ಜನಪದ ಸಾರ್ವಕಾಲಿಕ ಸಂಸ್ಕೃತಿಯ ಪ್ರತಿಬಿಂಬ : ರಾಮಣ್ಣ

Spread the love

ಜನಪದ ಸಾರ್ವಕಾಲಿಕ ಸಂಸ್ಕೃತಿಯ ಪ್ರತಿಬಿಂಬ : ರಾಮಣ್ಣ

ಕೊಪ್ಪಳ, ಜ. ೧೧: ನಮ್ಮ ಜನಪದ ಸಾರ್ವಕಾಲಿಕ ಸಂಸ್ಕೃತಿಯ ಪ್ರತಿಬಿಂಬ, ಅಲ್ಲಿನ ಪ್ರತಿಯೊಂದು ಆಚಾರ ವಿಚಾರ ಮತ್ತು ವಸ್ತುವೆಲ್ಲವೂ ಮಾನವ ಕುಲದ ಒಳಿತಿಗಾಗಿ ಇವೆ ಎಂದು ಶಿಕ್ಷಕ, ಸಾಹಿತಿ ರಾಮಣ್ಣ ಆಲಮರ್ಸಿಕೇರಿ ಅಭಿಪ್ರಾಯಪಟ್ಟರು. ಅವರು ನಗರದ ಆರೋಗ್ಯ ಬಡಾವಣೆ ಗೊಂಡಬಾಳ ಅವರ ನಿವಾಸದಲ್ಲಿ ಕನ್ನಡ ಜಾನಪದ ಪರಿಷತ್ತು ಅಕ್ಷರ ಗೊಂಡಬಾಳ ಅವರ ೯ನೇ ವರ್ಷದ ಹುಟ್ಟುಹಬ್ಬ ನಿಮಿತ್ಯ ಹಮ್ಮಿಕೊಂಡಿದ್ದ ಜನಪದ ಅರಿವು, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ಯವನ್ನು ಮಾತ್ರ ಹೇಳುವ ಜನಪದಕ್ಕೆ ನಮ್ಮ ಕಷ್ಟಗಳನ್ನು ಪರಿಹರಿಸಿ ಸಮಾಧಾನ ಮಾಡುವ ಶಕ್ತಿ ಇದೆ, ಜನಪದರಿಗೆ ನಾವು ತಾಯಿಯಷ್ಟೇ ಗೌರವ ಕೊಡಬೇಕು, ಕೌಟಂಬಿಕ ಕಾರ್ಯಕ್ರಮವನ್ನು ಸಾರ್ವತ್ರಿಕಗೊಳಿಸಿ ಸದಾ ಸಮುದಾಯದ ಒಳಿತನ್ನು ಬಯಸುವ ಗೊಂಡಬಾಳ ಕುಟುಂಬ ಅಭಿನಂದನಾರ್ಹ, ಬಡಾವಣೆಯ ಜನರೆಲ್ಲರೂ ಸೇರಿ ಸಂಭ್ರಮಿಸುವ ಮನಸ್ಸುಗಳು ಸಹ ಶ್ಲಾಘನೀಯ ಎಂದವರು ಸಲಹೆ ಸಂತಸ ವ್ಯಕ್ತಪಡಿಸಿದರು. ಸಿಆರ್‌ಪಿ ಮತ್ತು ಕಲಾವಿದ ಹನುಮಂತಪ್ಪ ಕುರಿ ಮಾತನಾಡಿ, ಜನಪದ ಪರಿಷತ್ತು ನಿರಂತರವಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಇಂತಹ ಕೌಟಂಬಿಕ ಕಾರ್ಯಕ್ರಮಗಳಲ್ಲಿ ಅವಕಾಶ ಕೊಟ್ಟರೆ ಕಾರ್ಯಕ್ರಮ ರೂಪಿಸಿ ಸಮುದಾಯ ಕಟ್ಟುವ, ಮನಸ್ಸು ಬೆಸೆಯುವ ಕಾರ್ಯ ಮಾಡಲಾಗುವದು, ಜಿಲ್ಲಾ ಅಧ್ಯಕ್ಷರು ಅದಕ್ಕೆ ನಾಂದಿ ಹಾಡಿದ್ದು ಇಂತಹ ಅನೇಕ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದರು. ಗ್ರಂಥಪಾಲಕ, ಬರಹಗಾರ ನಾಗರಾಜ ನಾಯಕ ಡೊಳ್ಳಿನ ಮಾತನಾಡಿ, ಜನಪದ ಎಲ್ಲದರಲ್ಲೂ ಇದೆ, ನಮ್ಮ ಜಿಲ್ಲೆಯಲ್ಲೂ ಜನಪದ ಹಾಸು ಹೊಕ್ಕಾಗಿದೆ, ಇಲ್ಲಿನ ಕುಮಾರರಾಮನ ಮೇಲೆ ಹಲವು ಭಾಷೆಗಳ ಜನಪದ ಸಾಹಿತ್ಯ ರಚನೆಗೊಂಡಿದೆ, ಒಬ್ಬ ಸಣ್ಣ ವಯಸ್ಸಿನ ರಾಜ ದೇವರಾಗುವದೆಂದರೆ ಸುಮ್ಮನೆ ಅಲ್ಲ, ಅದು ಅವನ ಶೌರ್ಯ ಪರಾಕ್ರಮದ ಜೊತೆಗೆ ಮಾತು ಉಳಿಸಿಕೊಳ್ಳುವ ಹಾಗೂ ನಮ್ಮ ಸಂಸ್ಕೃತಿಯನ್ನು ರಕ್ಷಿಸಿದ ಮಹಾನ್ ತ್ಯಾಗಕ್ಕೆ ಸಾಕ್ಷಿ. ಯಾರು ಹೆಣ್ಣನ್ನು ನಿಜವಾಗಲೂ ಗೌರವಿಸುತ್ತಾರೆ ಅವರು ಕಥೆಯಾಗುತ್ತಾರೆ, ಪುರಾಣವಾಗುತ್ತಾರೆ ಕೊನೆಗೆ ದೇವರಾಗುತ್ತಾರೆ ಎಂಬುದಕ್ಕೆ ಕುಮಾರರಾಮನೇ ಸಾಕ್ಷಿ ಎಂದರು. ಅಧ್ಯಕ್ಷತೆವಹಿಸಿದ್ದ ಬಡಾವಣೆಯ ಸಂಘದ ಅಧ್ಯಕ್ಷ ಆರ್. ಮುರುಗೇಶ ಅವರು, ನಮ್ಮ ಬಡಾವಣೆಯ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ, ಯಾವುದೆ ರೀತಿಯ ಅಹಿತಕರ ಘಟನೆ ಆಗದಂತೆ ಎಲ್ಲರೂ ಸೇರಿ ಒಟ್ಟಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದೇವೆ. ಕೆಲವೇ ವಾರಗಳಲ್ಲಿ ಆರೋಗ್ಯ ಬಡಾವಣೆಯ ರಕ್ಷಣೆಗೆ ಬೀದಿ ದೀಪ, ಸಿಸಿ ಟಿವಿ ಹಾಕಿಸಿ ಕಾವಲು ನಿಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜನಪದ ಪರಿಷತ್ತು ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು, ಜನಪದ ಪರಿಷತ್ತು ಮನೆ ಮನೆಗೆ ತೆರಳಿ ಮನಸ್ಸು ಬೆಸೆಯುವ ಜೊತೆಗೆ ಡಾ. ಎಸ್. ಬಾಲಾಜಿ ನೇತೃತ್ವದಲ್ಲಿ ಎಲ್ಲಾ ಮೂಲ ಜನಪದ ಕಲಾವಿದರ ರಕ್ಷಣೆಗೆ ಕೆಲಸ ಮಾಡಲಿದೆ, ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಅದಕ್ಕಾಗಿ ಪ್ರತಿಯೊಂದರಲ್ಲೂ ಸಮುದಾಯದ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದರು. ಈ ವೇಳೆ ನೂತನವಾಗಿ ಪಟ್ಟಣ ಪಂಚಾಯತಿ ಸದಸ್ಯೆಯಾದ ಲಲಿತಾ ಮಂಜುನಾಥ ಡಂಬಳ, ಶಿಕ್ಷಣ ರಾಮಣ್ಣ ಆಲಮರ್ಸೀಕೇರಿ, ಕಲಾವಿದ ಹನುಮಂತಪ್ಪ ಕುರಿ, ಬರಹಗಾರ ನಾಗರಾಜನಾಯಕ ಡೊಳ್ಳಿನ ಮತ್ತು ಮುರುಗೇಶ ಅವರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಗೊಂಡಬಾಳ ಪ್ರಾರ್ಥಿಸಿದಳು, ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶ ಸುರ್ವೆ ನಿರೂಪಿಸಿದರು, ಜ್ಯೋತಿ ಗೊಂಡಬಾಳ ಸ್ವಾಗತಿಸಿದರು, ಚುಸಾಪ ಅಧ್ಯಕ್ಷ ಸುರೇಶ ಕಂಬಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ನಾಗರಾಜ ಹೊನಕೇರಿ, ಶಿಕ್ಷಕರಾದ ಸಂಗನಗೌಡ್ರ ಪೋ. ಪಾಟೀಲ್ ಮತ್ತು ಗುರುಪ್ರಸಾದ ಸ್ವಾಮಿ, ಹೆಡ್ ಕಾನ್ಸ್ಟೇಬಲ್ ದೇವೇಂದ್ರಪ್ಪ ಹ್ಯಾಟಿ, ಕರಿಬಸವರಾಜಯ್ಯ ಎ.ಎಂ., ಮಹಾಂತೇಶ ಬೆನಕಟ್ಟಿ, ಪ್ರವೀಣ ಜಾನೆ, ಉಮೇಶಗೌಡ ಹೊಸಮನಿ, ಪ್ರಾಚಾರ್ಯ ಮಂಜುನಾಥ ಬೇಳೂರು, ಪ್ರಭುರಾಜ ಪಾಟೀಲ್, ಬಸವಂತಪ್ಪ ಕಾರಟಗಿ, ಗವಿಸಿದ್ದೇಶ್ವರ ಮಾಲಿಪಾಟೀಲ್, ಎಂ.ಡಿ. ಚಾಕ್ರಿ ಆಲಮ್, ಸಿದ್ಲಿಂಗಪ್ಪ, ಡಾ. ಚನ್ನಕೇಶವರಡಡಿ, ಶ್ರೀನಿವಾಸ ಬೊಂದಾಡೆ, ಶರಣಪ್ಪ ದೇವರಮನಿ, ಮಹ್ಮದ್ ಸಲೀಂ ಮಂಡಾಳಿ, ಕಳಕಪ್ಪ ಜಿಗಳೂರ, ಜಯರಾಮ ಪವಾರ, ಬಸವರಾಜ ಯಲಬುರ್ಗಿ, ವಿದ್ಯಾ ದೇವರಮನಿ, ಮಂಜುನಾಥ ಡಂಬಳ ಇತರರು ಇದ್ದರು.

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *