ಶಿಕ್ಷಣಕ್ಕೆ ಬಹಳಷ್ಟು ಶಕ್ತಿ ಇದೆ, ಶಿಕ್ಷಣದಿಂದಲೇ ಅನೇಕರು ಸಾಧಕರಾಗಿದ್ದಾರೆ: ಬಂಡೆಪ್ಪ ಖಾಶೆಂಪುರ್

Spread the love

ಶಿಕ್ಷಣಕ್ಕೆ ಬಹಳಷ್ಟು ಶಕ್ತಿ ಇದೆ, ಶಿಕ್ಷಣದಿಂದಲೇ ಅನೇಕರು ಸಾಧಕರಾಗಿದ್ದಾರೆ: ಬಂಡೆಪ್ಪ ಖಾಶೆಂಪುರ್

ಬೀದರ್ (ಜೂ.28): ಶಿಕ್ಷಣಕ್ಕೆ ಬಹಳಷ್ಟು ಶಕ್ತಿ ಇದೆ. ನಮ್ಮ ದೇಶದಲ್ಲಿ ಶಿಕ್ಷಣದಿಂದಲೇ ಅನೇಕರು ಮಹಾನ್ ಸಾಧಕರಾಗಿದ್ದಾರೆ. ಉನ್ನತ ಶಿಕ್ಷಣ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ‘2020-21ನೇ ಸಾಲಿನ ಬಿ.ಎ, ಬಿ.ಎಸ್.ಸಿ, ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಉಚಿತ ಟ್ಯಾಬಲೆಟ್ ಪಿಸಿ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಶಿಕ್ಷಣಕ್ಕೆ ಇಷ್ಟೊಂದು ಅವಕಾಶಗಳು ಇರ್ಲಿಲ್ಲ. ಕಟ್ಟಡಗಳು ಇರ್ಲಿಲ್ಲ. ಅಂದಿನ ದಿನಗಳಲ್ಲಿ ಗಿಡಮರಗಳ ನೆರಳಲ್ಲಿ ಓದುತ್ತಿದ್ದರು. ಈಗ ಮನೆಯ ಮುಂದೆಯೇ ಶಾಲೆಗಳಿವೆ. ಮಧ್ಯಾಹ್ನ ಬಿಸಿಯೂಟ ಕೊಡಲಾಗುತ್ತಿದೆ. ಇದನ್ನು ಇಂದಿನ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬಲೆಟ್ ಪಿಸಿ ಗಳನ್ನು ಕೊಡ್ತಿರೋದು ಒಳ್ಳೆಯ ಕೆಲಸವಾಗಿದೆ. ಮೊಬೈಲ್, ಇಂಟರ್ನೆಟ್ ನಿಂದ ಪ್ರಪಂಚವೇ ನಿಮ್ಮ ಕೈಯಲ್ಲಿದ್ದಂತೆ‌, ನೀವು ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೆಟ್ಟದನ್ನು ದೂರ ತಳ್ಳಬೇಕು. ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕಾಗಿದೆ. ನಾನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡ್ತಿದ್ದೇನೆ. ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಮಾಡುವ ನಿಟ್ಟಿನಲ್ಲಿ ಬಹಳಷ್ಟು ಅನುದಾನ ನೀಡಿದ್ದೇನೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಓದಗಿಸಿಕೊಡುವ ಕೆಲಸವನ್ನು ನಾನು ಸದಾಕಾಲವೂ ಮಾಡುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮುಖಂಡರು ಸೇರಿದಂತೆ ಅನೇಕರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *