ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ ಜನ್ಮದಿನ ಆಚರಣೆ….

Spread the love

ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ ಜನ್ಮದಿನ ಆಚರಣೆ….

   

ಚಿಟಗುಪ್ಪಾ :  ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪಾ ಹಾಗೂ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು,ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು,ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ ಯವರ ಸಂಯುಕ್ತ ಆಶ್ರಯದಲ್ಲಿ ಇಂದು ಕಲ್ಯಾಣ ಕಾಯಕ ಪ್ರತಿಷ್ಠಾನದ ಕಚೇರಿಯಲ್ಲಿ  ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ   ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಣೆ ಮಾಡಲಾಯಿತು.  ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಬೀದರ ಜಿಲ್ಲಾ ತೆರಿಗೆ ಅಧಿಕಾರಿಗಳಾದ ಶರಣ ದಯಾನಂದ ಕಾಂಬ್ಳೆಯವರು ಮಾತನಾಡಿ 12ನೇ ಶತಮಾನದ ಬಸವಾದಿ ಪ್ರಮಥರು ಜಗತ್ತಿಗೆ ಸಮಾನತೆ, ಸಂದೇಶ ಸಾರಿದ್ದಾರೆ. ನುಡಿದಂತೆ ನಡೆಯುವ ಮೂಲಕ,ಜಾಗತಿಕ ಲೋಕಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ಶರಣರು ಲಿಂಗಭೇದ, ಜಾತಿಭೇದ, ಮೇಲುಕಿಳುಗಳೆನ್ನುವ ಪಿಡುಗುಗಳನ್ನು ಸಮಾಜದಿಂದ ಹೋಗಲಾಡಿಸಲು ಸತತವಾಗಿ ಪ್ರಯತ್ನ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ ಎಂದರು.ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಉಪಾಧ್ಯಕ್ಷರಾದ ಶರಣ ವಿಠಲರಾವ ಪಟ್ಟಣಕರವರು ಮಾತನಾಡಿ ಪ್ರತಿಯೊಬ್ಬರೂ ಸಮಾಜದಲ್ಲಿ ಸಮಾನತೆಯಿಂದ ಬಾಳಬೇಕು, ವಿಶ್ವಗುರು ಬಸವಣ್ಣನವರು ಸೇರಿದಂತೆ ಸರ್ವ ಶರಣರ ಆಶೆ ಸಹ ಇದೆ ಆಗಿತ್ತು. ಅದೇ ದಿಸೆಯಲ್ಲಿ ಚಿಟಗುಪ್ಪಾ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಾಗಲೆಂದರು. ಶಿಕ್ಷಕರಾದ ಶರಣ ರಾಜಶೇಖರ ಉಪ್ಪಿನ ರವರು ಮಾತನಾಡಿ ಶರಣರ ಆಶಯದಂತೆ ನಾವೆಲ್ಲರೂ ಬದುಕು ಸಾಗಿಸಬೇಕಾಗಿದೆ.ಶಿವಶರಣರ ವಿಚಾರಧಾರೆಯಂತೆ ನಡೆಯೋಣ.ಈ ದಿಸೆಯಲ್ಲಿ ಚಿಂತನ – ಮಂಥನ ಮಾಡುವ ಮೂಲಕ ಶರಣರ ದಾರಿಯಲ್ಲಿ ಸಾಗೋಣವೆಂದರು.  ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣ ರಾಜಪ್ಪಾ ಜಮಾದಾರ್ ರವರು ಮಾತನಾಡಿ ಶರಣರ ವಿಚಾರಗಳು ಎಲ್ಲರಿಗೂ ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಶಾಲಾ – ಕಾಲೇಜುಗಳಲ್ಲಿ ಶರಣರ ಕುರಿತು ಉಪನ್ಯಾಸ ಗೋಷ್ಠಿಗಳು ಏರ್ಪಡಿಸಬೇಕೆಂದರು.  ಶಿಕ್ಷಕ,ಸಾಹಿತಿಗಳಾದ ಶರಣ ರಮೇಶ ಸಲಗರವರು ಶರಣ ಸಂಸ್ಕೃತಿ ಮೇಲೆ ವಿಶೇಷ ಉಪನ್ಯಾಸವನ್ನು ನೀಡುತ್ತಾ, ಹನ್ನೆರಡನೇ ಶತಮಾನ ರಾಜಕೀಯ, ಮತಧರ್ಮ, ಭಾಷೆ, ಸಾಹಿತ್ಯ, ಸಾಮಾಜಿಕ ಬದಲಾವಣೆಗಳಿಂದಾಗಿ ವಿಶೇಷ ಮಹತ್ವ ಪಡೆದಿದೆ. ಶರಣ್ಯ ಭಾವದಿಂದ ಸೃಷ್ಟಿಕರ್ತನನ್ನು ಆರಾಧಿಸಿ ಕೊನೆಯಲ್ಲಿ ಸೃಷ್ಟಿಕರ್ತನೇ ಆಗುವ ಭಕ್ತರನ್ನು ಶಿವಶರಣರು ಎಂದು ಕರೆಯುತ್ತಾರೆ. ನಡೆ-ನುಡಿಗಳಲ್ಲಿ ಅಂತರವಿರದ ಇವರ ಜೀವನದ ಆದರ್ಶಗಳೇ ಶರಣ ಸಂಸ್ಕೃತಿ. ಈ ಶರಣರು ರಚಿಸಿದ ವಚನ ಸಾಹಿತ್ಯವನ್ನೇ ಇಲ್ಲಿ ‘ಶರಣ ಸಾಹಿತ್ಯ’ ಎನ್ನುತ್ತಾರೆ. ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣ ಕಾಯಕ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತಧರ್ಮವೂ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ‘ಕಾಯಕವೇ ಕೈಲಾಸ’ ಎಂದ ಬಸವಣ್ಣ ‘ಉದ್ಯೋಗಂ ಕಾಯಕಜೀವಿಗಳ ಲಕ್ಷಣ’ ಎಂದು ಜಗತ್ತಿಗೆ ಸಾರಿದಾರೆ. ಕಾಯಕದಲ್ಲಿ ನಿರತವಾದರೆ,ಗುರುದರ್ಶನವಾದರೂ ಮರೆಯಬೇಕು,ಲಿಂಗಪೂಜೆಯಾದರೂ ಮರೆಯಬೇಕು’ ಎಂದು ಹೇಳುವ ಶರಣರ ಮಾತುಗಳು ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಸಾಲುಗಳು ಶರಣ ಸಂಸ್ಕೃತಿಯಲ್ಲಿ ಕಾಯಕಕ್ಕೆ ಶರಣರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತವೆ. ಹಾಗಾಗಿ ಶರಣ ಸಂಸ್ಕೃತಿ ಶರಣರ ಸಮಗ್ರಹ ವಿಚಾರಧಾರೆಯ ಸಂಗಮವಾಗಿದೆ.ಇಲ್ಲಿ ಸಮಾನತೆ, ಸಹೋದರತೆ ಸೇರಿದಂತೆ ವಿವಿಧ ಜೀವಪರ ಚಿಂತನೆಗಳು ಮುಖ್ಯವಾಗಿ ಕಾಣುತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ, ಪರಿಷತ್ತಿನ ಅಧ್ಯಕ್ಷರು, ಸಾಹಿತಿಯಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ 12ನೇ ಶತಮಾನದ ಬಸವಾದಿ ಶರಣರ ಆಶಯದಂತೆ ನಾವೆಲ್ಲರೂ ಸೇರಿ ಹೆಜ್ಜೆ ಹಾಕೋಣ, ಶರಣರ ಚಿಂತನೆಗಳನ್ನು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸುಗಳಿಗೆ ಮುಟ್ಟಿಸುವ ಕೆಲಸ ಬರುವಂತಹ ದಿನಗಳಲ್ಲಿ ಮಾಡೋಣ ವೆಂದು, ಶರಣರ ಆದರ್ಶ ವಿಚಾರಗಳು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,ಸಮಾಜಕ್ಕೆ ಮಾದರಿಯಾಗಿ ಬದುಕುವ ಮೂಲಕ ನಮ್ಮ ಋಣವನ್ನು  ತೀರಿಸುವ ಪ್ರಯತ್ನ ಮಾಡೋಣವೆಂದರು. ಶರಣೆ ಶಿಕ್ಷಕಿ ಸಾವಿತ್ರಿ ಮುತ್ತಲಗೇರಿಯವರು ಶರಣರ ವಚನಗಳನ್ನು ಗಾಯನ ಮಾಡಿದರು. ಶರಣ ಮಾಹಾರುದ್ರಪ್ಪಾ ಅಣದೂರೆ ಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಶರಣ ಚಂದ್ರಶೇಖರ ತಂಗಾರವರು ಸ್ವಾಗತಿಸಿದರು. ಶರಣೆ ಶಿಕ್ಷಕಿ ಸವಿತಾ ಪಾಟೀಲರವರು ನಿರೂಪಿಸಿದರು. ಶರಣ ಮನೋಹರ ಜಕ್ಕಾರವರು ಶರಣು ಸಮರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ತಿಪ್ಪಣ್ಣಾ ಶರ್ಮಾ,ಚಂದ್ರಕಾಂತ ಜಂಬಗಿ,ಈರಣ್ಣಾ ಚೀತಕೋಟಿ, ಚನ್ನಪ್ಪಾ ಅಂಬಲಗಿ,ಈರಪ್ಪಾ ಪಾರಾ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

  ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *