ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

Spread the love

ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ: ಸಮಾಜದಲ್ಲಿ ಕಿವುಡುತನ ಅಂಗವೈಕಲ್ಯತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಗಣನೀಯವಾಗಿದ್ದು, ಸಾಕಷ್ಟು ಮಂದಿ ಚಿಕಿತ್ಸೆ ಪಡೆಯಲಿಕ್ಕಾಗಲಿ, ಅಥವಾ ಉಪಕರಣಗಳು ಖರೀದಿ ಮಾಡಲಿಕ್ಕೆ ಆರ್ಥಿಕವಾಗಿ ಸಬಲರಿಲ್ಲದಿರುವವರಿಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.  ಪಟ್ಟಣದ ಟಿ.ಅಗ್ರಹಾರ ರಸ್ತೆಯಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಶ್ರವಣದೋಷವುಳ್ಳವರಿಗೆ ಯಂತ್ರ ವಿತರಣೆ ಹಾಗೂ ಅಂಗವಿಕಲ ಮಕ್ಕಳಿಗೆ ಗಾಲಿಕುರ್ಚಿ ವಿತರಣೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಬಲಹೀನರಾಗಿ ಯಾರ ನೆರವು ಸಿಗದೇ, ಅಸಹಾಯಕರಾಗಿರುವ ಅಂಗವಿಕಲರು, ಶ್ರವಣದೋಷವುಳ್ಳವರು, ದೃಷ್ಟಿದೋಷವುಳ್ಳವರು, ಕ್ಯಾನ್ಸರ್ ರೋಗಿಗಳು, ಸಂರಕ್ಷಣೆ ಮಾಡಲು ಯಾರೂ ಇಲ್ಲದವರನ್ನು ಗುರ್ತಿಸಿ, ಪುನರ್ವಸತಿ ಕೇಂದ್ರಕ್ಕೆ ಕರೆತರುವಂತಹ ಕಾರ್ಯವನ್ನು ನಾಗರಿಕರು ಮಾಡಬೇಕು. ಇಲ್ಲಿನ ಬ್ಯಾಪ್ಟಿಸ್ಟ್ ಸೆಂಟರ್ ನಲ್ಲಿ ಮದ್ಯವ್ಯಸನಿಗಳಿಗೆ ಮುಕ್ತಿ ನೀಡುವುದರ ಜೊತೆಗೆ, ಶ್ರವಣದೋಷವುಳ್ಳವರಿಗೆ ಕಿವಿಗೆ ಯಂತ್ರ,  ದೃಷ್ಟಿದೋಷ ಉಳ್ಳವರಿಗೆ ಉಚಿತ ಶಸ್ತ್ರ ಚಿಕಿತ್ಸೆ,  ಬುದ್ದಿಮಾಂದ್ಯ ಮಕ್ಕಳ ರಕ್ಷಣೆ, ಕೃತಕ ಕಾಲುಗಳು ಅಳವಡಿಸುವಂತಹ ಉತ್ತಮವಾದ ಕಾರ್ಯವನ್ನು ಮಾಡಲಾಗುತ್ತಿದೆ. ಇದು  ರಾಜ್ಯದಲ್ಲಿ ಒಂದೇ ಕೇಂದ್ರವಿದ್ದು, ಹೆಚ್ಚಿನ ಜನರಿಗೆ ಸದುಪಯೋಗವಾಗಬೇಕು.  ಇಲ್ಲಿನ ಸಿಬ್ಬಂದಿ ಹಳ್ಳಿಗಳಿಗೆ ಹೋಗಿ, ಈ ಬಗ್ಗೆ ಜನರಿಗೆ ತಿಳುವಳಿಕೆ ಕೊಟ್ಟು, ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿಯಿರುವವರು ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬಹುದು. ಕ್ಯಾನ್ಸರ್ ರೋಗ ಅಂತಿಮ ಹಂತದಲ್ಲಿರುವವರಿಗೆ ಮನೆ ಬಾಗಿಲಿಗೆ ಹೋಗಿ ಉಚಿತವಾಗಿ ಔಷಧಿ, ಚಿಕಿತ್ಸೆ ನೀಡುತ್ತಾರೆ. ಇದುವರೆಗೂ 1400 ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಒಂದೆರಡು ತಿಂಗಳಲ್ಲಿ ಸಾವನ್ನಪ್ಪುವ ಸ್ಥಿತಿಯಲ್ಲಿರುವವರಿಗೆ ಧೈರ್ಯ ತುಂಬಿಸುವುದರ ಜೊತೆಗೆ, ಅವರು ಸಾವಿನ ಸಮಯದಲ್ಲಿ ನರಳಾಟದಿಂದ ಸಾಯುವ ಬದಲಿಗೆ ನೆಮ್ಮದಿಯ ಸಾವು ಕಾಣುವಂತೆ ನೋಡಿಕೊಳ್ಳುತ್ತಿದ್ದಾರೆ. ರೋಗಿಗಳು ಎಷ್ಟೇ ಗಂಭೀರ ಸ್ಥಿತಿಯಲ್ಲಿದ್ದರೂ ಅವರಿಗೆ ಚಿಕಿತ್ಸೆ ನೀಡುವಂತಹ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕೆಲಸ ಮಾಡುತ್ತಿದ್ದಾರೆ. ಮನೆಗಳಲ್ಲಿ ನೋಡಿಕೊಳ್ಳುವವರು ಇಲ್ಲದವರನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಶ್ರವಣ ದೋಷವುಳ್ಳವರಿಗೆ ‘ಬೇರಾ’ (ಬ್ರೈನ್ ಎವೋಕ್ಡ್ ರೆಸ್ಪಾನ್ಸ್ ಆಡಿಟರಿ) ಕೇಂದ್ರ ಆರಂಭಿಸಿದ್ದಾರೆ. ಸುಮಾರು 30 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣಗಳಿವೆ. ಈ ಯಂತ್ರಗಳ ಸಹಾಯದಿಂದ ಕಿವುಡುತನದ ಪ್ರಮಾಣದಲ್ಲಿ ಸುಲಭವಾಗಿ ಕಂಡು ಹಿಡಿಯಬಹುದಾಗಿದ್ದು, ಶ್ರವಣ ದೋಷ ಕಂಡು ಬಂದರೆ ಶಿಫಾರಸ್ಸು ಮಾಡುತ್ತದೆ. ಸಮಸ್ಯೆ ಇಲ್ಲವಾದರೆ ಪಾಸ್ ಎಂದು ಫಲಿತಾಂಶ ನೀಡುತ್ತದೆ. ಇದರಿಂದ ಶ್ರವಣ ದೋಷವಿದೆ ಎಂದು ಸುಳ್ಳು ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡು ಪಿಂಚಣಿ ಪಡೆಯುವವರಿಗೆ ಕಡಿವಾಣ ಬೀಳಲಿದೆ ಎಂದರು. ರಾಜ್ಯಾದ್ಯಂತ ಯಾರಾದರೂ ಬಂದು ಈ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬಹುದು. ಬೆಂಗಳೂರು ಹೊರತುಪಡಿಸಿ ಬೇರೆ ಎಲ್ಲೂ ಇಂತಹ ಸೌಲಭ್ಯವಿಲ್ಲ. ಬಿ.ಪಿ.ಎಲ್. ಪಡಿತರ ಚೀಟಿಗಳಿದ್ದರೆ ಉಚಿತವಾಗಿ ಕ್ಯಾನ್ಸರ್ ರೋಗಿಗಳಿಗೆ ಕಿಮ್ ಪರೀಕ್ಷೆಯನ್ನೂ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಾಡಲಿದ್ದಾರೆ ಎಂದರು. ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿರುವ ಸಿಸ್ಟರ್ ಬಿಜಿ ಮಾತನಾಡಿ, ರೋಗಿಗಳ ಮನೆಗಳಿಗೆ ಹೋಗಿ ಅವರ ಯೋಗ ಕ್ಷೇಮ ನೋಡಿಕೊಂಡು ಅವರನ್ನು ಕಾಪಾಡುವಂತಹ ಸೇವೆ ಮಾಡುವುದು ನಮಗೆ ಸಿಕ್ಕಿರುವ ಪುಣ್ಯದ ಕಾರ್ಯವಾಗಿದೆ. ಸಾಕಷ್ಟು ಮಂದಿಗೆ ತಿಳುವಳಿಕೆಯಿಲ್ಲ, ಅವರಿಗೆ ಅರಿವು ಮೂಡಿಸುತ್ತೇವೆ. ಎಷ್ಟೇ ಗಂಭೀರವಾಗಿ ಗಾಯಗೊಂಡಿದ್ದರೂ ಸ್ವಚ್ಚ ಮಾಡುತ್ತೇವೆ. ಕ್ಯಾನ್ಸರ್ ರೋಗಿಗಳನ್ನು ಕಾಪಾಡುವುದು ನಮ್ಮ ಪುಣ್ಯ. ಮನಸ್ಸಿನಲ್ಲಿ ಸಾರ್ಥಕ ಭಾವ ಮೂಡುತ್ತಿದೆ ಎಂದರು. ಪುರಸಭಾ ಅಧ್ಯಕ್ಷೆ ರೇಖಾವೇಣುಗೋಪಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಟರಾಜ್, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಕ್ಯಾನ್ಸರ್ ತಜ್ಞ ಡಾ.ರವಿ, ಕಾರ್ಯಕ್ರಮ ಸಂಯೋಜಕ ಶಿವಾನಂದ, ಶ್ರವಣ ತಜ್ಞ ರೋಷನ್, ಕ್ಲಿನಿಕಲ್ ಸೈಕಾಲಜಿಸ್ಟ್ ವಿಜಯಾ, ಪುನರ್ವಸತಿ ಕಾರ್ಯಕರ್ತ ರಾಮಪ್ಪ, ಲಕ್ಷ್ಮೀ, ರವಿಕುಮಾರ್, ಮೋನಿಷಾ, ಹಾಜರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *