ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ‘ಮತಾಂತರ ನಿಷೇಧ’ ಕಾಯ್ದೆ ವಾಪಸಾತಿಗಾಗಿ ಸಿಪಿಐಎಂ ಪ್ರತಿಭಟನೆ…

Spread the love

ಧಾರ್ಮಿಕ ಸ್ವಾತಂತ್ರ್ಯ ಕಸಿಯುವಮತಾಂತರ ನಿಷೇಧಕಾಯ್ದೆ ವಾಪಸಾತಿಗಾಗಿ ಸಿಪಿಐಎಂ ಪ್ರತಿಭಟನೆ…

ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ, ವಂಚಕ ಜಾತಿಪದ್ಧತಿಯನ್ನು ಮುಂದುವರೆಸಲಿರುವ, ಸಂವಿಧಾನ ವಿರೋಧಿ, ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ  ವಿಧೇಯಕ ವಾಪಾಸು ಪಡೆಯಲು ಆಗ್ರಹಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯ ಸರಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ – 2021 ಆಳುವವರ್ಗಗಳು ತಾವು ಬಯಸಿದಾಗಲೆಲ್ಲಾ ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡಲು ಮತ್ತು ವಂಚಕ ಜಾತಿ ಪದ್ಧತಿಯನ್ಮು ಮುನ್ನಡೆಸಲು ನೆರವಾಗುವ ದುರುದ್ದೇಶದಿಂದ ಹೆಣೆಯಲಾಗಿದೆ ಎಂಬುದನ್ನು ಅದರ ಹೂರಣ ಬಯಲುಗೊಳಿಸುತ್ತದೆ‌. ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರೆಸುವ ಮತ್ತು  ದುಡಿಯುವ ಜನತೆಯನ್ನು ವಿಭಜಿಸಿ ಆಳಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ  ನೆರವಾಗುವ ದುರುದ್ದೇಶದಿಂದ  ರೂಪಿಸಲಾದ  ಸಂವಿಧಾನ ವಿರೋಧಿ ವಿಧೇಯಕವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ)  ರಾಯಚೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಅದನ್ನು ವಾಪಾಸು ಪಡೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ. ಈ ಮುಂಚೆ ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದೆಂದು ಪ್ರಚಾರ ಗೊಳಿಸಲಾಗಿತ್ತು. ಸಿಪಿಐಎಂ ಪಕ್ಷ ಯಾವುದೇ ವ್ಯಕ್ತಿಯನ್ನು ಯಾವುದೆ ಮತಗಳು ಬಲವಂತವಾಗಿ, ಮತಾಂತರ ಹಾಗೂ ಮರು ಮತಾಂತರ ಮಾಡುವ  ದೌರ್ಜನ್ಯ ದ ಕ್ರಮಗಳನ್ನು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಲಾಗಿದೆ. ಆದರೇ, ಈ ವಿಧೇಯಕವು ವ್ಯಕ್ತಿಯು ತನಗಿಷ್ಠವಾದ ಮತವನ್ನು ಆಚರಿಸುವುದಕ್ಕೆ ಸರಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆ ಮೂಲಕ  ವ್ಯಕ್ತಿಯು ತನಗಿಷ್ಠವಾದ ಮತವನ್ನು ಆಚರಿಸುವ ಭಾರತ ಸಂವಿಧಾನ ಕೊಡ ಮಾಡಿದ ಹಕ್ಕನ್ನು ನಗ್ನವಾಗಿ ಉಲ್ಲಂಘಿಸುತ್ತದೆ. ಅದೇ ರೀತಿ, ಮತಾಂತರದ ಧಾರ್ಮಿಕ ವಿಧಿ,ವಿಧಾನಗಳನ್ನು ಪ್ರತಿರೋಧಿಸುತ್ತದೆ ಎಂದು ಸಿಪಿಐಎಂ ಟೀಕಿಸಿದೆ. ಮಾತ್ರವಲ್ಲಾ, ಈಗಾಗಲೇ ಮತಾಂತರ ಗೊಂಡಿರುವ ವ್ಯಕ್ತಿಗಳ ಮೇಲೆ ಮತ್ತು  ಅಂತಹ ಮತಾಂತರ ಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಅದರ ಮುಖಂಡರ ಮೇಲೆ  ಧಾಳಿ ನಡೆಸಲು ಮತಾಂಧ ಹಾಗೂ ಜಾತೀವಾದಿ ಪುಂಡರಿಗೆ  ಕಲಂ – 4 ಕುಮ್ಮಕ್ಕು ನೀಡುತ್ತದೆ.  ಕುಟುಂಬದ ಸದಸ್ಯರು ಮಾತ್ರವಲ್ಲಾ, ಸಹವರ್ತಿಗಳು, ಸಹೋದ್ಯೋಗಿಗಳು ಯಾರು ಬೇಕಾದರೂ ಬಲವಂತದ ಮತಾಂತರವೆಂದು ದೂರು ನೀಡಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಮತಾಂಧ ಪುಂಡರು ದುರುಪಯೋಗ ಮಾಡಲು ಈ ಕಲಂ ಅವಕಾಶ ಮಾಡಿಕೊಟ್ಟಿದೆ ಮಾತ್ರವಲ್ಲಾ ಆಪಾದಿತರೇ ತಮ್ಮನ್ನು ಸಮರ್ಥಿಸಿಕೊಳ್ಳಲು ಹೇಳುತ್ತದೆ ಎಂದು ಆರೋಪಿಸಲಾಗಿದೆ‌. ಇದು ಧಾರ್ಮಿಕ ಸ್ವಾತಂತ್ರ್ಯ ದ ಸಂರಕ್ಷಣೆಯ ಹೆಸರಿನಲ್ಲಿ ಅಪ್ರತ್ಯಕ್ಷವಾಗಿ, ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ ಗಳನ್ನು ಪೋಷಿಸಲು ಮತ್ತು ವಂಚಕ ಜಾತಿ ಪದ್ದತಿಯಲ್ಲಿ ಶೋಷಿತರು ಸಿಲುಕಿ ನರಳುವಂತೆ ಮಾಡುವ ಸಂಚನ್ನು ಹೊಂದಿದೆ. ಮಾತ್ರವಲ್ಲಾ ಯುವಕ- ಯುವತಿಯರ ಅಂತರ್ಜಾತೀಯ ಮತ್ತು ಅಂತರ್ಧಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ. ಆದ್ದರಿಂದ ಇಂತಹ ಪ್ರಜಾಸತ್ತೆಯ ವಿರೋಧಿ ವಿಧೇಯಕವನ್ನು ತಕ್ಷಣ ವಾಪಾಸು ಪಡೆಯಲು ಸಿಪಿಐಎಂ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ತಾಲೂಕು ಸಮಿತಿ ಸದಸ್ಯರಾದ ಪರಶುರಾಮ ಹಲ್ಕಾವಟಗಿ, ಮಹಮ್ಮದ್ ಹನೀಫ್, ಆಂಜನೇಯ ನಾಗಲಾಪೂರು, ಪಕ್ಷದ ಸದಸ್ಯರಾದ ನಿಂಗಪ್ಪ ಎಂ, ಸದ್ಧಾಂ ಹುಸೇನ್, ಬಾಬಾಜಾನಿ, ಜಾಫರ್ ಹುಸೇನ್ ಫೂಲವಾಲೆ, ಹೊನ್ನಪ್ಪ, ದುರುಗಪ್ಪ, ನಾಗರಾಜ ಕೋಠಾ, ಖಾದರ್ ಪಾಷಾ, ಮಹಮ್ಮದ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *