ಸಂದಿಗ್ಧ ಸಂದರ್ಭದಲ್ಲಿ ಸೂಕ್ತ ಆಯ್ಕೆ ಬಸವರಾಜ ಬೊಮ್ಮಾಯಿ.

Spread the love

ಸಂದಿಗ್ಧ ಸಂದರ್ಭದಲ್ಲಿ ಸೂಕ್ತ ಆಯ್ಕೆ ಬಸವರಾಜ ಬೊಮ್ಮಾಯಿ.

ಕರ್ನಾಟಕ ರಾಜ್ಯ ಕಂಡ ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ರಾಜಕೀಯ ನಾಯಕ, ಮಾಜಿ ಮುಖ್ಯಮಂತ್ರಿಗಳ ಮಗ ಬಸವರಾಜ್‌ ಬೊಮ್ಮಾಯಿ ರವರು ಕರುನಾಡು ರಾಜ್ಯದ ಅನಿರೀಕ್ಷಿತವಾಗಿ ಮೂವತ್ತನೇ ಮುಖ್ಯಮಂತ್ರಿಯಾಗಿದ್ದಾರೆ.  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಬಹಳ ಸಂತೋಷ ತಂದಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಪುತ್ರ ಬಸವರಾಜ್‌ ಬೊಮ್ಮಾಯಿರವರು 28 ಜನವರಿ 1960ರಲ್ಲಿ ಜನಿಸಿದರು. ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದು, ಕೃಷಿ ಕಾಯಕದ ಜೊತೆ ಜೊತೆಗೆ ಉದ್ಯಮದಲ್ಲಿ ತೊಡಗಿಸಿಕೊಂಡವರು. ಹಾಗೆ ಸಮಾಜಿಕ ಸೇವೆಗೂ ಮುಂದಾಗಿ ಶ್ರಮಿಸಿದವರು. ತರುವಾಯ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಪ್ರಾರಂಭದಲ್ಲಿ ಜನತಾದಳದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಬೊಮ್ಮಾಯಿ ರವರು1995ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.ಹಾಗೆ 1996–1997ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ ಎಚ್‌ ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ರಾಜಕೀಯ ರಂಗದಲ್ಲಿ (ಹೆಜ್ಜೆ ಗುರುತುಗಳನ್ನು ಮೂಡಿಸಿದರು) ಸಂಪೂರ್ಣವಾಗಿ ತೊಡಗಿಸಿಕೊಂಡು ಜನರ ದ್ವನಿಯಾಗಿ ಕೆಲಸ ಮಾಡಿದ್ದು ಕಾಣುತ್ತೇವೆ. ಹೀಗೆ ಜನಸಾಮಾನ್ಯರ ಸೇವೆ ಮಾಡುತ್ತಾ 1998ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ‌(ಧಾರವಾಡ) ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಧಾನಸೌಧ ಪ್ರವೇಶಿಸಿದರು.ಹೀಗೆ ವಿಧಾನಸೌಧಕ್ಕೆ ಕಾಲಿಟ್ಟವರು ಮತ್ತೆ ತಿರುಗಿ ನೋಡಿದ್ದೇ ಇಲ್ಲ. 2004ರಲ್ಲಿಯೂ ಎಂಎಲ್‌ಸಿಯಾಗಿ ಪುನರಾಯ್ಕೆಯಾಗಿ ಸೈ ಎನಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಲ್ಲಿದ್ದ ಬಸವರಾಜ್‌ ಬೊಮ್ಮಾಯಿ ಅವರನ್ನು 2008ರಲ್ಲಿ ಸ್ವತಃ ಯಡಿಯೂರಪ್ಪ ಮುತುವರ್ಜಿ ವಹಿಸಿ ಬಿಜೆಪಿಗೆ ಕರೆದುಕೊಂಡು ಬಂದರು. ಫೆಬ್ರವರಿ 9ರಂದು ಜೆಡಿಯು ತೊರೆದು ಕಮಲ ಪಾಳಯ ಸೇರಿದ,ಬೊಮ್ಮಾಯಿ ರವರು ತಮ್ಮ ಸೋದರ ಮಾವ ಮಲ್ಲಪ್ಪ ಹುರುಳಿಕೊಪ್ಪಿ ರವರು(1952ರಲ್ಲಿ) ಪ್ರತಿನಿಧಿಸುತ್ತಿದ್ದ ಹಾವೇರಿಯ ಶಿಗ್ಗಾಂವ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು,2008 ರಲ್ಲಿ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಪಡೆದುಕೊಂಡು ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡಿದರು. ಅಷ್ಟೇ ಅಲ್ಲ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ, ಜಲ ಸಂಪನ್ಮೂಲ ಹಾಗೂ ಸಹಕಾರ ಖಾತೆಯೂ ಅವರಿಗೆ ನೀಡಿದರು. ಮುಂದೆ ಸಿಎಂ ಸ್ಥಾನದಲ್ಲಿ ಆಸೀನರಾದ ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌  ರವರ ಸಮಯದಲ್ಲಿಯೂ ಸಹ ಬೊಮ್ಮಾಯಿ ರವರ ಖಾತೆ ಬದಲಾವಣೆ ಮಾಡದೇ ಅದೇ ಖಾತೆಯಲ್ಲಿ ಮುಂದುವರೆಯುವ ಮೂಲಕ  ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದಾರೆ. ಹೀಗೆ ಯಡಿಯೂರಪ್ಪ ಅವರಿಗೆ ಅತ್ಯಾಪ್ತರಾಗಿದ್ದರೂ, ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬೊಮ್ಮಾಯಿ ಮಾತ್ರ ಬಿಜೆಪಿಯಲ್ಲೇ ಉಳಿದುಕೊಂಡು ಬಿಟ್ಟರು. ಬಿಎಸ್‌ವೈ ಮತ್ತೆ ಬಿಜೆಪಿ ಬರುತ್ತಿದ್ದಂತೆ ಬೊಮ್ಮಾಯಿ ರವರ ಜತೆಗಿನ ಸ್ನೇಹ ಪುನಃ ಹಳೆ ದಿನಗಳಿಗೆ ಮರಳಿತು ಬಂಧುಗಳೆ.

ಪರಿಣಾಮ 2019 ರಲ್ಲಿ ಪುನಃ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದಾಗ ಬಿಜೆಪಿಯ ಹಿರಿತಲೆಗಳನ್ನೆಲ್ಲ ಹಿಂದಿಕ್ಕಿ ಪ್ರಭಾವಿ ಗೃಹ ಸಚಿವ ಸ್ಥಾನವನ್ನು ಬೊಮ್ಮಾಯಿ ಯವರು ಪಡೆದು ಕೊಂಡಿದ್ದು ತಮ್ಮಗೆಲ್ಲರಿಗೂ ಗೊತ್ತಿರುವ ವಿಚಾರವೇ.

ಹಾಗಾಗಿ ಯಡಿಯೂರಪ್ಪನವರ ಜತೆ ತೀರಾ ಆಪ್ತರಾಗಿರುವ 61 ವರ್ಷ ಬೊಮ್ಮಾಯಿ ಅವರು ಮೂಲತಃ ಬಿಜೆಪಿಯವರು ಅಲ್ಲದಿದ್ದರೂ, ಸಿಎಂ ಕುರ್ಚಿ ಅವರ ಪಾಲಿಗೆ ಒಲಿದು ಬಂದಿದೆ.ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಅಪ್ಪ – ಮಗ ಇಬ್ಬರೂ ಸಿಎಂ ಆದ ಎರಡನೇ ಜೋಡಿ ಎಂಬ ಹೆಗ್ಗಳಿಕೂ ಬೊಮ್ಮಾಯಿರವರು ಪಾತ್ರರಾಗಿದ್ದಾರೆ.

ಸೂಕ್ತ ನಾಯಕನ ಆಯ್ಕೆ: ಕೇಂದ್ರ ಸರ್ಕಾರದ ಪ್ರಭಾವದಡಿಯಲ್ಲಿ ಹೊಸ ನಾಯಕನನ್ನು ಸೃಷ್ಟಿ ಮಾಡುವ ಆಶಯವನ್ನು ಬಿಜೆಪಿ ಹೈ ಕಮಾಂಡ್ ಹೊಂದಿತ್ತು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪನವರು ಬಿಟ್ಟರೆ ಬೇರೆ ಜನಾಕರ್ಷಕ ನಾಯಕರು ಇಲ್ಲವೇ ಇಲ್ಲ ಅನ್ನುವ ಮಟ್ಟಿಗೆ ರಾಜ್ಯ ಬಿಜೆಪಿ ಬಂದು ನಿಂತಿದೆ. ಎಂಬುದು ಕೇಂದ್ರ ನಾಯಕರಿಗೆ ಮನವರಿಕೆಯಾದ ನಂತರ ಎಷ್ಟು ದಿನ ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡು ಇರಬೇಕು ಎಂಬ ಜಿಜ್ಞಾಸೆ ಒಂದು ಕಡೆ ಆದರೆ ಇನ್ನೊಂದು ಕಡೆಯಲ್ಲಿ ಸೂಕ್ತ ಸಮಯಕ್ಕಾಗಿ ಕಾದಿತ್ತು, ಆ ಸಮಯ ಕಳೆದ ಒಂದು ವಾರದ ಹಿಂದೆ ಬಂದೆ ಬಿಟ್ಟಿತ್ತು. ತರುವಾಯ  ಯಡಿಯೂರಪ್ಪ ಇಲ್ಲದ ಬಿಜೆಪಿ ಇಲ್ಲ ಎಂಬ ಮಾತು ಹೋಗಲಾಡಿಸಬೇಕೆಂದು ಹೊಸ ನಾಯಕನ ಆಯ್ಕೆಗೆ  ಆತಂಕದ ನಡುವೆ ಹುಡುಕಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು.ಅದರಂತೆ  ಬಿಜೆಪಿ ಹೈ ಕಮಾಂಡ್ ಕರ್ನಾಟಕದ ರಾಜಕೀಯ ನಾಡಿ ಮಿಡಿತವನ್ನು ಸಮರ್ಪಕವಾಗಿ ಗಮನಿಸಿ. ಹತ್ತಾರು ಹೆಸರುಗಳನ್ನು ತೇಲಿ ಬಿಟ್ಟು, ಅನೇಕರಿಗೆ ಆಸೆ ಹುಟ್ಟಿಸಿ,ಅಳೆದು ತೂಗಿ, ಕೊನೆಗೆ ಯೋಗ್ಯ,ವಿಶಾಲ ಮನೋಭಾವದ ವ್ಯಕ್ತಿಯನ್ನು ಆಯ್ಕೆ ಮಾಡಿತ್ತು, ಮಾಡಿದಾರೆ.ಈ ತನ್ಮೂಲಕ ವಿವಾದಗಳಿಲ್ಲದ, ಸ್ನೇಹ ಸ್ವಭಾವದ ಬಸವರಾಜ ಬೊಮ್ಮಾಯಿ ರವರನ್ನು ಆಯ್ಕೆ ಮಾಡಿದ್ದು ಸೂಕ್ತ ಮತ್ತು ಸಮಂಜಸವಾಗಿದೆ. ಈದಿಗ ಯಡಿಯೂರಪ್ಪ ರವರನ್ನು ಅತ್ಯಂತ ಹೀನಾಯವಾಗಿ ಅಪಮಾನ, ಅವಮಾನ ಮಾಡುವ ಮೂಲಕ ನಿಂಧಿಸಿ, ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದವರಿಗೆ  ಹೈ ಕಮಾಂಡ್ ಸರಿಯಾದ ಶಿಕ್ಷೆ ಕೊಟ್ಟಿದೆ ಎನ್ನಬಹುದು. ಯಡಿಯೂರಪ್ಪ ನವರು ಅಧಿಕಾರ ಕಳೆದುಕೊಳ್ಳಲು ಕಾರಣರಾದ ಕೆಲವರಿಗೆ ಈ ಆಯ್ಕೆ ಆಘಾತ ಉಂಟಾಗಿದೆ. ಅವರೀಗ ನುಂಗಲು ಆಗದೆ, ಉಗಳಲು ಆಗದೇ, ವಿಚಿತ್ರ ಸಂಕಟ ಎದುರಿಸುವಂತಾಗಿದೆ ಎಂದರೆ ತಪ್ಪಾಗಲಾರದು. ನಿಷ್ಕಲ್ಮಶ ವ್ಯಕ್ತಿ :ಸಂಭಾವಿತ ಮತ್ತು ಯಾವುದೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳದ ನಾಯಕ. ಪಕ್ಷಕ್ಕೆ ನಿಷ್ಠರಾಗಿದ್ದ ಬೊಮ್ಮಾಯಿ ಉಳಿದ ನಾಯಕರ ಹಾಗೆ ದೆಹಲಿಗೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಿರಲಿಲ್ಲ. ಉಳಿದ ನಾಯಕರ ಹಾಗೆ ಕೀಳಾಗಿ, ಹಗುರವಾಗಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಿರಲಿಲ್ಲ. ಯಾವುದೇ ರೀತಿಯ ಜಾತಿಯ ಬಲ ಪ್ರದರ್ಶನ ಮಾಡಿರಲಿಲ್ಲ. ಎಲ್ಲವನ್ನೂ ನೋಡಿಕೊಂಡು ಮೌನವಾಗಿ ಇದ್ದವರು. ಅಲ್ಲದೆ ಎಂದಿಗೂ ಬೊಮ್ಮಾಯಿ ರವರು ಸ್ವಾರ್ಥ ರಾಜಕೀಯ ಮಾಡಿದವರಲ್ಲ, ಕೊಟ್ಟ ಖಾತೆಯನ್ನು ಸಮರ್ಥವಾಗಿ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ಕ್ರಿಯಾಶೀಲ ವ್ಯಕ್ತಿತ್ವದವರು. ಅತಿಯಾದ ಮಹತ್ವಾಕಾಂಕ್ಷೆ ಇರದ ಸರಳ ಸ್ವಭಾವದ ನಿಷ್ಕಲ್ಮಶ ವ್ಯಕ್ತಿ. ಹೀಗೆ ಪಕ್ಷ ನಿಷ್ಠೆ ಹಾಗೂ ಯಡಿಯೂರಪ್ಪ ರವರ ಜೊತೆಯಲ್ಲಿ ಆಪ್ತ ಒಡನಾಟ ಹೊಂದಿದ್ದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರನ್ನು  ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.ಹಾಗಾಗಿ ಈದಿಗ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದು ಅತೀವ ಸಂತಸ ತಂದಿದೆ. ಬೊಮ್ಮಾಯಿ ರವರ ಸಾರಥ್ಯದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹೊಂದುವ ದಾರಿಯಲ್ಲಿ ಸಾಗಲಿ, ಕಲ್ಯಾಣ ಕರ್ನಾಟಕಕ್ಕೆ ಹೊಸ ಆಯಾಮ ಸಿಗಲಿ, ಉತ್ತಮ,ಕಳಂಕ ರಹಿತ ಆಡಳಿತ ನೀಡಲಿ ಎಂದು ನಾಡಿನ ಜನಸಾಮಾನ್ಯರ ಆಶಯವಾಗಿದೆ. ಅಭಿನಂದನೀಯ ಮಾತು : ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ‌ ಸ್ವೀಕರಿಸಿದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರುನಾಡು ಕಂಡ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಅಪರೂಪದ ನೇತಾರರು.ಯಡಿಯೂರಪ್ಪನವರು ಅಪಾರವಾಗಿ ನಂಬಿದ್ದ ಅನೇಕರಲ್ಲಿ ಬೊಮ್ಮಾಯಿ ರವರು ಪ್ರಮುಖರು ಎಂಬುದು ಸತ್ಯ.ಹಾಗಾಗಿ ರಾಜಕಾರಣದಲ್ಲಿ ಯಾರೂ,ಯಾವುದೂ ಶಾಶ್ವತ ಅಲ್ಲ ಎಂಬುದನ್ನು ಬೊಮ್ಮಾಯಿ ರವರು ಮುಖ್ಯಮಂತ್ರಿ ಯಾಗುವ ಮೂಲಕ ಮತ್ತೆ ಮತ್ತೆ ಸಾಬೀತು ಮಾಡಿ ತೋರಿಸಿಕೊಟ್ಟಿದ್ದಾರೆ.ಹೀಗೆ ಅಪ್ಪಟ ಯಡಿಯೂರಪ್ಪ ನವರ ಅಭಿಮಾನಿ ನಿಷ್ಟರಾಗಿ,ಯಡಿಯೂರಪ್ಪನವರು ಹೇಳಿದ ಮಾತುಗಳು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುವುದರಿಂದ ಈದಿಗ ಬಸವರಾಜ ಬೊಮ್ಮಾಯಿರವರಿಗೆ ವರವಾಗಿ ಪರಿಣಮಿಸಿದೆ ಎಂದೇ ಹೇಳಬಹುದು. ಸೌಮ್ಯ ಸ್ವಭಾವ ಮತ್ತು ಉತ್ತಮ ಅಪಾರ ಅನುಭವವುಳ್ಳ ಹಿರಿಯ ರಾಜಕಾರಣಿ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅಣ್ಣ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದಂತೆ ಅವರಿಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಆಡಳಿತ ಅನುಭವ ಉಪಯೋಗಿಸಿಕೊಂಡು ಪಾರದರ್ಶಕ ಆಡಳಿತ ನೀಡಲೆಂದು ಆಶಿಸುತ್ತಾ, ಬೊಮ್ಮಾಯಿ ರವರಿಗೆ ಬಸವಾದಿ ಪ್ರಮಥರ ಹಾಗೂ ವಿಶ್ವ ದಾರ್ಶನಿಕರು ಉತ್ತಮ ಆಯುಷ್ಯ, ಆರೋಗ್ಯ ಕರುಣಿಸಿ ನಾಡಿಗೆ ಇನ್ನಷ್ಟು ಸೇವೆ ಸಲ್ಲಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿ,ಶುಭ ಹಾರೈಸುತ್ತೇನೆ. ಕೊನೆಯ ಮಾತು :  ಜನ ನಾಯಕರನ್ನು ಯಾರೂ ಸೃಷ್ಟಿ ಮಾಡಲಾರರು. ಜನ ನಾಯಕರಾದವರು  ತಮ್ಮ ವ್ಯಕ್ತಿತ್ವವನ್ನು ತಾವೇ ನಿರ್ಮಾಣಮಾಡಿಕೊಳ್ಳಬೇಕು, ರೂಪಿಸಿಕೊಳ್ಳಬೇಕು ಎಂಬುದು ವಾಸ್ತವಿಕ ವಿಚಾರ.‌ ಆದಕಾರಣ ಈ ಹಿನ್ನೆಲೆಯಲ್ಲಿ ನೋಡಿದಾಗ ಒಳ್ಳೆಯ ಆಡಳಿತ ನೀಡುವ ಸಾಮರ್ಥ್ಯ ಅನೇಕರಿಗೆ ಇರಬಹುದು. ಆದರೆ ಮಾಸ್ ನಾಯಕರ ಕೊರತೆಯನ್ನು ಕನ್ನಡ ನಾಡು ಸಧ್ಯ ಎದುರಿಸುತ್ತಿದೆ ಎಂಬುವದಂತು ನಿಜ.

ವರದಿ – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ. ಬರಹಗಾರ ಹಾಗೂ ಪರಿಸರ ಸಂರಕ್ಷಕ.

Leave a Reply

Your email address will not be published. Required fields are marked *