ಹೂವುಗಳ ಪ್ರತಿಕೃತಿಗಳೊಂದಿಗೆ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಫ್ಲವರ್ ಕೌನ್ಸಿಲ್

Spread the love

ಹೂವುಗಳ ಪ್ರತಿಕೃತಿಗಳೊಂದಿಗೆ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಫ್ಲವರ್ ಕೌನ್ಸಿಲ್..

ಬೆಂಗಳೂರು ಮಾರ್ಚ್‌ ೯: ಹೂವು ಬೆಳೆಗಾರರ ಸಂಘಟನೆಯಾದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ (ಜಿಎಫ್ ಸಿಐ) ‘ಫ್ಪೋರಲ್ ಇಕೊ’ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದಲ್ಲಿ ವಿಶಿಷ್ಟವಾಗಿ ಆಚರಿಸಿತು. ದೇಶದ ಸಂಗೀತ ಕ್ಷೇತ್ರದ ಸಾಧಕರಾದ ಭಾರತರತ್ನ ದಿ. ಎಂ.ಎಸ್. ಸುಬ್ಬುಲಕ್ಷ್ಮಿ, ಇತ್ತೀಚೆಗೆ ನಿಧನರಾದ ಗಾನ ಕೋಗಿಲೆ ದಿ. ಲತಾ ಮಂಗೇಶ್ಕರ್ ಸೇರಿದಂತೆ ಹಲವು ಮಹಿಳಾ ಸಾಧಕಿಯರ ಹೂವುಗಳ ಕಾಲ್ಪನಿಕ ಚಿತ್ರಗಳನ್ನು ನಿರ್ಮಿಸುವ ಮೂಲಕ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಅಷ್ಟೇ ಅಲ್ಲ ಕ್ರೀಡಾ ಸಾಧಕಿ ಮೇರಿಕೋಮ್ ಮತ್ತಿತರ ವ್ಯಕ್ತಿತ್ವವನ್ನು ಫ್ಲೋರಲ್ ಆರ್ಟ್ ಮೂಲಕ ರಚಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. “ಮಹಿಳೆ ಈ ದೇಶದ ಸಂಸ್ಕೃತಿ, ಗೌರವದ ಪ್ರತೀಕ. ಅವರನ್ನು ಒಂದು ದಿನ ನೆನೆಯುವುದಲ್ಲ. ಪ್ರತಿ ಹಂತದಲ್ಲೂ ಅವರು ನಮಗೆ ಸ್ಫೂರ್ತಿ. ಹೀಗಾಗಿ ನಾವು ನಮ್ಮ ಸಂಘಟನೆಯಿಂದ ಆರ್ಕಿಡ್, ಗುಲಾಬಿ, ಸೂರ್ಯಕಾಂತಿ, ಕ್ರಿಸಾಂತಿಮಮ್, ಜಿಪ್ಲೊಫಿಲಾ, ಜರ್ಬೆರಾ, ಲಿಸಿಯಾಂತಸ್, ಆಂಥೋರಿಯಂ ಸೇರಿದಂತೆ ದೇಶದಲ್ಲಿ ಬೆಳೆಯುವ ಹಲವು ಬಗೆಯ ನೈಜ ಹೂವುಗಳನ್ನು ಬಳಸಿ ಹೃದಯಾಕಾರದ ವಿನ್ಯಾಸಗಳನ್ನು, ಕಾಲ್ಪನಿಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಿದೆವು’ ಎಂದು ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಶ್ರೀಕಾಂತ ಬೊಲ್ಲೆಪಲ್ಲಿ ತಿಳಿಸಿದರು. ಮಹಿಳಾ ಯೋಧರನ್ನು ಗುರುತಿಸಲು, ಪ್ರಶಂಸಿಸಲು ಮತ್ತು ಎಲ್ಲಾ ಹೂ ಬೆಳೆಗಾರರಿಗೆ ಜಿಎಫ್ ಸಿಐ ಅನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ, ಸಂಸ್ಥೆಯ ಪ್ರಧಾನ ವಿಜ್ಞಾನಿ ಶೀಲಾ ಮಾನೆ, ಸಂಸ್ಥೆಯ ನಿರ್ದೇಶಕ ಶಶಿ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *