ಬೆಂಗಳೂರು ನವೆಂಬರ್ 10: ಜಯನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಪೋಷಕ ಕಲಾವಿದರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

Spread the love

ಬೆಂಗಳೂರು ನವೆಂಬರ್ 10: ಜಯನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಪೋಷಕ ಕಲಾವಿದರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಸಾರ್ವಜನಿಕರು, ಮುಖ್ಯವಾಗಿ ಯುವಜನರಲ್ಲಿ ಆರೋಗ್ಯದ ಬಗ್ಗೆ‌‌ ಅರಿವು ಮೂಡಿಸುವುದು ಮತ್ತು ವರ್ಷಕ್ಕೊಮ್ಮೆ ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಂದೇಶ ಕೊಡುವುದು ಈ ಕಾರ್ಯಕ್ರಮದ ಉದ್ದೇಶ. ಹೀಗಾಗಿ ನಾನಾ ಹಿರಿಯ ಕಲಾವಿದರು, ಪೋಷಕ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಡಾ. ಸಂಜಯ್ ಗೌಡ ಅವರ ನೇತೃತ್ವದಲ್ಲಿ ತಪಾಸಣೆ ಶಿಬಿರ ನಡೆಸಲಾಯಿತು. ಹಿರಿಯ ಕಲಾವಿದೆ ಆಶಾಲತಾ ಮಾತನಾಡಿ, ಡಾ ಸಂಜಯ್ ಗೌಡ ಮತ್ತು ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶಾಂತಕುಮಾರ್ ಅವರು ಹಿರಿಯ ಕಲಾವಿದರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಒಂದು ಪುಣ್ಯದ ಕೆಲಸ. ಕಲಾವಿದರು ತಪಾಸಣೆ ಮಾಡಿಸಬೇಕು ಎಂದು ಕೊಂಡರೂ ಎಷ್ಟೋ ಬಾರಿ ಸಾಧ್ಯವೇ ಆಗುವುದಿಲ್ಲ. ಕೆಲವರಿಗೆ ಕೆಲಸದ ಒತ್ತಡ ಇದ್ದರೆ, ಇನ್ನು ಕೆಲವರಿಗೆ ಹಣದ ಸಮಸ್ಯೆಯಿಂದ ತಪಾಸಣೆ ಮಾಡಿಸಿಕೊಳ್ಳಲು ಆಗುವುದಿಲ್ಲ. ಆದರೆ ಇಂದು ನಮ್ಮ ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್ ಅವರು ನಮ್ಮನ್ನೆಲ್ಲಾ ಒಗ್ಗೂಡಿಸಿ, ಆರೋಗ್ಯ ತಪಾಸಣೆಗೆ ನೆರವಾಗಿದ್ದಾರೆ ಎಂದರು. ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್ ಮಾತನಾಡಿ, ಹಿರಿಯ ಕಲಾವಿದರಿಗೆ ರಕ್ತ ಪರೀಕ್ಷೆ, ಕೊಲೆಸ್ಟ್ರಾಲ್, ಶುಗರ್, ಇಸಿಜಿ, ಟಿಎಂಟಿ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಸಿಟಿ ಎಂಜಿಯೊಗ್ರಾಂ (ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಹಚ್ಚುವ ಪರೀಕ್ಷೆ) ಹೀಗೆ ನಾನಾ ಪರೀಕ್ಷೆಗಳನ್ನು ನಡೆಸಲಾಯಿತು ಎಂದರು. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್, ಜಯನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಿರಿಯ ಪೋಷಕ ಕಲಾವಿದರಿಗೆ ಆರೋಗ್ಯ ತಪಾಸಣೆ ಮಾಡಿಸಿದುದು ತುಂಬಾ ಖುಷಿಯಾಯಿತು. ಪ್ರತಿಯೊಂದು ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಟ್ಟರು. ಇದಕ್ಕೆ ಕಾರಣ ಕರ್ತರು ನಮ್ಮ ಕಲಾವಿದರಾದ ಟೆನ್ನಿಸ್ ಕೃಷ್ಣ. ತಪಾಸಣೆಗೊಳಗಾದ ಕಲಾವಿದರಿಗೆ ಗಂಭೀರ ಸಮಸ್ಯೆಗಳಿದ್ದರೆ ಅವರಿಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯವರು ಭರವಸೆ ನೀಡಿದ್ದಾರೆ. ಇದು ಕೂಡ ನಮಗೆ ತುಂಬಾ ಖುಷಿಯ ವಿಚಾರ. ಇಂದು ಸಾಕಷ್ಟು ಮಂದಿ ತಪಾಸಣೆ ಮಾಡಿಸಿಕೊಂಡೆವು.  ಇಂದು ಬರಲು ಸಧ್ಯವಾಗದವರಿಗೆ ಮತ್ತೊಂದು ದಿನ ಶಿಬಿರ ನಡೆಸುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ. ಇದು ಕೂಡ ತುಂಬಾ ಖುಷಿಯ ವಿಚಾರ ಎಂದರು. ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಡೀ ದೇಹದ ಆರೋಗ್ಯ ತಪಾಸಣೆ ಮಾಡಿಸುವಂತಹ ಅವಕಾಶ ಸಿಕ್ಕಿದ್ದು ಇದೇ ಮೊದಲು. ಇದಕ್ಕೆ ನಾವೆಲ್ಲಾ ಆಭಾರಿಗಳಾಗಿದ್ದೇವೆ ಎಂದರು. ಯುನೈಟೆಡ್ ಆಸ್ಪತ್ರೆಯ  ವ್ಯವಸ್ಥಾಪಕ ನಿರ್ದೇಶಕ ಡಾ. ಶಾಂತಕುಮಾರ್ ಮುರುಡ ಮಾತನಾಡಿ, ಎಲ್ಲರೂ ಆರೋಗ್ಯ ಶಿಬಿರಗಳನ್ನು ಮಾಡುತ್ತಾರೆ. ಆದರೆ ನಾವು ಆರೋಗ್ಯ ಶಿಬಿರ ಮಾಡುತ್ತಿಲ್ಲ. ಕಲಾವಿದರನ್ನು ಬದುಕಿಸಬೇಕು, ಕಲಾವಿದರನ್ನ ಕಾಪಾಡಬೇಕು ಎಂಬುದು ನಮ್ಮ ಉದ್ದೇಶ. ಪ್ರತಿಯೊಂದು ಪರೀಕ್ಷೆ ಸಿಟಿ ಸ್ಕ್ಯಾನ್, ಕಿಡ್ನಿ, ಶ್ವಾಸಕೋಶ, ಹೃದಯ, ಕಣ್ಣು ಸೇರಿದಂತೆ ಇಡೀ ದೇಹದ ಎಲ್ಲಾ ಅಂಗಾಂಗಳನ್ನು ಪರೀಕ್ಷಿಸಿ, ಕಲಾವಿದರ ಕೈಗೆ ರಿಪೋರ್ಟ್ ನೀಡಲಾಯಿತು. ಮೊದಲ ಬಾರಿಗೆ ನಮ್ಮ ಕಡೆಯಿಂದ ಕಲಾವಿದರ ಆರೋಗ್ಯ ತಪಾಸಣೆ  ಕಾರ್ಯಕ್ರಮವನ್ನು ಮಾಡಿದೆವು. ನಟ ಪುನೀತ್ ರಾಜ್‍ಕುಮಾರ್  ಅವರ ನಿಧನದ ನಂತರ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಲಕ್ಷಾಂತರ ಮಂದಿ ಪೋಷಕ ಕಲಾವಿದರು ನಮಗೆಲ್ಲಾ ಅತ್ಯುತ್ತಮ ಮನರಂಜನೆ ನೀಡಿದ್ದಾರೆ. ಅಂತಹ ಪೋಷಕ ಕಲಾವಿದರಿಗೆ ನಾವೆಲ್ಲಾ ಜತೆಯಾಗಿ, ಒಗ್ಗಟ್ಟಾಗಿರಬೇಕು.  ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ, ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *