ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯ ಹಾಗೂ ಈ ಹಬ್ಬದ ಕುರಿತು-ವಿಶೇಷ ಲೇಖನ….

Spread the love

ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯ ಹಾಗೂ ಈ ಹಬ್ಬದ ಕುರಿತು-ವಿಶೇಷ ಲೇಖನ….

‘ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ….. ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ ‘ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ ‘ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ಪ.ಬಂಗಾಳದಲ್ಲಿ ೯ ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಕೂರಿಸಿ, ಪೂಜಿಸಲಾಗುತ್ತದೆ. ವಿಜಯದಶಮಿಯ ದಿನ ಸುಮಂಗಲೆಯರು ಪರಸ್ಪರ ಮುಖಕ್ಕೆ ಸಿಂಧೂರವನ್ನು ಹಚ್ಚಿ, (ಸಿಂಧೂರ ಖೆಲ)ದೇವಿಯ ಹತ್ತಿರ ಆಶಿರ್ವಾದ ಬೇಡುತ್ತಾರೆ. ತದನಂತರ ಭವ್ಯ ಮೆರವಣಿಗೆಯ ಮೂಲಕ ದೇವಿಯ ವಿಸರ್ಜನೆ ಮಾಡುತ್ತಾರೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ. ಪಂಜಾಬದಲ್ಲಿ ಭಕ್ತರು ೭ ದಿನಗಳ ಉಪವಾಸ ಮಾಡಿದ ನಂತರ ಏಂಟನೇ ದಿನ ಪುಟ್ಟ ಬಾಲಿಕೆಯರನ್ನು ದೇವಿಯರ ಪ್ರತಿರೂಪವೆಂದು ಭಾವಿಸಿ ಅವರಿಗೆ ಪುರಿ, ಹಲವಾ ಮತ್ತು ಕಡಲೆಯ ನೈವೇದ್ಯ ನೀಡುತ್ತಾರೆ. ಹೊಸ ಕೆಂಪು ಬಣ್ಣದ ’ಚುನ್ನಿ’ಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಗುಜರಾತ ಮತ್ತು ರಾಜಸ್ಥಾನದ ಕೆಲವು ಪ್ರಾಂತಗಳಲ್ಲಿ, ನವರಾತ್ರಿಯ ಸಮಯದಲ್ಲಿ ದಾಂಡಿಯ, ಗರ್ಬಾ ಲೋಕನೃತ್ಯವು ಪ್ರಸಿದ್ಧವಾಗಿದೆ. ’ಧೋತಿ-ಕುರ್ತಾ ಮತ್ತು ಚನಿಯಾ-ಚೋಲಿ’ ವಿಶೇಷ ಉಡುಪಗಳನ್ನು ಧರಿಸಿ, ಢೋಲಕ ವಾದ್ಯದ ತಾಳದಲ್ಲಿ ’ಗಾರ್ಬಿ’(ಅಶಾಂತಿ ಅಂಧಕಾರ ದೂರಮಾಡಿ ಜ್ಞಾನದ ಬೇಳಕು ಕೊಡುವ) ಎಂಬ ಸಣ್ಣ ದೀಪದ ಸುತ್ತಲು ಮಾಡುವ, ಈ ನೃತ್ಯವು ನೋಡಲು ಅತಿಸುಂದರವಾಗಿರುತ್ತದೆ. ಕರ್ನಾಟಕ, ಆಂಧ್ರ ಮತ್ತು ತಮಿಳನಾಡದಲ್ಲಿ ದಸರಾ ಹಬ್ಬವು ಪಾರಂಪಾರಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಸುಮಂಗಲೆಯರು ಮನೆಯಲ್ಲಿ ಗೊಂಬೆಗಳನ್ನು ಅಲಂಕರಿಸಿ ಇಟ್ಟು ಪೂಜಿಸುತ್ತಾರೆ. ರಂಗೋಲಿ, ಪುಷ್ಪಗಳ ಅಲಂಕಾರವು ವಿಶೇಷವಾಗಿರುತ್ತದೆ. ಅನೇಕರನ್ನು ಕರೆಸಿ ಅವರಿಗೆ ಕುಂಕುಮ, ಅರಿಶಿಣ ನೀಡಿ, ಪ್ರಸಾದ ಕೊಡುತ್ತಾರೆ. ಉತ್ತರಭಾರತದಲ್ಲಿ ದುರ್ಗಾಪೂಜೆ ವಿಶೇಷವೆನಿಸಿದರೆ ದಕ್ಷಿಣಭಾರತದಲ್ಲಿ ಚಾಮುಂಡಿಯ ಆರಾಧನೆ ವಿಶಿಷ್ಟವಾದುದು. ಹೀಮಾಚಲ ಪ್ರದೇಶದ ಕುಲುನಲ್ಲಿ ೭ ದಿನಗಳ ರಘುನಾಥ ದೇವರ ಉತ್ಸವ ನಡೆಯುತ್ತದೆ.

ವಿಜಯನಗರದ ಅರಸರು ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ದಸರಾ ಹಬ್ಬವನ್ನು ಕನ್ನಡಿಗರ ಹಬ್ಬವನ್ನಾಗಿಸಿದವರು ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾದ ವಿಜಯನಗರದ ಅರಸರು. ವಿಜಯನಗರದ ಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಅಂದಿನ ಕಾಲಘಟ್ಟದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾದನಂತರ ಪ್ರವರ್ಧಮಾನಕ್ಕೆ ಬಂದ ಮೈಸೂರು ಒಡೆಯರ ಮನೆತನದವರು ದಸರಾ ಉತ್ಸವಕ್ಕೆ ಸಾಂಸ್ಕೃತಿಕ ಆಯಾಮವನ್ನೇ ನೀಡಿದರು. ಈ ಪರಂಪರೆಯನ್ನು ಇಂದಿನವರೆಗೂ ಅವ್ಯಾಹತವಾಗಿ ಸಾಗಿಸಿಕೊಂಡು ಬಂದ ಕೀರ್ತಿ ಮೈಸೂರಿನ ಒಡೆಯರಿಗೆ ಸಲ್ಲುತ್ತದೆ. ಮೈಸೂರಿನ ಮಹಾರಾಜರ ಕಾಲದಲ್ಲಿ ಮಹಾರಾಜರ ಮೆರವಣಿಗೆ ಜಗತ್ಪ್ರಸಿದ್ಧವಾಗಿತ್ತು. ಕ್ರಿ.ಶ. ೧೬೧೦ ರಲ್ಲಿ ರಾಜ ಒಡೆಯರ್ ಅವರಿಂದ ಆರಂಭಿಸಲಾದ ಜಂಬೂಸವಾರಿ ಇಂದಿಗೂ ದಸರೆಯ ಪ್ರಮುಖ ಆಕರ್ಷಣೆಯಾಗಿ, ನವರಾತ್ರಿಯ ವಿಶೇಷತೆಯಾಗಿ ಗಮನ ಸೆಳೆಯುತ್ತದೆ. ಈಗ ಅದು ಸರಕಾರದಿಂದ ನಡೆಸುವ ಭುವನೇಶ್ವರಿಯ ಮೆರವಣಿಗೆಯಾಗಿದೆ. ಜಂಬೂಸವಾರಿ, ದೀಪಾಲಂಕಾರ, ಲಲಿತ ಕಲೆಗಳ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ೧೦ ದಿನಗಳಕಾಲ ನಡೆಯುವ ದಸರಾ ಮಹೋತ್ಸವ ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತದೆ.

ಮಂಗಳೂರು ದಸರಾ ಹಬ್ಬವೂ ವಿಶೇಷ ಮಂಗಳೂರು ದಸರಾ ಹಬ್ಬವೂ ವಿಶೇಷವಾಗಿರುತ್ತದೆ. ಅಲ್ಲಿನ ಕುದ್ರೋಳಿಯ ಗೋಕರ್ಣನಾಥ ದೇವಾಲಯದಲ್ಲಿ ದೀಪಾಲಂಕಾರ ಮತ್ತು ಪೂಜೆ ನಡೆಯುತ್ತದೆ. ಹುಲಿ ಹಾಗೂ ಕರಡಿಯ ವೇಷ ಧರಿಸಿ ಯುವಕರು ಕುಣಿದಾಡುತ್ತ ಗಣಪತಿ ಹಾಗೂ ದೇವಿಯ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಧಾರವಾಡದ ಜವಳಿ ಪೇಟೆಯ ಲಕ್ಷ್ಮೀನಾರಾಯಣ ಹಾಗೂ ನಗರೇಶ್ವರ ದೇವಸ್ಥಾನದಲ್ಲಿ ೧೦ ದಿನಗಳ ಕಾಲ ದೇವರ ಮೂರ್ತಿಗಳಿಗೆ ವಿಶೇಷ ಅವತಾರಗಳನ್ನು ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ದಸರಾ ಹಬ್ಬಕ್ಕೆ ಶುರುವಾದ ಜಾತ್ರೆಯು ದೀಪಾವಳಿಯ ವರೆಗೆ ನಡೆಯತ್ತದೆ. ಈ ಹಬ್ಬವು ಅಶ್ವಿಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯಂದು ‘ಬನ್ನಿ’ ಪೂಜೆಯನ್ನು ಮಾಡುತ್ತಾರೆ.

ಸರ್ವಪಿತೃ ಅಮಾವಾಸ್ಯೆ ನವರಾತ್ರಿಯ ಹಿಂದಿನ ದಿನವಾದ ಮಹಾಲಯ ಅಮಾವಾಸ್ಯೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ ವಿನಾಶ ಅಂದರೆ ಮಹಾನ ಪರಿವರ್ತನೆ ಆಗುವುದು. ಆ ದಿನ, ಗತಿಸಿದ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ, ಭೋಜನಾದಿಗಳನ್ನು ಮಾಡಿ ಅರ್ಪಿಸುತ್ತಾರೆ. ಆದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಪಾಂಡವರಿಗೆ ವಿಜಯಮಾಲೆ ಬಂದಿರುವ ದಿನವೆ ವಿಜಯದಶಮಿಯ. ಈ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುವರು. ‘ಶಮಿ’ ಎಂದರೆ ಶಾಂತಿ, ಸಮಾಧಾನವೆಂದರ್ಥ. ಆ ದಿನ ಬನ್ನಿ ಮರಕ್ಕೆ ಪೂಜಿಸುವುದರೊಂದಿಗೆ ಬನ್ನಿಮರದ ಎಲೆಗಳನ್ನು ಪರಸ್ಪರ ಕೊಟ್ಟು, ಬಂಗಾರದ ಹಾಗೆ ಇರಿ ಎಂದು ಶುಭ ಹಾರೈಸುತ್ತಾರೆ. ‘ಬನ್ನಿ’ ಎಂಬ ಶಬ್ದವೇ ಸ್ವಾಗತ ಶಬ್ದಾರ್ಥವಾಗಿರುವುದರಿಂದ ತಮ್ಮ ಆಪ್ತಸ್ನೇಹಿತರಿಗೆಲ್ಲ ನಿಮಂತ್ರಣ ನೀಡಿ ಸಿಹಿ ಹಂಚುತ್ತಾರೆ. ಹೊಲಗಳಲ್ಲಿ ಬೆಳೆದ ಜೋಳದ, ಗೋಧಿಯ ಹುಲ್ಲನ್ನು ಅರ್ಥಾತ್ ಶಾಂತಿಯ ಸಂಕೇತವಾದ ಹಸಿರನ್ನು ಪೂಜಿಸುತ್ತಾರೆ. ವಿಜಯದಶಮಿ ಶಾಂತಿ, ಸಮಾಧಾನ ನೀಡುವ ಹಬ್ಬವಾಗಿದೆ.

ದಾಂಡೆಲಿ ಅಪ್ಪನ ಜಾತ್ರೆ ಉತ್ತರ ಭಾರತದಲ್ಲಿ ದಸರಾ ಹಬ್ಬದ ಪ್ರಯುಕ್ತ ’ರಾಮಲೀಲ’ ಬೀದಿನಾಟಕ ಹಾಗೂ ರಾವಣ ಮೇಘನಾಥ ಹಾಗೂ ಕುಂಭಕರ್ಣನ ದೊಡ್ಡ ಗೊಂಬೆಗಳನ್ನು ಮಾಡಿ ಸುಡುವುದು ಪ್ರಚಲಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿಯೂ ಇದನ್ನು ನೊಡಬಹುದು. ಅಲ್ಲಿನ ದಾಂಡೆಲಿ ಅಪ್ಪನ ಜಾತ್ರೆಯು ವಿಶೇಷವಾಗಿದೆ. ದಶಾನನವಾದ ರಾವಣ ಸಂಹಾರದ ಪ್ರತೀಕ ‘ವಿಜಯ ದಶಮಿ’ ಆಚರಿಸುತ್ತಾರೆ. ರಾವಣ ನಮ್ಮ ಶತ್ರು ಆದರಿಂದಲೇ ಅವನ ಸಂಹಾರ ಮಾಡುತ್ತಾರೆ. ರಾವಣ ಯಾರು? ಅವನನ್ನು ಏಕೆ ಪ್ರತಿವರ್ಷ ಸುಟ್ಟು ಹಾಕುತ್ತಾರೆ? ರಾವಣ ಲಂಕಾಧಿಪತಿ, ಅವನು ಬಹಳ ಶಕ್ತಿಶಾಲಿ, ಜಲ, ವಾಯು, ಅಗ್ನಿ, ಆಕಾಶ ಮತ್ತು ಕಾಲಗಳು ಅವನ ಬಂಧನದಲ್ಲಿ ಇದ್ದವು ಎಂದು ಜನಸಾಮಾನ್ಯರು ಹೇಳುತ್ತಾರೆ.

ನಾವೂ ದೇವಮಾನವರಾಗಬಹುದು ರಾವಣ ಎಂದರೆ ರಾಕ್ಷಸಿ ಪ್ರವೃತ್ತಿಯ ಸಂಕೇತ. ರಾವಣನ ಹತ್ತು ತಲೆಗಳು, ಸ್ತ್ರೀ ಮತ್ತು ಪುರುಷರಲ್ಲಿರುವ ಪಂಚವಿಕಾರಗಳಾದ ಕಾಮ, ಕ್ರೋಧ, ಮೋಹ, ಲೋಭ, ಅಹಂಕಾರಗಳು. ನಮ್ಮಲ್ಲಿರುವ ಈ ಪಂಚ ವಿಕಾರಗಳನ್ನು ಸುಟ್ಟು ಹಾಕಿದರೆ ನಿಜವಾದ ದಶಹರಾ, ರಾವಣನ ಸಂಹಾರವಾಗುವುದು. ನವರಾತ್ರಿಗೆ ವಿಶೇಷವಾಗಿ ದೇವಿಯರ ಆರಾಧಾನೆ, ಪೂಜೆಯು ನಡೆಯುತ್ತದೆ. ದುರ್ಗಾದೇವಿಯ ೮ ಭುಜಗಳು ಮುಖ್ಯ ೮ ಶಕ್ತಿಯ ಪ್ರತೀಕವಾಗಿದೆ. ಸಹನಸಕ್ತಿ, ಅಳವಡಿಸಿಕೊಳ್ಳುವ ಶಕ್ತಿ, ಪರಿಕ್ಷಿಸಿಕೊಳ್ಳುವ ಶಕ್ತಿ, ನಿರ್ಣಯ ಶಕ್ತಿ, ಧೈರ್ಯ ಶಕ್ತಿ, ಸಹಯೋಗ ಶಕ್ತಿ, ಸಂಕುಚಿತಗೋಳಿಸುವ ಶಕ್ತಿ ಮತ್ತು ಸಂಕ್ಷಿಪ್ತಗೊಳಿಸುವ ಶಕ್ತಿಗಳು, ದೈವಿ ಗುಣಗಳಾದ ಶಾಂತಿ, ಪ್ರೀತಿ ಸ್ನೇಹ, ಮಧುರತೆ, ಆನಂದ, ಮುಂತಾದಗಳನ್ನು ಸ್ವಯಂ ನೀರಾಕಾರ ಪರಮಪಿತ ಪರಮಾತ್ಮನು, ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸುವ ರಾಜಯೋಗದ ಮೂಲಕ ಧಾರಣೆ ಮಾಡಿದರೆ ನಾವೂ ದೇವಮಾನವರಾಗಬಹುದು. ಹಾಗಾದರೆ ಬನ್ನಿ, ನಾವು ಈ ದಸರಾ ಹಬ್ಬದ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿದು, ವಿಶ್ವಪಿತನಾದ ನಿರಾಕಾರ ಭಗವಂತನ ಮಕ್ಕಳು ಎಂದು, ಪರಸ್ಪರರಲ್ಲಿ ಸ್ನೇಹ ಆತ್ಮೀಯತೆಯನ್ನು ಬೆಳೆಸಿ, ವಿಶ್ವಶಾಂತಿಯ ಉಗಮಕ್ಕೆ ನಾಂದಿಯನ್ನು ಹಾಡಿ ಉತ್ಸಾಹದಿಂದ ಆಚರಿಸೋಣ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *