ನಮ್ಮೂರಿಗೆ ಬಾರ್ ಬೇಡವೆಂದು, ಬಾರನ್ನೇ ಧ್ವಂಸ ಮಾಡಿದ ಮಹಿಳೆಯರು..!!

Spread the love

ಚಿಕ್ಕಮಗಳೂರು: ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಹತ್ತಾರು ಮಹಿಳೆಯರು ಬಾರ್​​ಗೆ ನುಗ್ಗಿ ಅಲ್ಲಿದ್ದ ಕುರ್ಚಿಗಳನ್ನು ಪುಡಿ, ಪುಡಿ ಮಾಡಿ ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ. ನಮ್ಮೂರಿಗೆ ಬಾರ್ ಬೇಡ ಅಂತ ಮುಸ್ಲಾಪುರ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಬಾರ್ ಓಪನ್ ವಿರುದ್ಧ ಹಳ್ಳಿ ಹೆಂಗಸರೆಲ್ಲಾ ಒಂದಾಗಿ ಗಾಡಿ ಮಾಡಿಕೊಂಡು ಬಂದು ಜಿಲ್ಲಾಧಿಕಾರಿಯವರಲ್ಲಿ, ನಮ್ಮೂರಿಗೆ ಬಾರ್ ಬೇಡ ಅಂತ ಮನವಿ ಮಾಡಿದ್ದರು. ಆದ್ರೆ, ಹಳ್ಳಿ ಹೆಂಗಸರ ಮಾತನ್ನು ಯಾರೂ ಕೇಳಲಿಲ್ಲ. ಈ ಮಧ್ಯೆಯೂ ಬಾರ್ ಓಪನ್ ಮಾಡಲು ಮಾಲೀಕ ಮುಂದಾದ ಹಿನ್ನೆಲೆ ಬಾರ್ ಓಪನ್ ಮಾಡದಂತೆ ಗ್ರಾಮ ಪಂಚಾಯತ್ ನೋಟಿಸ್ ನೀಡಿತ್ತು. ಪೊಲೀಸರು ಬಾರ್ ಓಪನ್ ಮಾಡುವಂತಿಲ್ಲ ಎಂದು ಸೂಚಿಸಿದ್ದರು. ಈ ಮಧ್ಯೆಯೂ ಕಳೆದ ನಾಲ್ಕೈದು ದಿನಗಳಿಂದ ಬಾರ್ ಓಪನ್ ಸಿದ್ಧತೆ ನಡೆದಿತ್ತು. ಬಾಗಿಲು ತೆಗೆಯದೆ ಬಂದವರಿಂದ ಹಣ ಪಡೆದುಕೊಂಡು ಎಣ್ಣೆ ನೀಡುತ್ತಿದ್ದರು. ಸದ್ಯದಲ್ಲೇ ಬಾರ್ ಓಪನ್‍ಗೆ ಮಾಲೀಕ ಕೂಡ ಸಿದ್ಧತೆ ನಡೆಸಿಕೊಂಡಿದ್ದರು. ಹಾಗಾಗಿ, ಹಳ್ಳಿ ಹೆಂಗಸರು ಬಾರ್‍ಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನ ಪುಡಿ, ಪುಡಿ ಮಾಡಿದ್ದಾರೆ. ಬಾರ್ ಆರಂಭದ ಬಗ್ಗೆ ಪ್ರಶ್ನಿಸಲು ಹೋದ ಮಹಿಳೆಯರ ಮೇಲೆ ಹಲ್ಲೆ ಕೂಡ ಮಾಡಿದ್ದರಂತೆ. ಅವರೇ ಹೊಡೆದು ಅವರೇ ಹೋಗಿ ದೂರು ನೀಡಿದ್ದರಂತೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದವರನ್ನು ಪೊಲೀಸರು ಏಕಾಏಕಿ ಜೀಪ್‍ನಲ್ಲಿ ತುಂಬಿಕೊಂಡು ಹೋಗಿದ್ದಾರೆಂದು ಸ್ಥಳಿಯರು ಆರೋಪಿಸಿದ್ದಾರೆ. ಬಾರ್ ವಿರುದ್ಧ ಮಹಿಳೆಯರು ರೆಬಲ್ ಆಗಿದ್ದು, ಗಂಡಂದಿರಿಗಾಗಿ, ಮಕ್ಕಳಿಗಾಗಿ, ಭವಿಷ್ಯಕ್ಕಾಗಿ ಬಾರ್ ಬೇಡ ಎಂದು ಉಗ್ರಸ್ವರೂಪ ತಾಳಿದ ಮಹಿಳೆಯರು ಬಾರ್ ಧ್ವಂಸ ಮಾಡಿ ಮತ್ತೆ ಓಪನ್ ಮಾಡಿದ್ರೆ ಬೆಂಕಿ ಇಡ್ತೀವಿ ಅಂತ ಎಚ್ಚರಿಸಿದ್ದಾರೆ. ನಮಗೆ ಯಾರೂ ಸಪೋರ್ಟ್ ಮಾಡುತ್ತಿಲ್ಲ. ಪೊಲೀಸರು, ರಾಜಕಾರಣಿಗಳು ಎಲ್ಲಾ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ನಮಗೆ ನ್ಯಾಯ ಕೊಡಿಸಿ ಅಂತ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *