ಸೆಪ್ಟೆಂಬರ್ 17 ರಂದು ಜರುಗುವ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಬರೆದ ಲೇಖನ…

Spread the love

ಸೆಪ್ಟೆಂಬರ್ 17 ರಂದು ಜರುಗುವ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಬರೆದ ಲೇಖನ

ಕಲ್ಯಾಣ ಕರ್ನಾಟಕ ಎಂಬುದು ಒಂದು ನಿರ್ದಿಷ್ಟ  ವ್ಯಾಪ್ತಿಯುಳ್ಳ ಪ್ರದೇಶ. ಈ ಪ್ರದೇಶವು ಎರಡೂವರೆ ಶತಮಾನಗಳ ಕಾಲ ನಿಜಾಮರದ ಆಡಳಿತಕ್ಕೆ ಒಳಪಟ್ಟಿತ್ತು. ನಿಜಾಮರ ಆಡಳಿತದಿಂದ ಈ ಭಾಗಕ್ಕೆ ಅವರದೇ ಆದ ಕೆಲವು ಛಾಯೆಗಳು ಮೂಡಿದವು. ಬ್ರಿಟಿಷರ ಅಧೀನದಲ್ಲಿದ್ದ ನಿಜಾಮನು ತನ್ನ ಆಡಳಿತಕ್ಕೆ ಒಳಗಾಗಿದ್ದ ಪ್ರದೇಶವನ್ನು “ಹೈದರಾಬಾದ್ ಸಂಸ್ಥಾನ” ವೆಂದು ಕರೆಯುತ್ತಿದ್ದನು. 1724 ರಿಂದ 1948 ಸೆಪ್ಟೆಂಬರ್ 17 ರ ವರೆಗೆ ಏಳು ಮಂದಿ ನಿಜಾಮರು ಅಧಿಕಾರಕ್ಕೆ ಬಂದು ಈ ಸಂಸ್ಥಾನವನ್ನು ಆಳಿದರು ಎಂಬುದು ಗೊತ್ತಾಗುತ್ತದೆ. 1947 ಅಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ಕರ್ನಾಟಕಕ್ಕೆ (ಕಲ್ಯಾಣ ನಾಡಿಗೆ)ಸ್ವಾತಂತ್ರ್ಯವೆಂಬುದು ಮರೀಚಿಕೆಯಾಗಿಯೇ ಉಳಿದಿತ್ತು. ಅಖಂಡ ಭಾರತದ 565ಕ್ಕೂ ಹೆಚ್ಚು ಸಂಸ್ಥಾನಗಳ ಮಹಾರಾಜರು ಭಾರತ ಒಕ್ಕೂಟ ಸೇರಲು ಒಪ್ಪಿ ಕರಾರಿಗೆ ಸಹಿ ಹಾಕಿದ ಸಂದರ್ಭದಲ್ಲಿ ಹೈದರಾಬಾದ್ ನಿಜಾಮ ಮಾತ್ರ ಭಾರತ ಒಕ್ಕೂಟ ಸೇರಲು ತೀವ್ರ ವಿರೋಧ ಒಡ್ಡಿದನು. ಭಾರತದ ಉದ್ದಗಲಕ್ಕೂ ಜಯಭೇರಿ ಮೊಳಗುತ್ತಿದ್ದರೆ, ನಿಜಾಮನ ಆಡಳಿತದಲ್ಲಿದ್ದ ಪ್ರಾಂತ್ಯದಲ್ಲಿ ಹಿಂಸೆಯನ್ನು ಪ್ರಚೋದಿಸುವ ಘೋಷಣೆಗಳು ಮೊಳಗುತ್ತಿದ್ದವು. ಹೈದರಾಬಾದ್ ನಿಜಾಮ ಮೀರ್ ಉಸ್ಮಾನ ಅಲಿಖಾನ ಬಹದ್ದೂರನನ್ನು ತನ್ನ ಕೈಗೊಂಬೆಯಾಗಿಸಿಕೊಂಡಿದ್ದ ರಜಾಕರ ನಾಯಕ ಖಾಸಿಂ ರಜ್ವಿ ಹಿಂಸೆಯನ್ನು ಪ್ರಚೋದಿಸುವ ಘೋಷಣೆಯ ಮೂಲಕ ಕೋಮು ದಳ್ಳುರಿಗೆ ಕಾರಣವಾಗಿದ್ದ ಈ ಪ್ರಮುಖ ವ್ಯಕ್ತಿ,ಇವನು ಅನೇಕ ಕ್ರೌರ್ಯ, ಹಿಂಸಾಚಾರಗಳನ್ನು ಮಾಡುವ ಮೂಲಕ ಈ ಭಾಗದ ಜನಸಾಮಾನ್ಯರ ಹತ್ಯೆಗೆ ಕಾರಣನಾಗಿದ್ದ ಎನ್ನುವುದು ಈದಿಗೂ ಇಲ್ಲಿನ ಜನರು ಮರೆಯುವುದಿಲ್ಲ. ಇದೆ ತಿಂಗಳು ಅಂದರೆ ಸೆಪ್ಟೆಂಬರ್ 17 ರಂದು ಜರುಗುವ ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಲೇಖನ ಬರೆಯುವ ಸಣ್ಣ ಪ್ರಯತ್ನ ಮಾಡಲಾಗಿದೆ.

ವಿಮೋಚನೆ:  ಭಾರತ  ದೇಶ 1947 ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆಯಿತು. ಆ ಸಂದರ್ಭದಲ್ಲಿ ದೇಶದ ಭೂಭಾಗ ತುಂಡುಗಳಾಗಿ ಹಂಚಿಹೋಗಿ ಹೆಚ್ಚಿನ ಭಾಗ ಬ್ರಿಟಿಷ್ ಆಡಳಿತದಲ್ಲಿ ಮತ್ತು ಕೆಲವು ಭಾಗ ಪ್ರಾದೇಶಿಕ ರಾಜರ ಆಡಳಿತದಲ್ಲಿತ್ತು. ಸ್ವಾತಂತ್ರ ಘೋಷಣೆಯಾದ ಸಂದರ್ಭದಲ್ಲಿ ರಾಜಾಡಳಿತದಲ್ಲಿದ್ದ  ಹೆಚ್ಚಿನ ಪ್ರದೇಶಗಳು ಒಕ್ಕೂಟದಲ್ಲಿ ಸೇರಿಕೊಂಡವು. ಆದರೆ ಕಾಶ್ಮೀರ,ಜುನಾಗಡ್ ಮತ್ತು ಹೈದರಾಬಾದ್ ರಾಜರು ಒಕ್ಕೂಟಕ್ಕೆ ಸೇರಲು ಒಪ್ಪಲಿಲ್ಲ. ಇದರಿಂದಾಗಿ ಸ್ವಾತಂತ್ರ್ಯ ಬಂದರೂ ಅಂತಹ ಪ್ರದೇಶಗಳ ಜನರಿಗೆ ನಿಜವಾಗಿ ಸ್ವಾತಂತ್ರ್ಯ ಪ್ರಾಪ್ತವಾಗಲಿಲ್ಲ.  ಅಂತಹ ಭಾಗ್ಯರಲ್ಲಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿದ್ದ ಪ್ರದೇಶದ ಜನರು ಕೂಡ ಸೇರಿದ್ದರು. ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಆದಕಾರಣ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಭಾಗದ ಜನರಿಗೆ ಸ್ವಾತಂತ್ರ್ಯ ಭಾಗ್ಯ ದೊರೆಯಲಿಲ್ಲ.ಆಗಸ್ಟ್ 15,1947 ರಂದು ದೇಶದಲ್ಲೆಡೇ ಜನ ಭಾರತದ ತ್ರೀವರ್ಣ ದ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ  ಸಂತೋಷವನ್ನು ಅನುಭವಿಸುತ್ತಿದ್ದರೆ, ಇತ್ತ ಹೈದ್ರಾಬಾದ ಕರ್ನಾಟಕ ಭಾಗದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವದು ಅನಿವಾರ್ಯವಾಯಿತು. ಇದೆ ಸಮಯದಲ್ಲಿ ರಜಾಕರ್ ಹಾವಳಿಯಿಂದ ಈ ಭಾಗದ ಸಾವಿರಾರು ಅಮಾಯಕರು ಬಲಿಯಾದರು.ಜನರ ಆಸ್ತಿ – ಪಾಸ್ತಿಯನ್ನು ಲೂಟಿ ಮಾಡಿದರು. ಇದರಿಂದ ರೋಸಿ ಹೋದ ಇಲ್ಲಿನ ಜನಸಾಮಾನ್ಯರು, ಇವರು ವಿರುದ್ಧ ದಂಗೆ ಎಳುವ ಹಂತಕ್ಕೆ ತಲುಪಿದರು.

ಈ  ಸಂಧರ್ಭದಲ್ಲಿ ಇಲ್ಲಿನ ಜನರು ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕೆಂಬ ನಿರ್ಣಯದೊಂದಿಗೆ ಒಂದು  ಹಂತದಲ್ಲಿ ತಾಳ್ಮೆಯ ಮೂಲಕ ಪ್ರತಿಭಟನೆ ಮಾಡುತ್ತಾ ಬಂದರು.ತರುವಾಯ ಸರದಾರ ವಲ್ಲಭಭಾಯಿ ಪಟೇಲರ ಮುಂದಾಳತ್ವದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ, ಕೇವಲ ನಾಲ್ಕು ದಿನಗಳಲ್ಲಿ 19-09-1948 ರಂದು ಹೈದ್ರಾಬಾದ ನಗರಕ್ಕೆ ಭಾರತ ಸೇನೆಯು ಮುತ್ತಿಗೆ ಹಾಕಿತು.ಈ ಸಂಧರ್ಭದಲ್ಲಿ ಪರಸ್ಥಿತಿಯ ಗಂಭೀರತೆಯನ್ನು ಅರಿತ ನಿಜಾಮ ಮೀರ್ ಉಸ್ಮಾನ ಅಲಿಖಾನ ಅನ್ಯಮಾರ್ಗವಿಲ್ಲದೆ ಶರಣಾಗತನಾದನು. ಆಗ ಹೈದ್ರಾಬಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ  ವಿಲೀನಗೋಳಿಸಿದರು ಮತ್ತು ದೇಶದಲ್ಲಿ ಹೈದ್ರಾಬಾದ ಸಂಸ್ಥಾನವು ಒಂದು ರಾಜ್ಯವಾಗಿ ಸೇರ್ಪಡೆಯಾಯಿತು. ಈ ಪೋಲಿಸ್ ಕಾರ್ಯಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಚೌದರಿಯವರೆ ಮಿಲಿಟರಿ ಗೌವರ್ನರ ಆಗಿ ಅಧಿಕಾರ ಸ್ವೀಕರಿಸಿದರು ಹಾಗೂ ಅವರು ಡಿಸೆಂಬರ್ 1949ವರೆಗೆ ಮುಂದುವರೆದರು ಅವರ ನಂತರ ಹೈದ್ರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿ ಎಮ್.ಕೆ.ವೆಲ್ಲೋಡಿಯವರು ಅಧಿಕಾರ ಸ್ವೀಕರಿಸಿದರು.ನಿಜಾಮ ಮೀರ್ ಉಸ್ಮಾನ ಅಲಿ ಖಾನ ಇವರನ್ನು ಕೇಂದ್ರ ಸರಕಾರ ಹೈದ್ರಾಭಾದ ರಾಜ್ಯದ ರಾಜ್ಯಪ್ರಮುಖರಾಗಿ ನೇಮಿಸಿತು ಅವರು 1956ರ ವರೆಗೆ ಅಧಿಕಾರದಲ್ಲಿದ್ದರು. ಹೈದ್ರಾಬಾದ ರಾಜ್ಯವನ್ನು ರಾಜ್ಯ ಪುನರ ವಿಂಗಡನೆ ಸಂದರ್ಭದಲ್ಲಿ ಮೂರು ಭಾಗಗಳನ್ನಾಗಿ ವಿಭಜಿಸಿ ಬೇರೆ ರಾಜ್ಯಗಳ ಜೊತೆ ವಿಲೀನಗೋಳಿಸಿದರು.ಈ ಸಂದರ್ಭದಲ್ಲಿ ಹೈದ್ರಾಬಾದ ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿತು. ಅದರ ಒಂದು ಭಾಗವೇ ನಮ್ಮ ಈಗಿನ ಕಲ್ಯಾಣ ನಾಡು ಅಂದರೆ ಕಲ್ಯಾಣ ಕರ್ನಾಟಕ ಭಾಗ, ಹೀಗಾಗಿ ಕಲ್ಯಾಣ ಕರ್ನಾಟಕದ ನಾಗರಿಕರು ವರ್ಷದಲ್ಲಿ ಎರಡು ಸಲ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸುವಂತಾಗಿದೆ. ಒಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಾಗಿ 15ನೆ ಆಗಷ್ಟ್ ರಂದು ಇನ್ನೊಂದು ಹೈದ್ರಾಬಾದ ಸಂಸ್ಥಾನ ಭಾರತ ಒಕ್ಕೂಟದಲ್ಲಿ ಸೇರಿದ ದಿನ ಅಂದರೆ 17ನೇ ಸೆಪ್ಟೆಂಬರ್ ರಂದು  ಹೈದ್ರಾಬಾದ-ಕರ್ನಾಟಕ( ಕಲ್ಯಾಣ ಕರ್ನಾಟಕ ) ವಿಮೋಚನಾ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.

ಹೋರಾಟಗಾರರಿಗೆ ನಮಿಸೋಣ :

ಆಗಿನ ನಿಜಾಮರು ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಸಮಾಜ ಮುಖಿ, ಜನಪರವಾದ  ಮೂಲಭೂತ ಸೌಕರ್ಯಗಳನ್ನು ಹಾಗೂ ಅಭಿವೃದ್ಧಿ ಕೊಡುಗೆಗಳನ್ನು ಕೊಟ್ಟಿಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಅವನ ಉದ್ಧಟತನದಿಂದ ಹೋರಾಟದ ಮೂಲಕ ವಿಮೋಚನೆ ಪಡೆಯುವ ಸಂದರ್ಭವನ್ನು ಸೃಷ್ಟಿಸಿದನು ಯಾರು ಮರೆಯುವುದಿಲ್ಲ. ಆದಕಾರಣ ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಹೋರಾಟದ ಇತಿಹಾಸವನ್ನು ಹೇಳಬೇಕಾದರೆ ವಿಮೋಚನಾ ಸಂಗ್ರಾಮದ ಪ್ರಮುಖರು ಮತ್ತು ತದನಂತರ ಪ್ರದೇಶದ ಏಳಿಗೆಗಾಗಿ ಕಲ್ಯಾಣ ಕರ್ನಾಟಕವೆಂಬ ಉಪಕ್ರಮವನ್ನು ಜಾರಿಗೊಳಿಸಲು ಪ್ರಯತ್ನಿಸಿದ ರಾಜಕೀಯ ಮತ್ತು ಸಾಮಾಜಿಕ ಪ್ರಮುಖ ಮುಖಂಡರ ನಿಸ್ವಾರ್ಥ ಸೇವಾ ಕೆಲಸಗಳನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಾ, ಅವರುಗಳನ್ನು ಹೆಸರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿರಿಸಿ ಹೋರಾಟಗಾರರ ಪಾತ್ರವನ್ನು ಇಲ್ಲಿ ಸಣ್ಣದಾಗಿ ಬರೆಯಲಾಗಿದೆ. ಈ ವಿಮೋಚನೆಯ ಚಳವಳಿಯಲ್ಲಿ ಸ್ವಾಮಿ ರಮಾನಂದ ತೀರ್ಥರು ಅಹಿಂಸಾತ್ಮಕ ಚಳುವಳಿಯನ್ನು ಸಂಘಟಿಸಿದರು. ಕರ್ನಾಟಕದ ಗಾಂಧಿ ಎಂದು ಖ್ಯಾತರಾದ ಹರ್ಡೇಕರ ಮಂಜಪ್ಪ ಸಾಮಾಜಿಕ ಏಳಿಗೆಗೆ ಹೆಚ್ಚಿನ ಒತ್ತು ಕೊಟ್ಟರು. ‘ಒಂದೇ ಮಾತರಂ’ ಚಳವಳಿಗೆ ರಾಮಚಂದ್ರರಾಯರು ಮುಖಂಡರಾದರು. ಮತಾಂಧ  ರಜಾಕಾರರ ವಿರುದ್ಧ  ಹೋರಾಡುವುದರಲ್ಲಿ ರಾಮಚಂದ್ರ ವೀರಪ್ಪ ಅವರ ಹೆಸರು ಎದ್ದು ಕಾಣುತ್ತದೆ. ವಿವಿಧ ಪ್ರದೇಶಗಳಲ್ಲಿ ಹೋರಾಟಕ್ಕೆ ಮುಂದಾಳುತನ ನೀಡಿದವರಲ್ಲಿ ಶ್ರೀಯುತರಾದ ಮಲ್ಲಪ್ಪನವರು, ಚಂದ್ರಶೇಖರ್ ಪಾಟೀಲ್, ಅನ್ನದಾನಯ್ಯ ಪುರಾಣಿಕ, ಶಿವಮೂರ್ತಿಸ್ವಾಮಿ, ಅಳವಂಡಿ ಪ್ರಭುದಾಸ್ ಪಾಟೀಲರು, ಅನಿರುದ್ಧ ದೇಸಾಯಿ, ಶ್ರೀಪಾದರಾವ್ ಕುಲಕರ್ಣಿ, ಚನ್ನಬಸಪ್ಪ ಕುಳಿಗೆರೆ ಪ್ರಮುಖರು. ಶ್ರೀ ಅಪ್ಪಾರಾವ್ ನಿಜಾಮರ ಕಡೆಯವರ ಗುಂಡಿಗೆ ಬಲಿಯಾಗಿ ಅಮರಾದರು.  ರಜಾಕಾರರ ದೌರ್ಜನ್ಯವನ್ನು ಎದುರಿಸಿ ವಿಮೋಚನಾ ಸಂಗ್ರಾಮವನ್ನು ಸಂಘಟಿಸಿ ದವರಲ್ಲಿ ಶರಣಗೌಡ ಇನಾಂದಾರ್ ಅವರ ಹೆಸರು ಮುಂಚೂಣಿಯಲ್ಲಿದ ಕಾರಣದಿಂದ ಇವರನ್ನು ಸರದಾರ ಎಂದೇ ಕರೆಯುತ್ತಾರೆ.ಹೀಗೆ ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಭಕ್ತಿ ಭಾವದಿಂದ ಸ್ಮರಣೆ ಮಾಡಿಕೊಳ್ಳುವ ಮೂಲಕ ಅವರನ್ನು ನಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕೃತಜ್ಞತೆಯಿಂದ ಸ್ಮರಿಸೋಣ : ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ 1938-39ನೆಯ ವರ್ಷಗಳು ಮಹತ್ವಪೂರ್ಣವಾದವು. ಈ ಕಾಲದಲ್ಲಿ ನಿಜಾಮ ಉಗ್ರವಾದಿ ಸಂಘಟನೆಗಳ ಕೈಗೊಂಬೆಯಾಗಿ ಜನಸಾಮಾನ್ಯರನ್ನು

ಪೀಡಿಸುತ್ತಿದ್ದ ಇಂತಹ ಕ್ರೂರತನವನ್ನು ವಿರೋಧಿಸಿ ಪ್ರಾಣತೆತ್ತವರಲ್ಲಿ ಕಲ್ಯಾಣ ಕರ್ನಾಟಕದ ಹೋರಾಟಗಾರರೇ ಆಗಿದ್ದಾರೆ.ಕೆಳಕ್ಕೆ ಬಿದ್ದರೂ ಉಸಿರಿರುವ ತನಕ ಹೋರಾಡಿದ್ದಾರೆ. ಅವರ ಹೋರಾಟದ ಇತಿಹಾಸ ರೋಚಕವಾದುದು. ಮೈನವಿರೇಳಿಸುವಂತಹದು.ಹಾಗಾಗಿ ಇವರ ಹೋರಾಟದ ಚಿತ್ರಣವು ನಮ್ಮಲ್ಲಿ ದೇಶಾಭಿಮಾನವನ್ನು ಉಕ್ಕಿಸುತ್ತದೆ. ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಧೈರ್ಯ ಉತ್ಸಾಹಗಳನ್ನು ತುಂಬಿ ನಮ್ಮಲ್ಲೂ ಹೋರಾಟದ ಕೆಚ್ಚು ಮೂಡುವಂತೆ ಮಾಡುತ್ತದೆ. ಎನ್ನುವ ವಿಚಾರಗಳನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೋಳ್ಳುತ್ತಾ ಡಿವಿಜಿ ಯವರ ಹೇಳಿರುವ ಕೆಲವು ಸಾಲಿನ ನುಡಿಗಳು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತೀರುವೆ. ಹೋರು ಧೀರತೆಯಿಂದ, ಮೊಂಡು ತನದಿಂಬೇಡ| ವೈರ ಹಗೆತನ ಬೇಡ, ಹಿರಿ, ನಿಯಮವಿರಲಿ||

ವೈರಾಗ್ಯ ಕಾರುಣ್ಯ ಮೇಳನವೆ ಧೀರತನ| ಹೋರುದಾತ್ತತೆಯಿಂದ-ಮಂಕುತಿಮ್ಮ|| ಎಂದು ಮತ್ತೊಂದರಲ್ಲಿ ಹೀಗೆ ಹೇಳಿದ್ದಾರೆ.

ಧೈರ್ಯದಿಂದ ಹೋರಾಡು ಮೊಂಡು ತನದಿಂದಲ್ಲ. ನಿನ್ನ ಹೋರಾಟದಲ್ಲಿ ದೊಡ್ಡ ನಿಯಮಗಳಿರಲಿ ವಿರಕ್ತಿ ಮತ್ತು ಕಾರುಣ್ಯದ ಮೇಳೈಸುವಿಕೆಯೇ ಧೀರತನ, ದ್ವೇಷ ಮತ್ತು ಶತೃತ್ವಗಳು ಬೇಡ. ಉದಾತ್ತತೆಯಿಂದ ಹೋರಾಡು ಎನ್ನುತ್ತಾರೆ ಡಿ.ವಿ.ಜಿ.ಯವರು.ಅವರು ತಿಳಿ ಹೇಳಿದಂತೆ ಅಂದರೆ ಅದರಂತೆಯೇ ಕಲ್ಯಾಣ ಕರ್ನಾಟಕಕ್ಕಾಗಿ ಹೋರಾಡಿದ ಹೋರಾಟಗಾರರ ಪಾತ್ರವನ್ನು ಗಮನಿಸಿದಲ್ಲಿ ಡಿವಿಜಿಯವರ ಈ ಕಗ್ಗದಂತೆ ಅವರೆಲ್ಲಾ ಉದಾತ್ತತೆಯಿಂದ ತಮ್ಮದೆಲ್ಲವನ್ನೂ ತೊರೆದು ವಿರಕ್ತಿ ಮತ್ತು ಕರುಣೆಯ ಹಿರಿ ನಿಯಮಗಳಿಗನುಸಾರವಾಗಿ ಹೋರಾಟ ನಡೆಸಿದ್ದು ಕಾಣುತ್ತೇವೆ. ವಿಮೋಚನೆಯ ನಂತರ ಎಲ್ಲರೊಂದಿಗೆ ದ್ವೇಷ ಮತ್ತು ಶತೃತ್ವಗಳಿಲ್ಲದೆ ಸೌಹಾರ್ದತೆಯಿಂದ ಪ್ರೀತಿ ಮತ್ತು ಶಾಂತಿಯಿಂದ ಬಾಳುವ ನೀತಿಯನ್ನು ಹೋರಾಟಗಾರರು ಅನುಸರಿಸುವುದು ಎದ್ದು ಕಾಣುತ್ತದೆ.ಅದಕ್ಕಾಗಿ ಈ ಹೋರಾಟಗಾರನ್ನೆಲ್ಲ ಕೃತಜ್ಞತೆಯಿಂದ ಸ್ಮರಿಸೋಣ. ವಂದಿಸೋಣ ಮತ್ತು ಭಕ್ತಿ ಗೌರವಗಳಿಂದ ನೆನೆಯುತ್ತಾ,ಅವರ ಹೋರಾಟದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನಿಸೋಣ.ಹೀಗೆ ಕಲ್ಯಾಣ ಕರ್ನಾಟಕಕ್ಕಾಗಿ ಹೋರಾಡಿ ಮಡಿದ ಪ್ರಾತಃಸ್ಮರಣೀಯರು ಹಾಗೂ  ಪುಣ್ಯಪುರುಷರನ್ನು ಭಕ್ತಿ ಭಾವ ಗೌರವಗಳಿಂದ ನೆನೆಯೋಣ.

 

ಚಿರಸ್ಥಾಯಿ ಆಗಲಿ :  17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಈ ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ನಿರ್ಮಾಣವಾಯಿತು. ಪ್ರಯುಕ್ತ ಈಗ ಕಲ್ಯಾಣ ಕರ್ನಾಟಕ ಎಂಬ 71 ವರ್ಷಗಳ ಹಳೆಯ ಹೆಸರು ಮರು ನಾಮಕರಣಗೊಂಡಿದೆ. ಈ ಕಲ್ಯಾಣ ಕರ್ನಾಟಕ ಎಂಬ ಹೆಸರು ಶರಣ ಪರಂಪರೆಯನ್ನು ಬಿಂಬಿಸುತ್ತದೆ. ಈ ಹೆಸರು ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಪೂರಕವಾಗಿದೆ.ಇಂತಹ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಾಂತ್ಯವು ನಿಜಾಮನ ಶೋಷಣೆಗೆ ಗುರಿಯಾಗಿದ್ದು ಈ ನಾಡಿನ ದುರದೃಷ್ಟ, ಇತಿಹಾಸದ ದುರಂತ. ಈ ಪ್ರಾಂತ್ಯದ ಹೊಸ ಹೆಸರಿನಲ್ಲಿರುವ ಕಲ್ಯಾಣ ಎಂಬ ಪದವು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ. ಅಷ್ಟೇ ಅಲ್ಲದೇ ಇದು ಶರಣ ಸಂಸ್ಕೃತಿಯ ಇತಿಹಾಸವನ್ನು ನೆನೆಯುವಂತೆ ಮಾಡುತ್ತದೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಜನಮಾನಸದಲ್ಲಿ ಚಿರಸ್ಥಾಯಿ ಆಗುವಲ್ಲಿ ಎರಡು ಮಾತಿಲ್ಲ.ಹೀಗಾಗಿ ಈಗ ಕಲ್ಯಾಣ ಕರ್ನಾಟಕ ಎಂಬ ಹೆಸರೇ ಸಂಚಲನ ಸೃಷ್ಟಿಸುವಂತದ್ದಾಗಿದೆ. ಹೈದರಾಬಾದ್ ಕರ್ನಾಟಕಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 17 ಸಪ್ಟೆಂಬರ್ 2019ರಲ್ಲಿ ಮರು ನಾಮಕರಣ ಮಾಡಿದರು. ಈ ಹೆಸರು ಶರಣ ಪರಂಪರೆಗೆ ಅನ್ವರ್ಥಕವಾಗಿದ್ದು, ರಾಜ್ಯದ ಜನತೆಗೆ ಐತಿಹಾಸಿಕ ದಿನವಾಗಿ ಹಾಗೂ ಚಿರಸ್ಥಾಯಿಯಾಗಿ ಉಳಿಯಲಿ,ಕಲ್ಯಾಣ ನಾಡು ವಿಶ್ವ ತುಂಬೆಲ್ಲಾ ಬೆಳಗಲಿ. ಬೇಸರ – ನೋವಿನ ಸಂಗತಿ :  ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಮತ್ತು ಹೆಚ್ಚಿನ ಆರ್ಥಿಕ ನೆರವು ಅವಶ್ಯ ಹಾಗೂ ಅಗತ್ಯವಾಗಿತ್ತು. ಅಂತೆಯೇ ಇದನ್ನು ನಿವಾರಿಸುವ ಉದ್ದೇಶದಿಂದ 2013ರಲ್ಲಿ ಆರ್ಟಿಕಲ್ 371 (ಜೆ)  ಯಲ್ಲಿ ಒಳಪಡಿಸಿ ವಿಶೇಷ ಸ್ಥಾನಮಾನವನ್ನು ಘೋಷಿಸಿ ನೀಡಲಾಯಿತು. ಅದರನ್ವಯ ಹೈ-ಕ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ವಿಶೇಷ ಸ್ಥಾನಮಾನ ಅನ್ವಯ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮತ್ತು ಪ್ರದೇಶದ ಜನರಿಗೆ ಉದ್ಯೋಗಗಳಲ್ಲಿ ಕಾದಿರಿಸುವಿಕೆ ಸವಲತ್ತು ಸದರಿ ಪ್ರಾಧಿಕಾರದಲ್ಲಿ ನೀಡಲಾಗಿದೆ ಎಂದು ಹೇಳಲಾಯಿತು ಹಾಗೂ ಹೇಳಲಾಗುತ್ತಿದೆ. ಜೊತೆಗೆ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಲು ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಸಹ ಆಗಿದೆ. ಆದರೆ ಅಭಿವೃದ್ಧಿ ಕೆಲಸಗಳು ಬಲು ದೂರು ಎನ್ನುವ ಮಾತುಗಳು ಅಲ್ಲಲ್ಲಿ ಸಧ್ಯ ಕೇಳಿ ಬರುತ್ತಿವೆ.ಇದನ್ನು ಅಭಿವೃದ್ಧಿ ಪಡಿಸುವ ಮೂಲಕ ಹೋಗಲಾಡಿಸಬೇಕಾಗಿದ್ದು ಈ ಭಾಗದ ರಾಜಕೀಯ ಪ್ರತಿನಿಧಿಗಳ ಕೆಲಸವಾಗಿದೆ. ಆ ದಿಸೆಯಲ್ಲಿ ಅವರೆಲ್ಲರೂ ಯೋಚನೆ ಮಾಡಲೆಂದು ವಿನಂತಿಸುತ್ತೇವೆ. ಇನ್ನು ಸಧ್ಯ ಕಲ್ಯಾಣ ಕರ್ನಾಟಕದಲ್ಲಿ  75% ಜನ ಕನ್ನಡ ಭಾಷೆ ಮಾತನಾಡುವವರು ಇದ್ದಾರೆ. ಹದಿನೈದುಕ್ಕೂ ಹೆಚ್ಚು ಭಾಷೆಗಳನ್ನಾಡುವ ಜನ ಇಲ್ಲಿ ವಾಸಿಸುತ್ತಾರೆ. 41 ಶಾಸಕರು ಈ ಪ್ರದೇಶದವರಾಗಿದಾರೆ. 5 ಜನ ಲೋಕಸಭಾ ಸದಸ್ಯರು ಇದ್ದಾರೆ. ಒಟ್ಟು ಸಧ್ಯ ಈಗ ಹೊಸದಾಗಿ ಘೋಷಣೆ ಆಗಿರುವ ಹೊಸಪೇಟೆ ಜಿಲ್ಲೆಯನ್ನು ಸೇರಿಸಿಕೊಂಡರೆ 7 ಜಿಲ್ಲೆಗಳು ಕಲ್ಯಾಣ ಕರ್ನಾಟಕದ ಸುಪರ್ದಿಯಲ್ಲಿವೆ.

ಇದೆಲ್ಲಾ ಈ ಭಾಗದ ಪ್ರಸ್ತುತ ವಸ್ತುಸ್ಥಿತಿಯಾಗಿದೆ ಎಂದು ಹೇಳಬಹುದು.ಆದ್ದರಿಂದ

ಈ ಪ್ರದೇಶದ ಜನರ ಆಶೋತ್ತರಗಳನ್ನು ಈಡೇರಿಸಬೇಕಾದರೆ  ಹೆಸರು ಮರು ನಾಮಕರಣ ಮಾಡಿದರೆ ಸಾಲದು, ಅಭಿವೃದ್ಧಿ ಮಾಡಿದಂತೆ ಆಗುವುದಿಲ್ಲ ಎಂಬುದನ್ನು ಅರಿತು,ಜನಪ್ರತಿನಿಧಿಗಳು ಅಭಿವೃದ್ಧಿ ಕಡೆ ಗಮನ ಹರಿಸುವುದು ಅವಶ್ಯಕವಾಗಿದೆ.

ಆದಕಾರಣ ಅಭಿವೃದ್ಧಿ, ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಉದ್ಯೋಗಗಳಲ್ಲಿ ಕಾಯ್ದಿರಿಸುವಿಕೆ ಹೆಚ್ಚು ಒತ್ತು ಕೊಟ್ಟು, ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಉದ್ದೇಶ ಆಶಯ ಈಡೇರಿದಂತಾಗುತ್ತದೆ.ಜೊತೆಗೆ ಬಸವಕಲ್ಯಾಣ  ಶಿವಶರಣರ ಸಾಮಾಜಿಕ ಕ್ರಾಂತಿಯ ಕೇಂದ್ರಬಿಂದು. ಬಸವಣ್ಣನವರ ‘ಅನುಭವ ಮಂಟಪ’ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕಲ್ಯಾಣ ನಾಡಿನಲ್ಲಿ ಮಾತ್ರ. ಇಂತಹ ಸಾಮಾಜಿಕ ಮತ್ತು ರಾಜಕೀಯ ಪ್ರಾಧಾನ್ಯತೆಯ ನಾಡು

ಜಗತ್ತಿನಲ್ಲಿ ಎಲ್ಲಿ  ಹುಡುಕಿದರು ಸೀಗುವುದಿಲ್ಲ. ಆದ್ದರಿಂದ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳ ದೃಷ್ಟಿಯಿಂದ ಬಹಳ ಹಿಂದುಳಿದಿದೆ. ಈ ಎಲ್ಲಾ ಕಾರಣದಿಂದ ಅದಷ್ಟು ಬೇಗ, ಬಸವಕಲ್ಯಾಣವನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುವುದು ಅವಶ್ಯಕತೆ ಹಾಗೂ ಅನಿರ್ವಾತೆ ಇದೆ.ಎಂಬುದು ದಯವಿಟ್ಟು ಯಾರು ಮರಿಯಬೇಡಿ. ಜೊತೆ ಜೊತೆಗೆ

ಸಧ್ಯ ಇನ್ನು ಹೇಳಬೇಕೆಂದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮೇಲಾಗಿ ಮಳೆಯ ಅಭಾವದಿಂದ  ಈ ಪ್ರದೇಶ  ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ನೆರವು ಮತ್ತು ವಿದ್ಯಾಭ್ಯಾಸ ಮತ್ತು ಉದ್ಯೋಗಗಳಲ್ಲಿ ಕಾಯ್ದಿರಿಸುವಿಕೆ ಹೆಚ್ಚಿನ ಪ್ರಗತಿ ಸಧ್ಯ ಕಾಣುತ್ತಿಲ್ಲ ಎಂಬುವುದೆ ಅತ್ಯಂತ ಬೇಸರ – ನೋವಿನ ಸಂಗತಿ. ಅದಾಗಿಯೂ

ಕಲ್ಯಾಣ ಕರ್ನಾಟಕ ಪ್ರದೇಶ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಚಾರಿತ್ರಿಕವಾಗಿ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖವಾದ ಭೂ ಪ್ರದೇಶ ಹೊಂದಿದೆ. ಈ ಪ್ರದೇಶಕ್ಕೆ ನೈಸರ್ಗಿಕವಾಗಿ ಉತ್ತಮ ಕ್ಷಮತೆಯಿದೆ.ಉತ್ತಮ ಭವಿಷ್ಯವಿದೆ. ಉತ್ತಮ ನೀರಾವರಿ ಸೌಕರ್ಯವನ್ನು ಒದಗಿಸಿದರೆ ಕೃಷಿರಂಗದಲ್ಲಿ ಉತ್ತಮ ಸಾಧನೆಯನ್ನು ಈ ಪ್ರದೇಶದಿಂದ ನಿರೀಕ್ಷಿಸಬಹುದು.ಅಲ್ಲದೆ ರಾಜಕೀಯ ಪೈಪೋಟಿ ಬಿಟ್ಟು  ಒಗ್ಗಟ್ಟಿನಿಂದ ಆಶಯವನ್ನು ಈಡೇರಿಸುವುದು ಪ್ರದೇಶದ ದೃಷ್ಟಿಯಿಂದ ಮುಖ್ಯವಾಗಿದೆ. ಆದ್ದರಿಂದ ರಾಜಕೀಯ ನಾಯಕರು ತಮ್ಮ ಸ್ವ ಪ್ರತಿಷ್ಠೆ ,ಸ್ವಾರ್ಥವನ್ನು ಬದಿಗೊತ್ತಿ, ಇನ್ನಾದರೂ ಈ ಭಾಗದ ಅಭಿವೃದ್ಧಿಗಾಗಿ ದುಡಿಯಲು ಮುಂದಾಗಲೆಂದು ಆಶಿಸುತ್ತಾ,ಒಗ್ಗಟ್ಟಿನಿಂದ ದುಡಿದು ಮುಂದಿನ ಕಲ್ಯಾಣ ಕರ್ನಾಟಕವು ವಿಶ್ವ ಭೂಪಟದಲ್ಲಿ ಐತಿಹಾಸಿಕ ಸುವಾರ್ಣಾಕ್ಷರದ ಚರಿತ್ರೆಯಲ್ಲಿ ಬರೆದಿಡುವಂತೆ ಕೆಲಸ – ಕಾರ್ಯಗಳು ಮಾಡಲೆಂದು ಹಾರೈಸುತ್ತೇನೆ.  ಕೊನೆಯ ಮಾತು : ಕಲ್ಯಾಣ ಕರ್ನಾಟಕ ಸರಹದ್ದಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳು ಗಡಿಯಾಚೆ ಮೀರಿ ಬೆಳೆದು ಬಂದಿವೆ ಎನ್ನುವದಂತು ಸುಳ್ಳಲ್ಲ. ಪ್ರಾಚೀನ ಕಾಲದಿಂದ ಈ ಪ್ರದೇಶವೇ ಜನವಸತಿ ಇರುವ ಪ್ರಾಂತ್ಯವಾಗಿತ್ತು. ಕರ್ನಾಟಕದ ದಕ್ಷಿಣ ಭಾಗಕ್ಕಿಂತ ಕರ್ನಾಟಕದ ಉತ್ತರ ಭಾಗದಲ್ಲಿ ಜನಸಮುದಾಯಗಳು, ರಾಜತ್ವಗಳು, ಧರ್ಮ ಮತ್ತು ಯುದ್ಧಗಳು ಸಂಭವಿಸಿದ್ದು ಇಲ್ಲಿಯೇ ಹೆಚ್ಚು. ಇದಕ್ಕೆ ದೀರ್ಘ ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಜೊತೆಗೆ ಭವ್ಯ ಇತಿಹಾಸವಿದೆ ಬಂಧುಗಳೆ.

ಲೇಖಕರು – ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ. ಪತ್ರಕರ್ತ, ಸಮಾಜಿಕ ಕಾರ್ಯಕರ್ತ.

Leave a Reply

Your email address will not be published. Required fields are marked *