ಸಾಕ್ಷ್ಯಚಿತ್ರ  “ಅಂಡಮಾನ ಸೆರೆಮನೆಯಲ್ಲಿ  ನರಗುಂದ ಸಿಪಾಯಿಗಳು” 

Spread the love

ಸಾಕ್ಷ್ಯಚಿತ್ರ  “ಅಂಡಮಾನ ಸೆರೆಮನೆಯಲ್ಲಿ  ನರಗುಂದ ಸಿಪಾಯಿಗಳು” 

ಗದಗ : ನರಗುಂದ ಬಂಡಾಯದ ನೆಲವೆಂದು ಇತಿಹಾಸದ ಪುಟಗಳಲ್ಲಿಯೇ ಉಲ್ಲೇಖವಾಗಿದೆ. ನರಗುಂದ ಸಂಸ್ಥಾನದ ಪ್ರಭು ಬ್ರಿಟಿಷರ ವಿರುದ್ಧ ಹೋರಾಡಿದ ಉತ್ತರ ಕರ್ನಾಟಕದ  ವೀರ  ಬಾಬಾಸಾಹೇಬ್ ಎಂದೇ ಜನಪ್ರಿಯರಾಗಿದ್ದರು. ಬ್ರಿಟಿಷರ್ ವಿರುದ್ಧ ಹೋರಾಡಿದ ಆ ದಿನಗಳನ್ನು ಮರೆಯಲಾಗದು. ಇತ್ತೀಚಿನ ದಿನಗಳಲ್ಲಿ ರೈತರ ಬಂಡಾಯವೂ ಸಹ ಸರಕಾರವನ್ನು ಅಲುಗಾಡಿಸಿತು. ಇಂತಹ ನಾಡಿನ ಇತಿಹಾಸ ಜನಮಾನಸದಲ್ಲಿ ಎಂದೆಂದೂ ಅಚ್ಚಳಿಯದೇ ಉಳಿದಿದೆ, ಉಳಿಯುತ್ತದೆ. ಇಂತಹ ಇನ್ನೊಂದು ಘಟನೆಯು ಇತಿಹಾಸದ ಪುಟಗಳಲ್ಲಿ ಸೇರಿದ್ದು ಹಲವು ಜನರಿಗೆ ತಿಳಿದಿಲ್ಲ. ತಿಳಿದವರೂ ಹೇಳಿರಲಿಕ್ಕಿಲ್ಲ.ಬ್ರಿಟಿಷರು ಅಂಡಮಾನ ಸೆರೆಮನೆಯಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸುತ್ತಿದ್ದ ಬಗ್ಗೆ ತಿಳಿದ ವಿಷಯ. ಈ ಕುರಿತು ಇತಿಹಾಸವನ್ನು ಅವಲೋಕಿಸುತ್ತ ಹೋದಾಗ ಅದೇ ರೀತಿ ಅಲ್ಲಿ ಬಂಧಿತರಾಗಿದ್ದ ಸಾವಿರಾರು ಹೋರಾಟಗಾರರ ಮಾಹಿತಿ ಕೆದಕುತ್ತ ಹೋದಾಗ ಉತ್ತರ ಭಾರತದ ಹೋರಾಟಗಾರರು ಹೆಚ್ಚಿಗೆ ಸಿಗುತ್ತಾರೆ. ಹಾಗಿದ್ದರೆ ದಕ್ಷಿಣ ಭಾರತದ ಹೋರಾಟಗಾರರು ಕಡಿಮೆ ಇದ್ದರೆ ಅಥವಾ ಅವರ ಮಾಹಿತಿ ಏನು ಎಂಬುದನ್ನು ತಿಳಿಯುತ್ತ ಹೋದಾಗ ನರಗುಂದ ನೆಲದ ೩೨ ಜನರು ಅಂಡಮಾನ ಜೈಲಿನಲ್ಲಿ ಹಾಕಿದ್ದ ವಿವರ ಸಿಗುತ್ತದೆ. ಬಾಬಾಸಾಹೇಬರು ದತ್ತು ಪುತ್ರ ಪಡೆಯುವ ಕುರಿತು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಇದರಲ್ಲಿ ನರಗುಂದದ ಹಲವು ಸೈನಿಕರು ಹೋರಾಟಕ್ಕೆ ಇಳಿದರು. ಅದರಲ್ಲಿ ಕೆಲವರನ್ನು ಹಿಡಿದು ಅಂಡಮಾನ ಜೈಲಿನಲ್ಲಿ ಇರಿಸಿದ್ದು ಬೆಳಕಿಗೆ ಬರುತ್ತದೆ. ಆದರೆ ಇವರ ಮಾಹಿತಿ ನರಗುಂದದಲ್ಲೇ ಕಾಣುತ್ತಿಲ್ಲ. ಇವರ ವಾರಸುದಾರರು ಯಾರು? ಇವರ ಹೋರಾಟದ ಕುರಿತು ಬೆಳಕು ಬೀರುವ ಕೆಲಸ ಆಗಬೇಕಿದೆ. ಹಲವಷ್ಟು ವಿಷಯಗಳ ಸಂಗ್ರಹದ ಮೇಲೆ “ಅಂಡಮಾನ ಸೆರೆಮನೆಯಲ್ಲಿ  ನರಗುಂದ ಸಿಪಾಯಿಗಳು’  ಎಂಬ ಸಾಕ್ಷ್ಯಚಿತ್ರ ಚಿತ್ರವನ್ನು ಬರಗಾಲ, ಬಿಳಿಮಚ್ಚೆ, ೬/೩ ಚಲನಚಿತ್ರಗಳ ನಿರ್ದೇಶಕ ಆರ್.ಮಹಾಂತೇಶ ಅವರು ನಿರ್ದೇಶನ ಜೊತೆಗೆ ಸಂಕಲನವನ್ನು ಅಚ್ಚುಕಟ್ಟಾಗಿ ಮಾಡಿ ೨೨ ನಿಮಿಷಗಳ ಸಾಕ್ಷ್ಯಚಿತ್ರ ಸಂಕಲನವನ್ನು ಹೊರ ತಂದಿದ್ದಿದ್ದಾರೆ. ಎ ಎಸ್ ಬಿ ಸ್ಮಾರಕ ಪ್ರತಿಷ್ಠಾನ (ರಿ) ದವರು ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಕಥೆಯನ್ನು ಆಗುಂಬೆ ಎಸ್ ನಟರಾಜ್ ಅವರು ಬರೆದ ‘’ಲಂಡನ್ ದಿಂದ ಅಂಡಮಾನ್ ಗೆ “ ಪುಸ್ತಕದ ಆಧಾರದಿಂದ ಚಿತ್ರೀಕರಿಸಲಾಗಿದೆ. ಇದರ ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರು ನಿರ್ವಹಿಸಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ಅಂಡಮಾನಿನ ಜೈಲಿನ ಸೆರೆಯಲ್ಲಿದ್ದ  ನರಗುಂದದ ಸೀಪಾಯಿಗಳಾದ  ಅಯ್ಯಪ್ಪ ಹಿಂದುಲ್ಲಾ ಶಿರೋಳಿ, ಬಡೆಮಿಯಾ ಬಿನ್ ಅಮೀನ್ ಸಾಹೇಬ್, ಬಾಳಾ ಸೋಮಾಪುರ, ವೆಂಕಟರಾವ್ ಭೋಸ್ ಶಿಲೇದಾರ, ಪೀರ್ ಸಾಬ್ ಬುಡ್ನಾಯ ಸೋಮಾಪುರ, ಫಕೀರ ಲಿಂಗಪ್ಪ, ಫಕ್ರು ತಹಸೀಲ್ದಾರ, ಫರಾಸ್ ಖಾನ್ ಇಮಾಮ್ ಖಾನ್, ಹನುಮಂತ ಘಾಟ್ಗೆ, ಭಕ್ತಾಜಿ ಗಣೇಶ ಗೋಕಲೆ, ಹತೇಲಾ ಹುಸೈನ್, ಕೃಷ್ಣಾಜಿ ಜೋಶಿ ಮಾಮಲೇದಾರ್, ಕಾಳಪ್ಪ ಹುಲಿಗೆಪ್ಪ, ಲಿಂಗಪ್ಪ ಸಕ್ರಪ್ಪ   ಸೇಟ್‌ಸಂಧಿ, ತಿಮ್ಮಪ್ಪ ಮಜುಮದಾರ್ ಅಲಿಯಾಸ್ ರಂಗಪ್ಪ- ಕಾರಕೂನ, ನರಸಿಂಗ ಮಾನೆ-ಸೇಟ್‌ಸಂಧಿ, ನರಸೀಲಿಂಗ್, ನರಸಿಂಗ್ ಶಿವಪ್ಪ -ಸೇಟ್‌ಸಂಧಿ, ವ್ಯೆಂಕ ಪವರ್-ಕಿಲ್ಲೇದಾರ್,ರಾಜ ಮೀರಾ   ರಾಜ ವೆಂಕಟೇಶ ಸೇಟಸಂಧಿ, ಶೇಷಗುರುರಾವ್ , ಭೀಮರುದ್ರಪ್ಪ, ಗೌರಪ್ಪ ಸಕ್ರಪ್ಪ ಸೇಟ್ ಸಂಧಿ, ಶಿವಪ್ಪ ಸಂಗಪ್ಪ ಸೇಟಸಂಧಿ,ಸುಲ್ತಾನ್ ಫರಾಸ್, ತಮ್ಮಣ್ಣ ಲಕ್ಷ್ಮಣ-ಸೇಟ್ ಸಂಧಿ, ತುಕಾರಾಮ ಕೃಷ್ಣಾಜಿ, ಚಿನ್ನಾಜಿ ಯಾದವ್-ಸೇಟ್‌ಸಂಧಿ, ಗಂಗಾರಾಮ್ ವೀರಪ್ಪ-ಸೇಟ್‌ಸಂಧಿ  ಅವರ ೩೨ ಜನರ ಹೆಸರುಗಳು ಇಲ್ಲಿ ಉಲ್ಲೇಖಿತವಾಗಿವೆ. ಅಂಡಮಾನ ಸೆರೆಯಲ್ಲಿದ್ದು  ವೀರಮರಣ ಹೊಂದಿದ ಸೈನಿಕರ ನೆನಪಿಗೆ ನರಗುಂದದಲ್ಲಿ ಸ್ಮಾರಕವಾಗಬೇಕು. ಹೋರಾಟಗಾರರ ಬದುಕಿನ ಕುರಿತು ಇನ್ನಷ್ಟು ಬೆಳಕು ಬೀರುವ ಕಾರ್ಯ ಆಗಬೇಕು ಎಂಬುದು ಈ ಸಾಕ್ಷ್ಯ ಚಿತ್ರದ ಉದ್ದೇಶವಾಗಿದೆ.

ವರದಿ:ಡಾ.ಪ್ರಭು ಗಂಜಿಹಾಳ.ಮೊ:9448775346

Leave a Reply

Your email address will not be published. Required fields are marked *