ಐಪಿಎಸ್ ಅಧಿಕಾರಿ ಡಾ.ಎ.ಎನ್. ಪ್ರಕಾಶಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು..

Spread the love

ಐಪಿಎಸ್ ಅಧಿಕಾರಿ ಡಾ..ಎನ್. ಪ್ರಕಾಶಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು..

ಆತ್ಮೀಯ ಸ್ನೇಹಿತರೂ ದಕ್ಷ ಪೊಲೀಸ್ ಅಧಿಕಾರಿಯೂ ಆದ ಡಾ.ಎ.ಎನ್. ಪ್ರಕಾಶ್ ಗೌಡರ ಹಟ್ಟು ಹಬ್ಬ ಇಂದು. ಗ್ರಾಮೀಣ ನೆಲೆಯಿಂದ ಚಿಮ್ಮಿದ ಅವರು ಐಪಿಎಸ್ ಅಧಿಕಾರಿಯಾಗಿ ಬೆಳೆದ ಸಾಧನೆಯ ಯಶೋಗಾಥೆಯನ್ನು ನಿಮ್ಮ ಮುಂದಿಡುತ್ತಿರುವೆ. ಇದು ನಿಮ್ಮ ಓದಿನ ಪ್ರೀತಿಗಾಗಿ.   ‘ಇಂಗ್ಲಿಷ್ ಮಾಧ್ಯಮ’ ಎಂಬ ಭೂತ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಜನರ ಮೈಮನವ ಹೊಕ್ಕಿ, “ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಉದ್ಧಾರವಾಗುತ್ತಾರೆ, ಬುದ್ಧಿವಂತರಾಗುತ್ತಾರೆ, ದೊಡ್ಡ ಹುದ್ದೆಗೇರುತ್ತಾರೆ, ಸಾಧನೆ ಮಾಡುತ್ತಾರೆ, ಕೊನೆಗೊಂದು ದಿನ ಆಂಗ್ಲ ಮಾಧ್ಯಮದಲ್ಲಿಯೇ ಓದಿದ ಕಾರಣಕ್ಕೆ ಸತ್ತ ನಂತರ ನೇರ ಸ್ವರ್ಗರೋಹಣ ಮಾಡುತ್ತಾರೆ” ಎಂಬ ಹುಸಿ ಭ್ರಮೆಯಲ್ಲಿ ಬದುಕುತ್ತಿರುವ ಮನಸ್ಥಿತಿಗಳ ನಡುವೆ ಅಪ್ಪಟ ಗ್ರಾಮೀಣ ಪ್ರದೇಶದ ರೈತ ಕುಟುಂಬದ ಕುಡಿಯೊಂದು ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಅದೂ ಕನ್ನಡ ಮಾಧ್ಯಮದಲ್ಲಿ ಓದಿ ಐ.ಪಿ.ಎಸ್. ಅಧಿಕಾರಿಯಾಗಿ ಬೆಳೆದ ಅಚ್ಚರಿ ಪಯಣದ ಪರಿಯ ‘ಯಶೋಗಾಥೆ’ ಯೇ ರೋಮಾಂಚನಕಾರಿ ಮತ್ತು ಸ್ಫೂರ್ತಿದಾಯಕವಾದದ್ದು. ಯುವಜನರಿಗೆ ಪ್ರೇರಣೆ ಮತ್ತು ಮಾದರಿಯೂ ಆಗಬಲ್ಲ‌ ಗ್ರಾಮೀಣ ಪ್ರದೇಶದ ಅಖಂಡ ‘ಕನ್ನಡ ಪ್ರೇಮಿ’ ಪೊಲೀಸ್ ಅಧಿಕಾರಿಯೆಂದರೆ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆತ್ಮೀಯರಾದ ನಮ್ಮ ಡಾ. ಎ.ಎನ್. ಪ್ರಕಾಶ್ ಗೌಡರು ಎಂಬುದು ಅಭಿಮಾನದ ವಿಷಯ. ಮಂಡ್ಯ ನೆಲ ಸದಾ ಅಭಿಮಾನಿಸುವ ಸಾಂಸ್ಕೃತಿಕ ರಾಯಭಾರಿ ಮತ್ತು ಸೃಜನಶೀಲ ಮನೋಭಾವದ ಹಿರಿಯ ಪೊಲೀಸ್ ಅಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡರ ಹಾದಿಯಲ್ಲಿ ಸಾಗುತ್ತಿರುವ ಮಂಡ್ಯ ನೆಲದ ಮತ್ತೊಂದು ಪ್ರತಿಭೆ ಯಾಗಿರುವುದು ‘ಪ್ರಕಾಶ’ಮಾನವಾಗಿ ಬೆಳಗುತ್ತಿರುವ ಗೌಡರ ವಿಶೇಷತೆ.   ಹೌದು, ನಮ್ಮ ಯುವ ಕ್ರಿಯಾಶೀಲ ಐ.ಪಿ.ಎಸ್. ಅಧಿಕಾರಿ ಪ್ರಕಾಶ್ ಗೌಡರು ಕಾವೇರಿ ಹಿರಿಮೆಯ ಸಕ್ಕರೆ ಸೀಮೆಯ ಹಸಿರೊದ್ದ ನೆಲದೊಡಲಿನ ಮಂಡ್ಯದ  ಜೀವ ತಂತು. ಮದ್ದೂರು ತಾಲ್ಲೂಕಿನ ಆಲಬುಜನಹಳ್ಳಿ ಹುಟ್ಟೂರು. ಶ್ರೀ ನಿಂಗೇಗೌಡ ಮತ್ತು ಶ್ರೀಮತಿ ಕೆಂಪಮ್ಮ ಅವರ ಪುತ್ರರಾಗಿ ಕೃಷಿಕ ಕುಟುಂಬದಲ್ಲಿ ೧೯೭೭ ಅಕ್ಟೋಬರ್ ೧೩ ರಂದು ಜನನ. ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನ ವಾತ್ಸಲ್ಯದ ತುಂಬು ಕುಟುಂಬ. ಓದಿದ್ದೆಲ್ಲ ಕನ್ನಡ ಮಾಧ್ಯಮದಲ್ಲಿ. ಕಲಾ ವಿಭಾಗದ ವಿದ್ಯಾರ್ಥಿ ಎಂಬುದು ಗಮನಾರ್ಹ. ಹುಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ. ಕಾಳಮುದ್ದನದೊಡ್ಡಿಯ ಭಾರತೀ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ, ಪದವಿಪೂರ್ವ ಹಾಗೂ ಪದವಿ ಶಿಕ್ಷಣದ ವ್ಯಾಸಂಗ. ಬಳಿಕ ಸಾಂಸ್ಕೃತಿಕ ಮೈಸೂರಿನತ್ತ ಶೈಕ್ಷಣಿಕ ಪಯಣ. ವಿಶ್ವಕವಿ ಕುವೆಂಪು ಅವರ ಹೆಜ್ಜೆ ಗುರುತುಗಳಿರುವ ಮಾನಸ ಗಂಗೋತ್ರಿಯಲ್ಲಿನ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್. ಡಬ್ಲ್ಯೂ. ಸ್ನಾತಕೋತ್ತರ ಪದವಿ ಗಳಿಕೆ. ಈ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಶ್ರಮದ ತಯಾರಿ. ಅದರ ಪ್ರತಿಫಲವೆಂಬಂತೆ ಪರೀಕ್ಷೆ ಉತ್ತೀರ್ಣರಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆ. ೨೦೦೩ ರಿಂದ ೨೦೦೬ ರವರೆಗೆ ಪಿಎಸ್ಐ ಆಗಿ ಉತ್ಸಾಹದಿಂದ ಕರ್ತವ್ಯ ನಿರ್ವಣೆ.

ಓದುವ ಧ್ಯಾನಸ್ಥ ಗುಣ ಮತ್ತೂ ಉನ್ನತ ಅಧ್ಯಯನ ಮಾಡುವ ಹಂಬಲವನ್ನು ಪ್ರಕಾಶ್ ಗೌಡರಲ್ಲಿ ಬಿತ್ತಿತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಎಂ.ಎ. ಪದವಿ‌ ಪಡೆದರು. ಸರ್ಕಾರಿ ಉನ್ನತ ಹುದ್ದೆ ಅಲಂಕರಿಸುವ ಮಹತ್ವಾಕಾಂಕ್ಷೆ ಕಣ್ಣೊಳಗೆ ಹೆಮ್ಮರವಾಗುತ್ತಿತ್ತು. ಸುಮ್ಮನೆ ಕೂರಲಿಲ್ಲ. ಕಾಲಹರಣ ಮಾಡಲಿಲ್ಲ. ವ್ಯಾಸಂಗ ಮುಖಿಯಾದರು. ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ತಯಾರಿ ಮಾಡತೊಡಗಿದರು. ಶ್ರದ್ಧೆ, ಛಲ, ಪ್ರತಿಭೆ, ಪರಿಶ್ರಮ ಇದ್ದ ಮೇಲೆ ಯಶಸ್ಸು ಒಲಿಯದಿರದೆ? ಕೊನೆಗೂ ಗೌಡರು ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಹಗಲಿರುಳು ಒಂದೇ ಸಮನೆ ಕನಸಿದ ಹುದ್ದೆ ದೊರಕಿತು. ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ೨೦೦೫ ರಿಂದ ವೃತ್ತಿ ಬದುಕು ಆರಂಭವಾಯಿತು. ಚನ್ನಪಟ್ಟಣ, ಕೋಲಾರ, ಬೆಂಗಳೂರು, ಕುಣಿಗಲ್ ನಲ್ಲಿ ಡಿವೈಎಸ್ಪಿಯಾಗಿ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಸಿಪಿಯಾಗಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಜನಪರವಾಗಿ ಕರ್ತವ್ಯ ನಿರ್ವಹಣೆ. ೨೦೦೭ ರಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ. ಸುಸಂಸ್ಕೃತ ವ್ಯಕ್ತಿತ್ವದ ಪಿ.ಜೆ. ಶೋಭಾ ಅವರನ್ನು ಬಾಳ ಸಂಗಾತಿಯಾಗಿ ವರಿಸುವ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ಅಳಿಯರಾದರು. ಕು. ಮನ್ವಿ ಗೌಡ ಮತ್ತು ಕು. ಹೃತ್ವಿಗೌಡ  ಮಕ್ಕಳಿರುವ ಚಿಕ್ಕ ಚೊಕ್ಕ ಸಂಸಾರ.  “ಸ್ನಾತಕೋತ್ತರ ಪದವಿ ವ್ಯಾಸಂಗ ಮುಗಿಯಿತು, ಪೊಲೀಸ್ ಅಧಿಕಾರಿ ಹುದ್ದೆ ಸಿಕ್ಕಿತು, ಕೈ ತುಂಬಾ ಸಂಬಳ ಉಕ್ಕಿತು, ಮದುವೆ ಆಯಿತು” ಎಂದು ಪ್ರಕಾಶ್ ಗೌಡರು ಅಲ್ಲಿಗೆ ವಿರಮಿಸಲಿಲ್ಲ. ಅವರೊಳಗೊಬ್ಬ ಜ್ಞಾನದಾಹಿ ಸದಾ ಜಾಗೃತವಾಗಿದ್ದ. ಉನ್ನತ ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತಿದ್ದ. ಸಾಂಸಾರಿಕ ಮತ್ತು ವೃತ್ತಿ ಬದುಕಿನ ಜವಾಬ್ದಾರಿಗಳ ಚಾಕಚಕ್ಯತೆಯ ನಿರ್ವಹಣೆಯ ನಡುವೆಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿಗೆ ಸೇರಿದರು. ತುಂಬಾ ಆಸಕ್ತಿ ಹಾಗೂ ಬದ್ಧತೆಯಿಂದ ಸಂಶೋಧನಾ ನಿರತರಾದರು. ಪೊಲೀಸ್ ಇಲಾಖೆಯ ವಿಪರೀತ ವೃತ್ತಿ ಒತ್ತಡದ ನಡುವೆಯೂ ಪ್ರಾಧ್ಯಾಪಕಾರದ ಡಾ. ಶಿವಚಿತ್ತಪ್ಪ ಅವರ ಮಾರ್ಗದರ್ಶನದಲ್ಲಿ ‘ಗ್ರಾಮಾಭಿವೃದ್ಧಿ ಯಲ್ಲಿ ಪತ್ತಿನ ಸಹಕಾರ ಸಂಘಗಳ ಪಾತ್ರ ಮತ್ತು ಗಾಂಧೀಜಿಯವರ ಸಹಕಾರ ತತ್ವದ ಪ್ರಾಮುಖ್ಯತೆ – ಮಂಡ್ಯ ಜಿಲ್ಲೆ ಕುರಿತು ಒಂದು ಅಧ್ಯಯನ’ ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದು ಡಾ. ಎ.ಎನ್. ಪ್ರಕಾಶ್ ಗೌಡರಾದರು. ಈ ಪದವಿ ಗಳಿಸಿದ್ದು ಅವರ ಜೀವನೋತ್ಸಾಹ ಮತ್ತು ನಿರಂತರ ಕಲಿಯುವ ಮನೋಭಾವಕ್ಕೆ ಹಿಡಿದ ಕನ್ನಡಿ. ಇತರ ವೃತ್ತಿನಿರತರಾಗಿ ಆದರ್ಶ. ಪೊಲೀಸ್ ಅಧಿಕಾರಿಯಾಗಿ ವೃತ್ತಿ ಬದುಕು ಆರಂಭಿಸಿದಾಗಿನಿಂದಲೂ ಪ್ರಕಾಶ್ ಗೌಡರದ್ದು ‘ಜನಪರ’ವಾದ ಆಡಳಿತ. ಅದಕ್ಕೆ ಬಹುಬೇಗನೆ ‘ಜನಾನುರಾಗಿ’ಯಾದರು. ತಮ್ಮ ದಕ್ಷತೆ, ಕ್ರಿಯಾಶೀಲತೆ, ಸಂಯಮಶೀಲತೆ, ಚಾಕಚಕ್ಯತೆ, ಸಂಘಟನಾ ಚಾತುರ್ಯತೆ, ಶುದ್ಧತೆ, ಬದ್ಧತೆ, ನ್ಯಾಯ ಪರವಾದ ನಿಲುವು, ನೊಂದವರ ಪರವಾದ ಒಲವು, ಸಾರ್ವಜನಿಕ ಸ್ನೇಹಿ ಆಡಳಿತ, ಕನ್ನಡಾಭಿಮಾನ,  ಪರಿಣಾಮಕಾರಿಯಾಗಿ ಕಾನೂನು ಅನುಷ್ಠಾನ ಮಾಡುವ ಉಮೇದು…ಈ ಎಲ್ಲಾ ಕಾರಣಗಳಿಂದಾಗಿ ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿದರು. ಪಾತಕಿಗಳ ಹೆಡಮುರಿ ಕಟ್ಟಿದರು. ಕಾನೂನು ಬಾಹಿರ ಕೃತ್ಯಗಳ ನಿಯಂತ್ರಿಸಿದರು. ಕಾನೂನು ಸುವ್ಯವಸ್ಥೆಯ ನೆಲೆಗೊಳಿಸಿದರು. ಪರಿಣಾಮವಾಗಿ ೨೦೧೭ ರಲ್ಲಿ ಐ.ಪಿಎಸ್. ಹುದ್ದೆಗೆ ಪದನ್ನೋತಿ ಹೊಂದಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಎಸ್.ಪಿ. ಹಾಗೂ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಬಳಿಕ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿ ಸಾರ್ವಜನಿಕರ ಮನ್ನಣೆಗೆ ಪಾತ್ರರಾದರು. ಮೈಸೂರು ನಗರದ ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ಆಯಕ್ತರಾಗಿ ತಮ್ಮ ಚುರುಕು ಆಡಳಿತದ ಕಾರ್ಯ ಶೈಲಿಯಿಂದ ಗಮನಸೆಳೆದವರು. ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ಕೊರೋನ ಮಹಾಮಾರಿ ಹೊಸ್ತಿಲಲಿದ್ದ ಹೊತ್ತಿನಲ್ಲಿ ಅಧಿಕಾರ ಸ್ವೀಕರಿಸಿದ ಗೌಡರು, ಅದರ ನಿಯಂತ್ರಣದ ಹಿನ್ನೆಲೆಯಲ್ಲಿ ಹಗಲಿರುಳು ‘ಕೊರೋನ ವಾರಿಯಸ್’ ಆಗಿ ದುಡಿದ ರೀತಿ ಶ್ಲಾಘನೀಯ. ವಿಶ್ವವಿಖ್ಯಾತ ಮೈಸೂರು ನಗರದ ಜನತೆಯ ಹಿತ ಕಾಯುವಲ್ಲಿ ಅವರ ಪಾತ್ರ ಹಿರಿದಾದದ್ದು.

ಹಸನ್ಮುಖಿ, ಜೀವನ್ಮುಖಿ, ಸಮಾಜಮುಖಿಯಾಗಿರುವ ಪ್ರಕಾಶ್ ಗೌಡರು ವೃತ್ತಿ ಬದುಕಿನ ಜೊತೆ ಜೊತೆಗೆ ಹಲವು ಸಮಾಜ ಸೇವಾ ಕಾರ್ಯಗಳನ್ನೂ ಕೂಡ ಗೌಡರು ಸದ್ದಿಲ್ಲದೆ ಮಾಡುತ್ತಿರುವುದು ಗಮನಾರ್ಹ. ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾಂಕ್ಷಿಗಳಿಗೆ ನೆರವಾಗುತ್ತಿದ್ದಾರೆ. ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಜೊತೆಗೆ ಒಡನಾಟವಿಟ್ಟುಕೊಂಡು, ಅವುಗಳ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಸೃಜನಶೀಲ ಅಭಿರುಚಿಯನ್ನು ಬಿಂಬಿಸಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಪೊಲೀಸರಿಗೆ ಪ್ರತ್ಯೇಕ ವಸತಿ ಬಡಾವಣೆ ನಿರ್ಮಾಣ ಮಾಡುವ ಮೂಲಕ ಕಡಿಮೆ ದರದಲ್ಲಿ ನಿವೇಶನ ಕೊಡಿಸಲು ಶ್ರಮಿಸುತ್ತಿದ್ದಾರೆ. ನಡುವೆ ಕ್ರೀಡಾಸಕ್ತಿ ಮತ್ತು ಓದುವ ಹವ್ಯಾಸವ ಜತನವಾಗಿ ಕಾಯ್ದುಕೊಂಡಿರುವುದು ಹೆಗ್ಗಳಿಕೆಯ ಸಂಗತಿ. ಯಾವುದೇ ಇಸಂಗಳು ಇಲ್ಲದ ಸ್ನೇಹ ಜೀವಿ. ತವರು ನೆಲ ಮಂಡ್ಯದ ಕಡು ವ್ಯಾಮೋಹಿ.   ಡಾ. ಎ.ಎನ್. ಪ್ರಕಾಶ್ ಗೌಡರ ಸೇವಾ ಸಾಧನೆಯ ಗುರುತಿಸಿ ಬೆಂಗಳೂರಿನ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವಿಶ್ವ ಚೇತನ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಐ.ಪಿ.ಎಸ್. ಹುದ್ದೆಗೆ ಪದನ್ನೋತಿ ಹೊಂದಿದಾಗ ಮಂಡ್ಯ ಜಿಲ್ಲೆಯ ಅಭಿಮಾನಿಗಳೆಲ್ಲ ಒಗ್ಗೂಡಿ ‘ಬೃಹತ್ ತವರಿನ ಅಭಿನಂದನ ಸಮಾರಂಭ’ ಆಯೋಜಿಸಿ ಸನ್ಮಾನಿಸಿದೆ. ಹಲವಾರು ಸಂಘ – ಸಂಸ್ಥೆಗಳ ಮನ್ನಣೆಗೂ, ಅದಕ್ಕೂ ಮಿಗಿಲಾಗಿ ಜನರ ಪ್ರೀತಿ ಮತ್ತು ಗೌರವಕ್ಕೆ ನಿತ್ಯ ಪಾತ್ರರಾಗಿದ್ದಾರೆ. ಇಂತಹ ಕ್ರಿಯಾಶೀಲ ಮತ್ತು ದಕ್ಷ ಪೊಲೀಸ್ ಅಧಿಕಾರಿಯ ಹುಟ್ಟು ಹಬ್ಬ ಇಂದು. ಇವರ ಬದುಕು ಅನುಗಾಲವೂ ಹಸಿರಾಗಿರಲಿ.  ಹುಟ್ಟು ಹಬ್ಬದ ಶುಭಾಶಯಗಳು ಸರ್. ಸದಾ ಒಳಿತಾಗಲಿ…ಬದುಕು ಹಸಿರಾಗಿರಲಿ…🌱🌱🌱🌷🌷🌷

ಟಿ. ಸತೀಶ್ ಜವರೇಗೌಡ, ಮಂಡ್ಯ

Leave a Reply

Your email address will not be published. Required fields are marked *