ದೊರೆಯದ ಆಂಬ್ಯುಲೆನ್ಸ್ ಡೋಲಿಯಲ್ಲಿ ಗರ್ಭಿಣಿಯನ್ನು ಹೊತ್ತು ತಂದ ಕುಟುಂಬ,,,,,,

Spread the love

ದೊರೆಯದ ಆಂಬ್ಯುಲೆನ್ಸ್ ಡೋಲಿಯಲ್ಲಿ ಗರ್ಭಿಣಿಯನ್ನು ಹೊತ್ತು ತಂದ ಕುಟುಂಬ,,,,,,

ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಕಾಣಿಸಿಕೊಂಡಿದ್ದರಿಂದ ಡೋಲಿ ಕಟ್ಟಿ 8 ಕಿಮೀ ಹೊತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ಹನೂರು ತಾಲೂಕಿನ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ. ದೊಡ್ಡಾಣೆ ಗ್ರಾಮದ ಶಾಂತಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಯಾವುದೇ ಸಾರಿಗೆ ಸಂಪರ್ಕ ಲಭಿಸದೇ 8 ಕಿಮೀ ದೂರದ ಮಾರ್ಟಳ್ಳಿ ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸಿದ್ದು ಸದ್ಯ ಶಾಂತಲಾ ಅವರ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಡಿನೊಳಗೆ ಇರುವ ಗ್ರಾಮಗಳ ಸಂಪರ್ಕಕ್ಕಾಗಿ ಜನವನ ಸಾರಿಗೆ ಎಂದು ಜೀಪ್ ಗಳನ್ನು ಒದಗಿಸಲಾಗಿದೆ. ಆದರೆ, ಜೀಪ್ ಚಾಲಕ, ಆಂಬುಲೆನ್ಸ್‌ ಚಾಲಕನಿಗೆ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದ್ದರಿಂದ ಡೋಲಿ ಮೂಲಕ ಹೊತ್ತು ಸಾಗಿಸಿದ್ದಾರೆ. ಮಲೆ ಮಹದೇಶ್ವರಬೆಟ್ಟ ತಪ್ಪಲಿನ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿರುವ ಅರಣ್ಯ ಇಲಾಖೆ ಗರ್ಬಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗೆ ಜಾರಿಗೆ ತಂದಿರುವ ಜನವನ ಸಾರಿಗೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಬ್ಯುಲೆನ್ಸ್ ಇದ್ದೂ ಇಲ್ಲದಂತಾಗಿದ್ದು ಗ್ರಾಮಸ್ಥರನ್ನು ಘಾಸಿ ಮಾಡಿದೆ. ವಾಹನ ಚಾಲಕರು, ಅಧಿಕಾರಿಗಳು ಮೊಬೈಲ್ ಆಫ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಅವರ ಜವಾಬ್ದಾರಿ ಆಗಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಲೆ ಇರುತ್ತಿವೆ. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸರಕಾರಗಳು‌ ವಿಫಲವಾಗುತ್ತಿವೆ. ಇನ್ನಷ್ಟು ಆಂಬ್ಯೂಲೆನ್ಸ್ ಗಳನ್ನು ಹೆಚ್ಚಿಸಬೇಕು. ಅದನ್ನು ನಿರ್ವಹಿಸಲು ಸಮರ್ಥ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲು‌ ಸರಕಾರ ಮುಂದಾಗಬೇಕು ಎಂದು ಜನಪರ ಸಂಘಟನೆಗಳು‌ ಎಚ್ಚರಿಸಿವೆ.

ವರದಿ – ಸಂಪಾದಕೀಯ

Leave a Reply

Your email address will not be published.