ನಿಜವಾದ ಸ್ಟೈಲ್ ಕಿಂಗ್ ವಿಷ್ಣುವರ್ಧನ್ ( ಜನುಮದಿನದ ನೆಪದಲ್ಲಿ ಒಂದು ನೆನಪು)..

Spread the love

ನಿಜವಾದ ಸ್ಟೈಲ್ ಕಿಂಗ್ ವಿಷ್ಣುವರ್ಧನ್ ( ಜನುಮದಿನದ ನೆಪದಲ್ಲಿ ಒಂದು ನೆನಪು)..

ಕನ್ನಡದ ಅನಭಿಷಿಕ್ತ ರಾಜ ರಾಜಕುಮಾರ್ ಅವರ 150 ನೇ ಚಲನಚಿತ್ರ ಗಂಧದ ಗುಡಿ. ಆ ಚಿತ್ರ ಎಷ್ಟು ಪ್ರಸಿದ್ಧಿ ಪಡೆಯಿತೋ ಅದರ ನೆಗೆಟಿವ್ ಶೇಡ್ ಕೂಡಾ ಅದಕ್ಕಿಂತ ಹೆಚ್ಚು ಪ್ರಚಾರ ಪಡೆದು ರೆಕ್ಕೆ ಪುಕ್ಕಗಳ ಸಮೇತ ಗಾಂಧಿನಗರದ ಗೋಡೆಗಳಿಗೆ ಪೋಸ್ಟರ್ ಆಯಿತು. ಗಂಧದ ಗುಡಿಯಲ್ಲಿ ವಿಲನ್ ಪಾತ್ರ ಆಯ್ದುಕೊಂಡ ನಟ ಅದಾಗಲೇ ಪುಟ್ಟಣ್ಣ ಕಣಗಾಲರ ನಾಗರಹಾವಿನ ಆಂಗ್ರಿ ಯಂಗ್ ಮ್ಯಾನ್ ಆಗಿ ಕನ್ನಡ ಸಿನಿಮಾ ರಂಗಕ್ಕೆ ಹೊಸ ನಾಯಕನ ಉದಯ ಆಗಿ ಹೋಗಿತ್ತು.  ಆದರೂ ರಾಜ್ಕುಮಾರ್ ತಮ್ಮನ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಳ್ಳಲಿಚ್ಛಿಸದೇ ಎಲ್ಲಾ ರಿಸ್ಕ್ ನ್ನು ಮೈ ಮೇಲೆ ಎಳೆದುಕೊಂಡ ತಪ್ಪಿಗೆ ಬದುಕಿನ ಕೊನೆಯತನಕ ಅದರಿಂದ ಹೊರಬರಲಾಗದೇ ಆಧ್ಯಾತ್ಮದ ಅಧೀನಕ್ಕೆ ಅರ್ಪಿಸಿಕೊಂಡ ಸಹಜ ಸುಂದರ ನಟ ವಿಷ್ಣುವರ್ಧನ್ (18 ಸೆಪ್ಟೆಂಬರ್ 1950) ಅಲಿಯಾಸ್  ಸಂಪತ್ ಕುಮಾರ್… ಅಮಿತಾಬ್ ನಂತೆ ಎಡಗೈ ಬಳಸಿದರೂ ರಾಜೇಶ್ ಖನ್ನನಂತೆ ಬಲಗೈ ಎತ್ತಿ ಅಭಿನಯಿಸುತ್ತ  ರಿಷಿ ಕಪೂರನಂತೆ ಎರಡೂ ಕೈಗಳನ್ನು ಒಮ್ಮೆಲೇ ಹಿಂದಕ್ಕೆ ತಳ್ಳಿ ನರ್ತಿಸುವ ಶೈಲಿಯ ಜತೆಗೆ ತನ್ನದೇಆದ ಸ್ಟೈಲ್ ಕಿಂಗ್ ಮ್ಯಾನರಿಸಂಗಳನ್ನು ಹುಟ್ಟು ಹಾಕಿದ ವಿಷ್ಣುವರ್ಧನ್ ಕನ್ನಡ ಚಿತ್ರ ಪ್ರೇಮಿಗಳಷ್ಟೇ ಅಲ್ಲ,  ಕಾಲೇಜು ಕನ್ಯೆಯರಿಗೂ ಈ ಚೂಪು ಮೂಗಿನ ಸೌಂದರ್ಯವಂತನಲ್ಲಿ ತಮ್ಮ ಕನಸಿನ ರಾಮಾಚಾರಿ, ಸಾಹಸ ಸಿಂಹನನ್ನು ಕಂಡು ಕನಸಿಗೆಳೆದು ಹಾಸಿ ಹೊದ್ದುಕೊಂಡರು. ಈ 18 ರ ಸಂಖ್ಯೆಯ ಮಹತ್ವವೇ ಹಾಗೆ ! ಶಾಸಕರಾಗಿ ಮುಖ್ಯಮಂತ್ರಿ ಆಗಿದ್ದ ದೇವೇಗೌಡರು ಪ್ರಧಾನಿಯಾದರು, MP ಆಗಿದ್ದ ಸದಾನಂದಗೌಡ ಮುಖ್ಯಮಂತ್ರಿಯಾದರು, ನಿರ್ದೇಶಕನಾಗಲು ಒದ್ದಾಡಿದ್ದ ಉಪೇಂದ್ರ ಹೀರೋ ಆಗಿ ಖ್ಯಾತರಾದರು. ರಂಗಭೂಮಿ ಫ್ಯಾಮಿಲಿಯ ಶೃತಿ ನಾಯಕಿಯಾದರು. ಮಾಲಾಶ್ರೀ (9 ) ನಂಬರ್ ಒನ್ ಹೀರೋಯಿನ್ ಆಗಿ ಹತ್ತಾರು ವರ್ಷ ಮೆರೆದರು. ನಟಿ ಸುಮಲತಾ (27) ಮಂಡ್ಯ ಆಧಿಪತ್ಯ ಭೇದಿಸಿ ಸಂಸತ್ತಿನ ಸದಸ್ಯರಾಗಿ ಗೆಲುವು ಸಾಧಿಸಿದರು. ಯಡಿಯೂರಪ್ಪ( 27) ಹಲವು ಸಲ ಮುಖ್ಯಮಂತ್ರಿಯಾದರು. ವಿಷ್ಣುವರ್ಧನ್( 18) ರಾಜ್ ಕುಮಾರ್ ಅವರಿಗೆ ಪೈಪೋಟಿ ನೀಡಬಲ್ಲ ನಾಯಕನೆಂದು ಚಿತ್ರಾಭಿಮಾನಿಗಳಿಂದ ಕರೆಸಿಕೊಂಡು ರಾಜ್ ನಂತರದ ಸ್ಥಾನದಲ್ಲಿ ಮಿಂಚಿದರು…ಹಾಗೆ ನೋಡಿದರೆ ರಾಜ್ ಕುಮಾರ್ ಅವರಿಗೆ ಸಿಕ್ಕಿದಷ್ಟು ವೈವಿಧ್ಯಮಯ ಪಾತ್ರಗಳು ದಕ್ಕದೇ ಹೋದರೂ, ವಂಶವೃಕ್ಷದಿಂದ ಆರಂಭಿಸಿ ನಾಗರಹಾವು,ಭೂತಯ್ಯನ ಮಗ ಅಯ್ಯು, ಹೊಂಬಿಸಿಲು,ಸಿಂಗಾಪುರನಲ್ಲಿ ರಾಜಾ ಕುಳ್ಳ,

ಸಹೋದರರ ಸವಾಲ್, ಖೈದಿ, ಬಂಧನ,ನೀ ಬರೆದ ಕಾದಂಬರಿ,ಜೀವನ ಚಕ್ರ, ಕರ್ಣ, ಮುತ್ತಿನ ಹಾರ, ಸುಪ್ರಭಾತ,ಲಾಲಿ,ಹಾಲುಂಡ ತವರು,ಯಜಮಾನ,  ಸೂರ್ಯವಂಶ,ದಿಗ್ಗಜರು, ಆಪ್ತಮಿತ್ರ ಮತ್ತು ಕೊನೆಯ ಆಪ್ತ ರಕ್ಷಕ ಸಿನಿಮಾಗಳು ಕನ್ನಡ ಚಿತ್ರರಂಗದ ಮೈಲುಗಲ್ಲುಗಳಾಗಿ ಉಳಿದಿವೆ. ರಾಜೇಂದ್ರ ಸಿಂಗ್ ಬಾಬು ಅವರ ತಂದೆ ಶಂಕರ್ ಸಿಂಗ್ ನಿರ್ಮಿಸಿದ ಚಿತ್ರದಲ್ಲಿ ಬಾಲನಟನಾಗಿ ಬೆಳ್ಳಿ ತೆರೆಯಲ್ಲಿ ಮೊದಲು ಮುಖ ತೋರಿಸಿದರು. ವಿಷ್ಣುವರ್ಧನ್ ತಂದೆ ನಾಗರಾಜ ರಾವ್ ಆಗಲೇ ಸಿನಿಮಾ ಮತ್ತು ಪತ್ರಿಕಾರಂಗದಲ್ಲಿ ಗುರುತಿಸಿಕೊಂಡಿದ್ದು ಇವರ ಸಿನಿಮಾ ಎಂಟ್ರಿಗೆ ಸುಲಭವಾಯಿತು. ನ್ಯಾಷನಲ್ ಕಾಲೇಜಿನಲ್ಲಿ ಡ್ರಾಮಾ ಮತ್ತು ಕ್ರೀಡೆಯ ಮಂಚೂಣಿಯಲ್ಲಿ ಇದ್ದರು.ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಾದರೂ ಬೆಳೆದು ಓದಿದ್ದು ಮೈಸೂರು ಮತ್ತು ಬೆಂಗಳೂರಿನಲ್ಲಿ…ಹಿಂದಿಯಲ್ಲಿ ಏಕ್ ನಯಾ ಇತಿಹಾಸ್,ಇನ್ಸಪೆಕ್ಟರ್ ಧನುಷ್,ಅಶಾಂತ್, ಜಾಲೀಮ್…ತಮಿಳಿನಲ್ಲಿ ಅಲೈಗಳ್(1973) ಮಾಲೈ ಪಟ್ಟಾಳಂ, ಈಟಿ, ವಿಡುದಲೈ, ಪರ್ವರಾಗಂ, ಶ್ರೀ ರಾಘವೇಂದ್ರ…ತೆಲುಗಿನಲ್ಲಿ ಒಕ್ಕಡು ಚಾಲು, ಸರ್ದಾರ್ ಧರ್ಮನ್ನ, ಲಕ್ಷ್ಮೀ ನಿರ್ಧೋಶಿ… ಮಲೆಯಾಳಂನ ಅಡಿಮೆ ಚಂಗಲ ಹಾಗೂ ಕೌರವರ್ ಚಿತ್ರಗಳಲ್ಲಿ ವಿಷ್ಣುವರ್ಧನ್ ನಟಿಸಿ ಸೈ ಅನಿಸಿಕೊಂಡು ಅಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿ ಕೊಂಡಿದ್ದರು. ವಿಷ್ಣುವರ್ಧನ್ ಅವರನ್ನು ಅತೀ ಹೆಚ್ಚು ಅಂದರೆ ಸುಮಾರು 22 ಚಿತ್ರಗಳನ್ನು ನಿರ್ದೇಶಿಸಿದ್ದು ಭಾರ್ಗವ. ವಿಷ್ಣು- ಮಂಜುಳಾ ಜೋಡಿ ಸುಮಾರು 16 ಚಿತ್ರಗಳು,ತಮ್ಮಚಲನಚಿತ್ರ ಜೀವನದ ಮೊದಲ ನಾಯಕಿ ಆರತಿಯೊಂದಿಗೆ 15 ಚಿತ್ರಗಳು, ನಿಜ ಬದುಕಿನ ನಾಯಕಿ ಭಾರತಿಯವರೊಂದಿಗೆ 12 ಚಿತ್ರಗಳು, ಭವ್ಯ ಜೋಡಿಯಾಗಿ 7 ಸಿನಿಮಾಗಳಲ್ಲಿ ಬೆಳ್ಳಿತೆರೆ ಹಂಚಿಕೊಂಡಿದ್ದಾರೆ.  ಹಾಗೆಯೆ ರಾಜ್ ಕುಮಾರ್, ರಜನೀಕಾಂತ್, ಅಂಬರೀಷ್,ಮಮ್ಮಟ್ಟಿ,  ಶಂಕರ್ ನಾಗ್, ಅನಂತನಾಗ್, ರವಿಚಂದ್ರನ್, ಶ್ರೀನಾಥ್, ಟೈಗರ್ ಪ್ರಭಾಕರ್ ಮುಂತಾದ ಮೇರು ನಟರೊಂದಿಗೆ ಅಭಿನಯಿಸಿದ್ದಾರೆ. ವಿಶೇಷವೆಂದರೆ ದ್ವಾರಕೀಶ್ ನಿರ್ಮಿಸಿದ 52 ಚಿತ್ರಗಳಲ್ಲಿ  ಮೂಕ್ಕಾಲು ಪಾಲು ನಾಯಕ ವಿಷ್ಣುವರ್ಧನ್.  ಅಂಬಿ ವಿಷ್ಣು ಸ್ನೇಹದ ಸಂಕೇತವಾಗಿ ದಿಗ್ಗಜರು ಸಿನಿಮಾ ಕಣ್ಣ ಮುಂದಿದೆ.  ಸ್ನೇಹಿತನಿಗಾಗಿಯೇ ತಮ್ಮ ಮನೆಯಲ್ಲಿ ಬಾರ್ ಕೌಂಟರ್ ತೆರೆದಿದ್ದರಂತೆ.  ನ್ಯಾಷನಲ್ ಕಾಲೇಜಿನ ಕ್ರಿಕೇಟ್ ಮೈದಾನದಿಂದ ಸ್ಟಾರ್ ನಟನಾದ ವಿಷ್ಣುವರ್ಧನ್  ಚಿತ್ರ ನಟರನ್ನೊಳಗೊಂಡ ‘ ಸ್ನೇಹ ಲೋಕ ‘ ಕ್ರಿಕೆಟ್ ಟೀಮ್ ಕಟ್ಟಿ, ತಿಂಗಳಲ್ಲಿ ಒಂದು ದಿನ ಅದೇ ಕಾಲೇಜು ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದರು. ಆ ತಂಡದ ಸದಸ್ಯರು ಆಟಕ್ಕೆ ಕೈ ಕೊಟ್ಟರೇ ಐದು ಸಾವಿರ ದಂಡ ತೆರಬೇಕಿತ್ತು. ಅತೀ ಹೆಚ್ಚು ದಂಡ ಕಟ್ಟಿದ್ದು ಕೂಡಾ ಆಪ್ತ ಸ್ನೇಹಿತ ಅಂಬರೀಷ್… ನಾಗರಹಾವಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಬ್ಯೂಟಿಫುಲ್ ನಾಯಕನನ್ನು ಪರಿಚಯಿಸಿದ ನಿರ್ದೇಶಕ ಪುಟ್ಟಣ್ಣ ತಮ್ಮ ಇತರ ನಾಯಕರಿಗೆ ಹಲವು ಚಿತ್ರಗಳಲ್ಲಿ ಅವಕಾಶ ಮಾಡಿಕೊಟ್ಟರು. ಆದರೆ ವಿಷ್ಣುವರ್ಧನ್ ಗಾಗಿ ಅವರು ಎರಡನೆಯ ಸಿನಿಮಾವನ್ನು ಮಾಡಲೇ ಇಲ್ಲ.  ಅದು ಒಂದು ನಿಗೂಢ… ಆದರೆ ತನ್ನ ಶಿಷ್ಯನ ‘ಬಂಧನ’ ಚಿತ್ರದಲ್ಲಿನ ಅಭಿನಯವನ್ನು ಕಣ್ಣಾರೆ ಕಂಡು ಹೃದಯ ಸ್ತಂಬನಕ್ಕೊಳಗಾದ ಪುಟ್ಟಣ್ಣ ವಿಷ್ಣುವಿಗಾಗಿ ಇನ್ನೂ ಒಂದಷ್ಟು ಸಿನಿಮಾಗಳನ್ನು ನಾನು ಮಾಡಬೇಕಿತ್ತು ಎಂದು ಆಪ್ತರ ಬಳಿ ಹೇಳಿಕೊಂಡರಂತೆ. ಕಾಲ ಮಿಂಚಿ ಹೋಗಿತ್ತು! ನೂರೊಂದು ನೆನಪು ಎದೆಯಾಳದಿಂದ ನೆನಪಾಗಿ ಬಂತು….. – ವೈ ಜಿ ಅಶೋಕ್ ಕುಮಾರ್..

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *