ವಿಶೇಷ ಲೇಖನ :  ಷಟಸ್ಥಲಜ್ಞಾನಿ ಚನ್ನಬಸವಣ್ಣ.

Spread the love

ವಿಶೇಷ ಲೇಖನ :  ಷಟಸ್ಥಲಜ್ಞಾನಿ ಚನ್ನಬಸವಣ್ಣ.

12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ‌ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ ಮಾಹಾನ ಕ್ರಾಂತಿಯಾಗಿತ್ತು ಅದು. ಕನ್ನಡ ಸಾಹಿತ್ಯ ಹಾಗೂ ಸಮಾಜಿಕ ಸಾರತ್ವ ಲೋಕಕ್ಕೆ ಶರಣರ ಸಮತಾವಾದದ ಕ್ರಾಂತಿಯು, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ ಎಂದರೆ ತಪ್ಪಾಗಲಾರದು.  ಕಲ್ಯಾಣದ ಶರಣರ ವೈಚಾರಿಕ – ವೈಜ್ಞಾನಿಕ ವಿಚಾರಗಳ ಕ್ರಾಂತಿಯು, ಆದರ್ಶ ಸಮಾಜಕ್ಕೆ ಮುನ್ನುಡಿ ಬರೆದ ಐತಿಹಾಸಿಕ ಕ್ರಾಂತಿ ಪಥವಾಗಿದೆ. ಅಂದು ಬರೆದ ಅನುಭಾವದ ವಚನ ಸಾಹಿತ್ಯವು, ಆಶ್ರಯ ನೀಡಿದ ರಾಜರನ್ನು ಓಲೈಸಲು ಅಥವಾ ವೈಭವೀಕರಿಸಿ ಬರೆದ ಶರಣ ವಚನ ಸಾಹಿತ್ಯವಲ್ಲ. ಬದಲಾಗಿ ಜನ ಬದುಕಲಿ-ಜಗ ಬದುಕಲಿ, ಎಂದು ಬರೆದ ಮೌಲ್ಯಾಧಾರಿತ ತತ್ವ ಸಿದ್ಧಾಂತದ ಜನಪರ ವಚನ ಸಾಹಿತ್ಯ, ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ. ಇಂತಹ ಅಮೂಲ್ಯ ವಚನ ಸಾಹಿತ್ಯ, ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಕೆಲ ಜಾತಿ – ಮನುವಾದಿಗಳು ವಚನಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾದಾಗ 24ರ ಹರೆಯದ ಷಟಸ್ಥಲಜ್ಞಾನಿ ಚನ್ನಬಸವಣ್ಣ ಸೇರಿದಂತೆ ಮುಂತಾದ ಶರಣರ ಸಮೂಹ ವಚನ ಸಾಹಿತ್ಯ ಸಂರಕ್ಷಣೆಗೆ ಮುಂದಾಗಿ, ಬಸವಕಲ್ಯಾಣವನ್ನು ತೇಜಿಸಿ, ವಿವಿಧ ಸ್ಥಳಗಳಿಗೆ ತೆರಳಿ, ಕಷ್ಟಪಟ್ಟು, ಅವರ ಜೀವನದ ಹಂಗನ್ನೂ ತೊರೆದು ವಚನಗಳನ್ನು ರಕ್ಷಣೆ ಮಾಡಿರುತ್ತಾರೆ. ಹೀಗೆ ವಚನ ಸಾಹಿತ್ಯ ರಕ್ಷಣೆಯ ಕಾರ್ಯದಲ್ಲಿ ಪ್ರಮುಖ ದಂಡನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿರುವುದು ಚನ್ನಬಸವಣ್ಣ, ಹೀಗಾಗಿ ಈ ವಚನ ಸಾಹಿತ್ಯದ ಉಳಿವಿಗಾಗಿ ಹೋರಾಡಿದ ಶರಣ ಸಂಕುಲಕ್ಕೆ ಚನ್ನಬಸವಣ್ಣ ಆಪದ್ಬಾಂಧವನಾಗಿ ಕಾಣುತ್ತಾರೆ. ಹೀಗಾಗಿಯೇ ಹನ್ನೆರಡನೆ ಶತಮಾನ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯ ಮೇಧಾವಿ ಶಿವಶರಣರಾಗಿ ಮುನ್ನೆಲೆಗೆ ಬಂದ ಚೆನ್ನಬಸವಣ್ಣನವರು, ಭಕ್ತಿ, ಜ್ಞಾನ, ವೈರಾಗ್ಯ ಮೂರ್ತಿಯಾಗಿ ಜಗಕ್ಕೆಲ್ಲಾ ಜ್ಯೋತಿಯಾಗಿ ಕಂಗೊಳಿಸಿದ್ದಾರೆ.  ಜ್ಞಾನಿಯಾಗಿ, ಶರಣ ಭಕ್ತರಾಗಿ, ಷಟಸ್ಥಲ ಕಿಂಕರರಾಗಿ, ಸಕಲ ಜೀವಾತ್ಮರಿಗೂ ಲೇಸನು ಬಯಸುವ ಕಾಯಕದ ಮಹಿಮೆಯ ಗುಣಗಳನ್ನು ಪಡೆದು, ಶಿವಶರಣರಲ್ಲಿ ಅಗ್ರಗಣ್ಯ ದಂಡನಾಯಕನಾಗಿ  ಚೆನ್ನಬಸವಣ್ಣನವರು ಪ್ರಸಿದ್ಧನಾಗಿದ್ದಾರೆಂದು ಹೇಳಲು ಹೆಮ್ಮೆ ಎನಿಸುತ್ತದೆ.  ಚನ್ನಬಸವಣ್ಣನವರ ಜೀವನ: ಬಸವಣ್ಣನವರ ಪ್ರೀತಿಯ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರ ದಂಪತಿಗಳ ಮಗನಾಗಿ  ಕ್ರಿ. ಶ. 1144 ರಲ್ಲಿ  ಜನ್ಮತಾಳಿದರು. ಚೆನ್ನಬಸವಣ್ಣನವರು ಚಿಕ್ಕವರಿದ್ದಾಗಲೇ ಆದ್ಯಾತ್ಮೀಕ ಹಸಿವು ಅವರಲ್ಲಿ ಎದ್ದು ಕಾಣುತ್ತಿತ್ತು.  ಅತ್ಯಂತ ಚುರುಕಾದ ಬುದ್ಧಿ, ಅತಿಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಕಾರ್ಯಗಳನ್ನು ಮಾಡಿ ಜನರಿಂದ ಮೆಚ್ಚುಗೆ ಗಳಿಸಿದ ಯುವಕರಾಗಿ ಮಿಂಚಿದ್ದಾರೆ.  ಚೆನ್ನಬಸವಣ್ಣನವರು ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನರಾಗುವ ಮೂಲಕ ಕಲ್ಯಾಣದ ಕಡೆ ಹೆಜ್ಜೆ ಹಾಕಿ ಬಂದವರು, ತದನಂತರ ಬಸವಣ್ಣನವರ ಮಹಾಮನೆಯಲ್ಲಿ ಕೆಲಸ ಮಾಡುತ್ತಾ, ಧರ್ಮೊದ್ಧಾರ ಕಾಯಕ ಸೇವೆಗೆ ಮುಂದಾದರು.  ಹೀಗೆ ಸಮಸ್ತ ಶರಣ ಬಳಗದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಅವರೆಲ್ಲರ ಪ್ರೀತಿಗೆ ಪಾತ್ರರಾಗಿ, ಅನುಭವ ಮಂಟಪದ ಜವಾಬ್ದಾರಿ ಹೊತ್ತಿಕೊಂಡರು. ತರುವಾಯ ಅನುಭವ ಮಂಟಪದ ಎಲ್ಲಾ ಕಾರ್ಯ  ಕಲಾಪಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದವು.  ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮರಿಗೆ ಲಿಂಗಧಾರಣೆ ಮಾಡಿದ ಕೀರ್ತಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ.  ಅದೇ ರೀತಿ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ತಾಯಿಯ ಆದ್ಯಾತ್ಮೀಕ ಜೀವನದ ಕುರಿತು ಪರಿ ಪರಿಯಾಗಿ ಪರೀಕ್ಷೆಗೆ ಗುರಿಪಡಿಸಿ,ಅಕ್ಕನನ್ನು ವೈರಾಗ್ಯ ನಿಧಿ ಎಂದು ಹೇಳಿರುವುದು ಸಹ  ಚನ್ನಬಸವಣ್ಣನವರಿಗೆ ಸಲ್ಲುತ್ತದೆ. ಇನ್ನು ಇವರ ವ್ಯಕ್ತತ್ವದ ಬಗೆ ಷಟಸ್ಥಲ ಸಿದ್ಧಾಂತದ ಆಚರಣೆಯಗಳಲ್ಲಿ  ಇವರು ತೆಗೆದುಕೊಂಡ ವೈಚಾರಿಕ ನಿಲುವುಗಳನ್ನು ಎಲ್ಲಾ ಶಿವಶರಣರು ಸೇರಿ ಒಗ್ಗಟ್ಟಿನಿಂದ ಒಪ್ಪಿಗೆ – ಮಚ್ಚುಗೆ ವ್ಯಕ್ತಪಡಿಸಿದ್ದು ಯಾರು ಮರೆಯುವಂತಿಲ್ಲ. ಇನ್ನು ಇವರ ಜೀವನದ ಬಗ್ಗೆ  ಹೆಚ್ಚಿನ ರೀತಿಯಲ್ಲಿ ಮಾಹಿತಿ ತಿಳಿದುಕೊಳ್ಳಲು ವಿರೂಪಾಕ್ಷ ಪಂಡಿತರ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ನೋಡಬಹುದಾಗಿದೆ. ಕೆಲವು ವಿವರಗಳು ಸಹ ದೊರೆಯುತ್ತಿವೆಯಾದರೂ ಒಂದೆರಡು ವಿಷಯಗಳ ಬಗೆಗೆ ಎಲ್ಲವುಗಳಲ್ಲಿಯೂ ಒಮ್ಮತವಿಲ್ಲ, ಹಾಗಾಗಿ ಉಪಲಬ್ದ ಹಾಗೂ ಇನ್ನಿತರ ದಾಖಲಾತಿ ಆಧರಿಸಿಯೇ ಚನ್ನಬಸವಣ್ಣನವರ ಜೀನವದ ಕುರಿತು ತಿಳಿದುಕೊಳ್ಳವುದು ಸೊಕ್ತ ಮತ್ತು ಸಮಂಜಸವಾಗಿದೆ. ಅವರು ರಚಿಸಿದ ವಚನಗಳ ಆಧಾರದ ಮೇಲೆ ಅವರ ಜೀವನದ ಸಂದೇಶಗಳ ಮಾನವೀಯ ಮೌಲ್ಯಗಳನ್ನು  ಹಾಗೂ ಸಮತಾವಾದದ ಸಮಾನತೆಯ ನೀತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಚನ್ನಬಸವಣ್ಣನವರ ಆದ್ಯಾತ್ಮೀಕ : ಸರ್ವೋದಯ ತತ್ವ ಪ್ರತಿಪಾದಿಸಿದ ಶರಣ ಸಂಕುಲವು, ಅನುಭವ ಮಂಟಪದ ಮೂಲಕ ಸಮತಾವಾದವನ್ನೇ ಜೀವಾಳವಾಗಿರಿಸಿಕೊಂಡು ಲಿಂಗಾಯತ ಧರ್ಮದ ಉಗಮಕ್ಕೆ ಕಾರಣವಾಯಿತು. ಈ ಉಗಮದ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು ಎಂದರೆ ಚನ್ನಬಸವಣ್ಣನವರು. ಹಾಗೆಯೇ ಕಾಯಕ ಪಥದಲ್ಲಿ ಕಾರ್ಯಪೃವತರಾದಂತೆ, ರಾಜನೀತಿ ಶಾಸ್ತ್ರಜ್ಞರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದು.  ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಅರಿವನ್ನು ಪ್ರತಿದಿನ ಅಂದಿನ ಶರಣರಿಗೆ ಪರಿಚಯಿಸುವ ಮತ್ತು ತಿಳಿ ಹೇಳುವ ಕಾರ್ಯ ನಿತ್ಯ ನಿರಂತರವಾಗಿ ಮಾಡಿದ ಶ್ರೇಯಸ್ಸು ಸಹ ಇವರಿಗೆ ಸಲ್ಲುತ್ತದೆ. ಸುಮಾರು 1250 ಕ್ಕೂ  ಹೆಚ್ಚು ವಚನಗಳನ್ನು  ಕೂಡಲ ಚೆನ್ನಸಂಗಮದೇವ ಎಂಬ ಅಂಕಿತನಾಮದೂಂದಿಗೆ ರಚಿಸಿ,ಅಲ್ಲಮ ಪ್ರಭುದೇವರ ನಂತರ ಚನ್ನಬಸವಣ್ಣನವರು ಶೂನ್ಯಪೀಠದ ಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ.ಹೀಗೆ ಆಧ್ಯಾತ್ಮಿಕ ಹಾದಿಯಲ್ಲಿ ಕ್ರಮಿಸಿ ಇಡೀ ಶರಣ ಸಂಕುಲಕ್ಕೆ ಮಾದರಿ ಶಿವಶರಣರಾಗಿ, ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.  ಕಲ್ಯಾಣದ ಕ್ರಾಂತಿ: ಅಂದು ಕಲ್ಯಾಣ ನಾಡಿನಲ್ಲಿ ಮಾನವೀಯ ಮೌಲ್ಯಗಳಿಗಾಗಿ ನಡೆದ ಕ್ರಾಂತಿಯಿಂದಾಗಿ ಇಡಿ ಶರಣಸಂಕುಲ ಛಿದ್ರವಾಗಿ ಹೋಗಿದೆ ಎಂಬ ಪ್ರತೀತಿ ಇದೆ, ಶರಣೆಯರೆಲ್ಲರೂ ಬೇರೆ ಬೇರೆ ಕಡೆ ಚದುರಿ ಹೋಗಿರುವ ನಡುವೆಯೂ ಚನ್ನಬಸವಣ್ಣನವರು ಕಲ್ಯಾಣದ ಕ್ರಾಂತಿಯ ಅನಂತರ ಕೆಲವು ದಿನ ಕಲ್ಯಾಣದಲ್ಲಿಯೇ ಉಳಿದು, ಅಲ್ಲಿದ್ದ ಉಳಿದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಎದ್ದು ಕಾಣುತ್ತದೆ. ಆಮೇಲೆ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗಿ ಉಲ್ಬಣಗೊಂಡಾಗ, ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದ್ದಾರೆಂದು ಕೆಲವು ಕೃತಿಗಳಿಂದ ನಮ್ಮಗೆ ತಿಳಿದುಬರುತ್ತದೆ. ಹಾಗಾಗಿ ಚನ್ನಬಸವಣ್ಣನವರು ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸುವ ಹೊಣೆ ಹೊತ್ತಿಕೂಂಡು ಕೊನೆಯವರೆಗೂ ಹೋರಾಡಿದರು, ಹೋರಾಟ ಮಾಡುತ್ತಾ ಅವರ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂಬ ಪ್ರಬಲವಾದ ನಂಬಿಕೆ ಈಗಲೂ ಅನೇಕ ಜನರಲ್ಲಿ ಕಾಣುತ್ತೇವೆ. ಹಾಗಾಗಿ ಈ ದಿಸೆಯಲ್ಲಿ ಅಂದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶರಣರ ಹಾಗೂ ವಿಶೇಷವಾಗಿ ಚನ್ನಬಸವಣ್ಣನವರ ಕುರಿತು ಸಂಶೋಧನೆ ಆದಾಗ ಮಾತ್ರ ವಾಸ್ತವ ನಿಜ ರೂಪ ಜನಸಾಮಾನ್ಯರಿಗೆ ಗೊತ್ತಾಗಬಹುದೆಂಬ ನಿರೀಕ್ಷೆ ನಮ್ಮದು. ಕಾರಣ ಸಂಬಂಧ ಪಟ್ಟ ಸರ್ಕಾರ ಸಂಶೋಧನೆ ಮಾಡಲ ಮುಂದಾಗಬೇಕು, ಈ ಮೂಲಕ ಜನರಿಗೆ ಸತ್ಯ ತಿಳಿಸಬೇಕು ಎಂಬುವುದೇ  ಬಸವಾಭಿಮಾನಿಗಳ  ಅದಮ್ಯ ಬಯಕೆ.  ಚನ್ನಬಸವಣ್ಣನವರ ಸ್ಮರಣೆ: ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಜನಪರ ಸಾಧನೆ ಮಾಡಿ, ಇಡೀ ಶರಣ ಸಂಕುಲದ ವಿಶ್ವಾಸ ಗಳಿಸಿ,ಶೂನ್ಯಪೀಠಾಧ್ಯಕ್ಷಾಗುವ ಮೂಲಕ ಸಾವಿರಾರು ವಚನಗಳನ್ನು ರಚಿಸಿ, ಲಿಂಗಾಯತ ಧರ್ಮ ಸ್ಥಾಪನೆಯಲ್ಲಿ ಮುಂಚುಣಿಯಾಗಿ ನಿಂತು,ದಣಿದವರ – ನೊಂದವರ ಬಾಳಿಗೆ ಬೆಳಕ್ಕಾಗಿ,ಕಲ್ಯಾಣ ರಾಜ್ಯದ ಸಮಾನತೆಯ ನೀತಿಯ  ಮೌಲ್ಯಗಳನ್ನು ಜಗಕ್ಕೆಲ್ಲ ಪಸರಿಸಿ, ಮುಗೀಲೆತ್ತರಕೇ ಬಸವ ಧ್ವಜವನ್ನು ಹಾರಿಸಿದ ಹಿರಿಮೆ ಇವರದು. ಶ್ರೇಷ್ಠ ಯುವ ರತ್ನ ಆಧ್ಯಾತ್ಮಿಕ ಚಿಂತಕ, ಸರ್ವಜನಾಂಗದ ಹೆಮ್ಮೆಯ ಪುತ್ರ,  ವಿಶ್ವಕಂಡ ಧೀಮಂತ ವ್ಯಕ್ತಿತ್ವದ ಯುವ ಚೈತನ್ಯ ಮೂರ್ತಿ, ಛಲಗಾರ, ಸೇವೆಯೇ ಶ್ರೇಷ್ಠ ಜೀವನವೆಂದು ಸಾರಿದ ಸಾಧಕ, ಮೇಧಾವಿ,ಇಂದಿನ ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ,ನಮ್ಮಲ್ಲರ ಅಚ್ಚುಮೆಚ್ಚಿನ ಶಿವಶರಣರಾಗಿ ,ಕತ್ತಲೆಯಿಂದ –  ಬೆಳಕಿನಡಗೆ ನಮ್ಮನ್ನು ಸಾಗಿಸಿದ ನಮ್ಮ ಆದ್ಯಾತ್ಮ ವೀರ, ಶಿವಶರಣ ನೆಚ್ಚಿನ  ಚನ್ನಬಸವಣ್ಣನರಿಗೆ ನನ್ನ ಅಂತರಂಗದ –  ಅಃತಕರಣದ ಶರಣು ಶರಣಾರ್ಥಿ. ಕೊನೆಯ ನುಡಿ : ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ಶಿವಶರಣರ ಶ್ರಮ ಬಹಳ ದೊಡ್ಡದು ಅನ್ನುವುದು ಬಹಳಷ್ಟು ಜನರಿಗೆ ಗೂತ್ತಿಲ್ಲ, ಎನ್ನುವುದೇ ಅತ್ಯಂತ ನೋವಿನ  ಸಂಗತಿಯಾಗಿದೆ ಶರಣ ಬಂಧುಗಳೆ.

ಲೇಖಕರು : ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *