ಮಾಧ್ಯಮನೀತಿ ಸರಳೀಕರಣ- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ IFSMNನಿಂದ ಸಿಎಂಗೆ ಮನವಿ

Spread the love

ಮಾಧ್ಯಮನೀತಿ ಸರಳೀಕರಣವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ IFSMNನಿಂದ ಸಿಎಂಗೆ ಮನವಿ

ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ‘ಮಾಧ್ಯಮ ನೀತಿ’ಯನ್ನು ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಬೇಕು ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಣ್ಣ ಪತ್ರಿಕೆಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳಿಗೆ ವಿಶೇಷ ಜಾಹೀರಾತುಗಳನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ (ರಿ.,) ನವದೆಹಲಿಯ ಶಿವಮೊಗ್ಗ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸುತ್ತಿರುವ ಹೊಸ ‘ಮಾಧ್ಯಮ ನೀತಿ’ಯಲ್ಲಿ ಈ ಕೆಳಕಂಡ ಸಲಹೆಗಳನ್ನು ಸ್ವೀಕರಿಸಬೇಕೆಂದು ಕೋರಿಕೊಳ್ಳಲಾಯಿತು. ೧. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದೃಶ್ಯಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆಯಿಂದಾಗಿ ಮುದ್ರಣ ಮಾಧ್ಯಮ ಸೊರಗುತ್ತಿದೆ. ಮುದ್ರಣ ಮಾಧ್ಯಮದ ವಿತರಣೆಯೇ ದೊಡ್ಡ ಸಮಸ್ಯೆಯಾಗುತ್ತಿದೆ. ಹಾಗಾಗಿ ಸ್ಥಳೀಯ ದಿನಪತ್ರಿಕೆಗಳನ್ನು ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಳಿಸಲು ಈಗಿರುವ ಕನಿಷ್ಠ ಪ್ರಸಾರ ಸಂಖ್ಯೆಯ ಮಿತಿಯನ್ನು 2 ಸಾವಿರದಿಂದ 1 ಸಾವಿರಕ್ಕೆ ಇಳಿಸಬೇಕು. ಪ್ರಾದೇಶಿಕ ದಿನಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ಮೂಲ ಜಿಲ್ಲೆಯಲ್ಲಿ 5 ಸಾವಿರದಿಂದ 3 ಸಾವಿರಕ್ಕೆ ನಿಗದಿಪಡಿಸಬೇಕು. ೨. ಜಿಲ್ಲಾ ಮಟ್ಟದ ದಿನಪತ್ರಿಕೆಗಳಿಗೆ ಈಗಿನ ನೀತಿಯಲ್ಲಿ ಮುದ್ರಣ ವಿಸ್ತೀರ್ಣವನ್ನು 3200 ಚ.ಸೆಂ.ಮೀ. ಅಳತೆಗೆ ನಿಗದಿಪಡಿಸಲಾಗಿದೆ. ಆದರೆ, ಬಹುತೇಕ 6400 ಚ.ಸೆಂ.ಮೀ. ಮುದ್ರಣ ವಿಸ್ತೀರ್ಣ ಹೊಂದಿರುವ ಪತ್ರಿಕೆಗಳನ್ನೂ ಜಿಲ್ಲಾಮಟ್ಟದ ದಿನಪತ್ರಿಕೆಗಳು ಎಂದೇ ಪರಿಗಣಿಸಲಾಗಿದೆ. 6400 ಚ.ಸೆಂ.ಮೀ. ಮುದ್ರಣ ವಿಸ್ತೀಣ೯ದ ಪತ್ರಿಕೆಗಳಿಗೆ ಸೂಕ್ತ ವೈಟೇಜ್ ನಿಗದಿಪಡಿಸಿ, ಪ್ರಾದೇಶಿಕ ದಿನಪತ್ರಿಕೆಗಳಿಗೆ ನೀಡುವಂತೆ ಸವಲತ್ತುಗಳನ್ನು ಒದಗಿಸಬೇಕು. ೩. ಜಿಲ್ಲಾ ಮಟ್ಟದ ಪತ್ರಿಕೆಗಳು 10ವರ್ಷ ಮೀರಿ ಸೇವೆ ಸಲ್ಲಿಸಿದ ನಂತರ ಸೇವಾ ಹಿರಿತನ ಪರಿಗಣಿಸಿ ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವಂತೆ ಸೂಕ್ತ ವೈಟೇಜ್  ನೀಡಬೇಕು. ೪. ಪಾಕ್ಷಿಕ, ಮಾಸಿಕ ಪತ್ರಿಕೆಗಳಿಗೆ ಮುದ್ರಣ ವಿಸ್ತೀರ್ಣವನ್ನು ಕಡಿಮೆ ಮಾಡಿ ನಿಗದಿಗೊಳಿಸುವುದು. ೫. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿಶೇಷ ಜಾಹೀರಾತುಗಳನ್ನು ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವಷ್ಟೇ ಪ್ರಮಾಣದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ನೀಡುವುದು. ೬. ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಕನಿಷ್ಠ 5 ವರ್ಷ ಪೂರೈಸಿದ್ದು, ನಿರಂತರವಾಗಿ ಪ್ರಕಟವಾಗುವ ಸ್ಥಳೀಯ ದಿನ ಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕ ಹಾಗೂ ಮಾಸ ಪತ್ರಿಕೆಗಳಿಗೆ ರಾಷ್ಟ್ರೀಯ ಹಬ್ಬ ಹಾಗೂ ನಾಡ ಹಬ್ಬಗಳ ಜಾಹೀರಾತುಗಳನ್ನು ನೀಡುವುದು. ೭. ರಾಜ್ಯಮಟ್ಟದ ಪತ್ರಿಕೆಗಳ ಪಟ್ಟಿಯಲ್ಲಿರುವ ಪತ್ರಿಕೆಗಳ ಸ್ಥಳೀಯ ಆವೃತ್ತಿಗಳನ್ನು ಪ್ರಾದೇಶಿಕ ಪತ್ರಿಕೆಗಳು ಎಂದು ಪರಿಗಣಿಸುವುದು. ೮. ಅಂತರ್ಜಾಲ/ ವೆಬ್‌ಪೋರ್ಟಲ್‌ಗಳಿಗೆ ಹಾಗೂ ಸ್ಥಳೀಯ ಕೇಬಲ್ ಟಿ.ವಿ. ಚಾನೆಲ್‌ಗಳಿಗೆ ೨೦೧೩ರ ಜಾಹೀರಾತು ನೀತಿಯಲ್ಲಿ ಜಾಹೀರಾತು ದರಗಳನ್ನಷ್ಟೇ ತಿಳಿಸಲಾಗಿದೆ. ಆದರೆ, ಇವುಗಳಿಗೆ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಳಿಸಲು ಇರಬೇಕಾದ ಅರ್ಹತೆಗಳು/ ಅನರ್ಹತೆಗಳ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲ. ಅದರ ಮಾನದಂಡವನ್ನು ಸ್ಪಷ್ಟವಾಗಿ ತಿಳಿಸುವುದು. ೯. ಸ್ಥಳೀಯ ಪತ್ರಿಕೆಗಳು ಇಲಾಖಾ ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ನೀಡಬೇಕಾದ ದಾಖಲೆಗಳನ್ನು ಸರಳೀಕರಣಗೊಳಿಸುವುದು. ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಂಡ ಪತ್ರಿಕೆಗಳ ದಾಖಲೆಗಳನ್ನು ಸಮರ್ಪಕವಾಗಿ ನೀಡುವಂತೆ ಕಡ್ಡಾಯಗೊಳಿಸುವುದು. ೧೦. ಇಲಾಖೆಯಿಂದ ನೀಡುವ ಎಲ್ಲಾ ಜಾಹೀರಾತುಗಳನ್ನೂ ಪ್ರಕಟಿಸಲು ಪ್ರಥಮ ಆದ್ಯತೆಯನ್ನು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡುವುದು. ೧೧. ಆರ್.ಎನ್.ಐ.ನಿಂದ ನೊಂದಾಯಿಸಿ ಪ್ರಕಟಿಸುತ್ತಿರುವ ಎಲ್ಲಾ ಪತ್ರಿಕೆಗಳಿಗೆ, ಆನ್‌ಲೈನ್ ಪೋರ್ಟಲ್‌ಗಳಿಗೆ ಲಾಕ್‌ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಒದಗಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಯಿತು ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್.  ಯಡಿಯೂರಪ್ಪ ಅವರು, ಈ ಕುರಿತು ಇಲಾಖಾ ಅಧಿಕಾರಿಗಳೊಂದಿಗೆ ಚಚಿ೯ಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಒಕ್ಕೂಟದ ಪದಾಧಿಕಾರಿಗಳಿಗೆ ನೀಡಿದರು. ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಬಸವರಾಜು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಸುಧಾಕರ್ ಅವರುಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ,  ಸಣ್ಣ ಪತ್ರಿಕೆಗಳು, ಆನ್‌ಲೈನ್ ಪೋರ್ಟಲ್‌ಗಳಿಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಇಲಾಖೆಗಳಿಂದ ವಿಶೇಷ ಜಾಹೀರಾತು ನೀಡುವಂತೆ  ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವದ್ವಯರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಲ್ಫೋನ್ಸ್ ರಾಕೇಶ್ ಡಿಸೋಜಾ, ಜಿಲ್ಲಾಧ್ಯಕ್ಷ ಜಿ.ಆರ್. ಷಡಾಕ್ಷರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಡಿ. ಕಮಲಾಕ್ಷ, ಸಂಪಾದಕರುಗಳಾದ ಬಿ.ಸಿ. ಶಿವರಾಜ್, ಸತೀಶ್ ಮುಂಚೆಮನೆ, ನಿಖಿಲ್, ಶಶಿಕುಮಾರ್, ವರದಿಗಾರರಾದ ಬಸವ, ದೇವಾನಂದ್ ಮತ್ತಿತರರಿದ್ದರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *