ರಸ್ತೆ ಬದಿ ಲಿಂಬೆ ಪಾನಕ‌ ಮಾರುತ್ತಿದ್ದ ಯುವತಿ ಸದ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್

Spread the love

ರಸ್ತೆ ಬದಿ ಲಿಂಬೆ ಪಾನಕ‌ ಮಾರುತ್ತಿದ್ದ ಯುವತಿ ಸದ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್

ತಿರುವನಂತಪುರಂ: ಕೇರಳದ ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್‍ಸ್ಪೆಕ್ಟರ್ ಆಗಿ ಸೇರಿರುವ ಆಯನಿ ಸಿವ ಅವರ ಬದುಕು ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಆಯನಿಯನ್ನು, ಒಂದು ಮಗುವಾಗುತ್ತಲೇ ಗಂಡ ಬಿಟ್ಟು ಹೋದ. ಹಸುಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಭವಿಷ್ಯದ ಕಠಿಣ ದಿನಗಳನ್ನು ನೆನೆದು ಕಣ್ಣೀರಿಡುವಾಗ ಆಕೆಗಿನ್ನೂ 18 ವರ್ಷ. ಸಂಕಷ್ಟಗಳನ್ನು ಎದುರಿಸಿ ಗುರಿ ತಲುಪಿರುವ ಆಯನಿಗೆ ಈಗ 31 ವರ್ಷ ವಯಸ್ಸು. ವರ್ಕಳದ ಪ್ರವಾಸಿ ತಾಣದಲ್ಲಿ ನಿಂಬೆ ಜ್ಯೂಸ್, ಐಸ್‌ ಕ್ರೀಂ ಮಾರಾಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹದಿನೆಂಟು ವರ್ಷದ ಯುವತಿ ಈಗ ಅದೇ ಊರಿನಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಿದ್ದಾರೆ. ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ನೀಡಿದ್ದಾರೆ. ಆನೀ ಶಿವಾ ಅವರ ಈ ಯಶೋಗಾಥೆ, ಬದುಕಿನಲ್ಲಿ ಸೋತ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗುವಂತಿದೆ. ಹದಿನೆಂಟು ವರ್ಷವಿದ್ದಾಗ ಆನೀ ಶಿವಾ ಅವರು ಕಂಜಿರಂಕುಲಂನ ಕೆಎನ್‌ಎಂ ಸರ್ಕಾರಿ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ತರಗತಿ ಓದುತ್ತಿದ್ದರು. ಅದೇ ಸಮಯದಲ್ಲಿಯೇ ತನ್ನ ಕುಟುಂಬದ ವಿರೋಧ ಕಟ್ಟಿಕೊಂಡು ಮದುವೆಯಾದರು. ಒಂದು ಮಗುವೂ ಆಯಿತು. ಆದರೆ ಬದುಕು ಇನ್ನೊಂದು ಮುಖವನ್ನು ತೋರಿಸಿತ್ತು. ನಂಬಿಕೊಂಡು ಮದುವೆಯಾಗಿದ್ದ ಪತಿ ತೊರೆದು ಹೋಗಿದ್ದ. ತನ್ನ ತವರು ಮನೆ ಹಾದಿ ಹಿಡಿದರೂ, ಅವರ ಮನೆ ಬಾಗಿಲು ಇವರಿಗಾಗಿ ತೆರೆಯಲಿಲ್ಲ. ಎಲ್ಲರಿಂದ ತ್ಯಜಿಸಲ್ಪಟ್ಟ ಬಳಿಕ ಆಯನಿ ವರ್ಕಳದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದರು. ‘ವರ್ಕಳದ ಶಿವಗಿರಿ ಆಶ್ರಮದ ಅಂಗಡಿಗಳಲ್ಲಿ ಲಿಂಬೆ ಪಾನಕ, ಐಸ್‍ಕ್ರೀಂ ನಿಂದ ಹಿಡಿದು ಕರಕುಶಲ ವಸ್ತುಗಳನ್ನು ಮಾರುವವರಗೆ ನಾನಾ ರೀತಿಯ ಸಣ್ಣ ವ್ಯಾಪಾರಗಳನ್ನು ಪ್ರಯತ್ನಿಸಿದ್ದೆ. ಯಾವುದೂ ಸಫಲವಾಗಿರಲಿಲ್ಲ. ಆ ಬಳಿಕ ಒಬ್ಬ ವ್ಯಕ್ತಿ, ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ಮತ್ತು ಓದಲು ಸಲಹೆ ನೀಡಿ, ಹಣ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ ಆಯನಿ. “ನಾನು ಓದುವ ಸಮಯದಲ್ಲಿ ಐಪಿಎಸ್ ಆಗಬೇಕೆಂದು ಕನಸು ಕಂಡಿದ್ದೆ. ಜೀವನ ನನಗೆ ಬೇರೆಯದನ್ನೇ ನೀಡಿತ್ತು. ಆದರೆ ನನಗೆ ಈಗ ಸಿಕ್ಕಿರುವ ಸ್ಥಾನ ಹಾಗೂ ಸಿಗುತ್ತಿರುವ ಬೆಂಬಲ ನೋಡಿದರೆ ಕಣ್ತುಂಬಿ ಬರುತ್ತದೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಆನೀ. ನನ್ನ ನೆನ್ನೆಗಳೊಂದಿಗೆ ಇದಕ್ಕಿಂತ ಇನ್ನೆಷ್ಟು ಉತ್ತಮವಾಗಿ ಸೇಡು ತೀರಿಸಿಕೊಳ್ಳಲು ಸಾಧ್ಯ ಎಂದು ತಮ್ಮ ಫೇಸ್ ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. “ಇದೇ ಜಾಗದಲ್ಲಿ ಪುಟ್ಟ ಮಗುವಿನೊಂದಿಗೆ ಅಳುತ್ತಾ ಕೂತಿದ್ದೆ. ಈಗ ಅದೇ ಜಾಗದಲ್ಲಿ ನಾನು ಸಬ್ ಇನ್‌ಸ್ಪೆಕ್ಟರ್ ಆಗಿರುವುದು ಹೆಮ್ಮೆ ಎನಿಸುತ್ತಿದೆ” ಎಂದಿದ್ದಾರೆ. 2014ರಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್‌ಐ ಆಯ್ಕೆ ಪರೀಕ್ಷೆ ಬರೆದು ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿ ಬಳಿಕ ಈಗ ಪ್ರೊಬೆಷನರಿ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಕೇರಳದ ವಿರೋಧ ಪಕ್ಷದ ನಾಯಕ, ವಿ ಡಿ ಸತೀಸನ್ ಕೂಡ, ಆಯನಿಯ ಸಾಧನೆಯನ್ನು ಹೊಗಳಿದ್ದು, ‘ಅಭಿನಂದನೆಗಳು ಆಯನಿ ಸಿವ, ಸಬ್ ಇನ್‍ಸ್ಪೆಕ್ಟರ್ ಆಫ್ ಪೊಲೀಸ್! 18ನೇ ವಯಸ್ಸಿನಲ್ಲಿ ತನಗೆ ಮತ್ತು ತನ್ನ ಮಗನಿಗಾಗಿ ಬದುಕು ಕಟ್ಟಿಕೊಳ್ಳಲು, ಕಷ್ಟಗಳನ್ನು ಎದುರಿಸಿದರು. ಪ್ರತಿದಿನ ದುರ್ಬಲ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ಈ ಪುರುಷ ಪ್ರಧಾನ ಸಮಾಜದಲ್ಲಿ , ಅವರ ಬದುಕು ಮತ್ತು ಸಾಧನೆ ನಿಜಕ್ಕೂ ಪ್ರೇರಣಾದಾಯಕ’ ಎಂದು ಟ್ವೀಟ್ ಮಾಡಿದ್ದಾರೆ. ಕೇರಳ ಪೊಲೀಸರು ಆನೀ ಶಿವಾ ಅವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದು, “ವಿಲ್ ಪವರ್ ಹಾಗೂ ಆತ್ಮವಿಶ್ವಾಸಕ್ಕೆ ನೈಜ ಮಾದರಿಯಿದು. ಆರು ತಿಂಗಳ ಮಗುವಿನೊಂದಿಗೆ ಬೀದಿಗೆ ಬಿದ್ದಿದ್ದ ಯುವತಿ ಈಗ ಸಬ್ ಇನ್‌ಸ್ಪೆಕ್ಟರ್ ಆಗಿರುವುದು ಸುಲಭ ಸಾಧನೆಯಲ್ಲ” ಎಂದಿದ್ದಾರೆ.

ವರದಿ – ಸಂಪಾದಕೀಯ..

ಕರ್ನಾಟಕದ ಪ್ರತಿ ಜಿಲ್ಲೆ ಹಾಗೂ ತಾಲೂಕು, ಪ್ರತಿ ಹಳ್ಳಿ/ಹಳ್ಳಿಗಳಿಂದ ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಪರ್ಕಿಸಿರಿ.

ಆರ್.ಬಿ.ಅಲಿಆದಿಲ್ ಸಂಪಾದಕರು                  ಅಮಾಜಪ್ಪ ಹೆಚ್.ಜಿ. ಉಪ-ಸಂಪಾದಕರು

ಮೋ.ನಂ / 9535969428                            ಮೋ.ನಂ / 8861279127

Leave a Reply

Your email address will not be published. Required fields are marked *