ಮಹಾ ನವರಾತ್ರಿಯ ನವದಿನ ಪ್ರತೀಕ

Spread the love

ಮಹಾ ನವರಾತ್ರಿಯ ನವದಿನ ಪ್ರತೀಕ

ದುರ್ಗೆಯ ನವ ರೂಪಾರಧನೆ ಸುಮುಖ

ಪ್ರತಿದಿನ ರಾತ್ರಿಗೊಬ್ಬಳ ಪೂಜೆ ದುರ್ಗಿಣಿ

ಭಕ್ತಿಭಾವದಿಂದೊಸರುವ ಸಮೂಹ ದನಿ || ೦೧ ||

 

ಮೊದಲ ದಿನದ ಮಾತೆಯೆ ಶೈಲಪುತ್ರಿ

ಹಿಮಾಲಯ ಹಿಮವಂತನ ಸುತೆ ಧಾತ್ರಿ

ಒಲಿಸಲು ಸಾಕು ಪರಿಶುದ್ಧ ಘೃತಾರ್ಪಣ

ರೋಗರುಜಿನವಿಲ್ಲದ ಜೀವನಕೀವ ತ್ರಾಣ || ೦೨ ||

 

ದ್ವಿತೀಯ ರೂಪವೆ ಮಾತ ಬ್ರಹ್ಮಚಾರಿಣಿ

ಸಮಾಧಿಯೋಗ ನಿರತೆ ಸರಳಾಚಾರಿಣಿ

ಹಣ್ಣು ಸಕ್ಕರೆ ಸಾಕು ಕರುಣಿಸುವ ಹರಕೆ

ಸಕುಟುಂಬ ಧೀರ್ಘಾಯುವಾಗಿಸೆ ವರಕೆ || ೦೩ ||

 

ತೃತೀಯ ರೂಪವೆ ಮಾತ ಚಂದ್ರಘಂಟಾ

ಶಿರದರ್ಧಚಂದ್ರನ ವದನ ಹಣೆಗೆ ತೊಟ್ಟ

ಆಸೆ ಪೂರೈಸಿ, ನೋವ ನಿವಾರಿಸುವಾಕೆ

ಸಿಹಿಖಾದ್ಯ ಹಾಲು ಖೀರ ಓಲೈಕೆ ಸಾಕೆ || ೦೪ ||

 

ಚತುರ್ಥ ರೂಪಿನಲಿ ಮಾತಾ ಖುಷ್ಮಾಂಡ

ಹಸನ್ಮುಖಿ ಮುಗುಳ್ನಗೆ ಸೃಷ್ಟಿ ಬ್ರಹ್ಮಾಂಡ

ಮಲಪುವಾ ಅರ್ಪಿಸುತ ಬುದ್ಧಿಮತ್ತೆ ಹೆಚ್ಚೆ

ದೃಢನಿರ್ಧಾರ ಕ್ಷಮತೆಯೀ ದೇವಿಯ ಇಚ್ಛೆ || ೦೫ ||

 

ಪಂಚಮ ರೂಪಲಿ ಮಾತಾ ಸ್ಕಂದಮಾತ

ಕಾರ್ತಿಕೇಯನ ತಾಯಾಗಿ ದುರ್ಗಾ ವ್ಯಕ್ತ

ಬಾಳೆ ಹಣ್ಣಿನ ಅರ್ಪಣೆ ದೇವಿ ಸಂತೃಪ್ತಿಗೆ

ನೀಡಲು ಭೌತಿಕ ದೃಢಕಾಯದ ಕೊಡುಗೆ || ೦೬ ||

 

ಷಷ್ಠ ರೂಪಿ ದುರ್ಗ ಮಾತಾ ಕಾತ್ಯಾಯನಿ

ಕಾತ್ಯಾಯನ ಋಷಿವರನ ಮಗಳೀ ಜನನಿ

ಸವಿ ಆರೋಗ್ಯದ ಛವಿ ಮಧುವರ್ಪಣೆ ನಗೆ

ದೈತ್ಯ ದಮನಕೆ ಬಂದವಳ ಸೊಗ ಸೊಬಗೆ || ೦೭ ||

 

ಸಪ್ತಮ ರೂಪೆ ಕರಾಳ ಮಾತಾ ಕಾಳರಾತ್ರಿ

ಪಾಪ ಕೂಪಗಳೆಲ್ಲವ ಹರಿಸೊ ರೌದ್ರತೆ ಸಿರಿ

ಸಿಹಿ ಬೆಲ್ಲದ ಖಾದ್ಯ, ಬೆಲ್ಲವೆ ಆಗಿ ನೈವೇದ್ಯ

ಕಾಳ ರಾತ್ರಿಯಲು ಹರಸಿ ಸಲಹೆ ಸಮೃದ್ಧ || ೦೮ ||

 

ಅಷ್ಟಮ ರೂಪಿಣಿ ಗೌರವರ್ಣದೆ ಮಹಾಗೌರಿ

ಯಶ ಪ್ರದಾಯಿನಿಗೆ ತೆಂಗ ಕಲ್ಪತರು ಭೂರಿ

ಸಂತಾನ ಪ್ರದಾಯಿನಿ ತೆಂಗಿನದಾನದೆ ಸಿಕ್ಕೆ

ಕನ್ಯಾಪೂಜೆಯ ರೂಪದಿ ಆರಾಧನೆ ಬಯಕೆ || ೦೯ ||

 

ಅಂತಿಮ ನವಮರೂಪ ಮಾತಾ ಸಿದ್ಧಿ ಧಾತ್ರಿ

ಸಕಲ ಸಿದ್ಧಿ ಪ್ರಾಪ್ತಿಗೆ, ಶರಣಾಗಲೆ ನವರಾತ್ರಿ

ಎಳ್ಳು ಕನ್ಯಾಪೂಜೆಯ ಆರಾಧನೆಯ ನಿಮಿತ್ತ

ಯೋಗಿ ದೇವದೇವಿಯರಿಂದಲು ತಾ ಪೂಜಿತ || ೧೦ ||

ಕವಿತೆ :- ಮಹೇಶ ಶರ್ಮಾ

Leave a Reply

Your email address will not be published. Required fields are marked *