರ್ಜುನ ಮರತಮ್ಮನವರ್ ಅಧ್ಯಕ್ಷರು, ಟಾಟಾ ಮಾರ್ಕೊಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘ-ಧಾರವಾಡ.  

ವರದಿ  – ಉಪ-ಸಂಪಾದಕೀಯ

Leave a Reply

Your email address will not be published. Required fields are marked *