ಗಂಗಾವತಿ ತಾಲ್ಲೂಕಿನ ಬರಗೂರು ಗ್ರಾಮದ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ..

Spread the love

ಗಂಗಾವತಿ ತಾಲ್ಲೂಕಿನ ಬರಗೂರು ಗ್ರಾಮದ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ..

ಜಿಲ್ಲೆಯಲ್ಲಿ ಪದೇ ಪದೇ ಜಾತಿ ದೌರ್ಜನ್ಯದ ಘಟನೆಗಳು ವರದಿಯಾಗುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸಮಾಜ ಕಲ್ಯಾಣ ಇಲಾಖೆಯಾಗಲಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೋರಾಟಗಾರ ಕರಿಯಪ್ಪ ಗುಡಿಮನಿಯವರು ಕಿಡಿಕಾರಿದ್ದಾರೆ. ಒಂದೆಡೆ ಜಾತಿಯೆಂಬುದಿಲ್ಲ, ಮೀಸಲಾತಿ ತೆಗೆಯಬೇಕು ಇತ್ಯಾದಿ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಸಾಂಕ್ರಾಮಿಕ ಕಾಲದಲ್ಲಿಯೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಪದೇ ಪದೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೂನ್ 22 ರಾತ್ರಿ ಜರುಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಕುರುಬ ಸಮುದಾಯದ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ದಲಿತ (ಮಾದಿಗ) ಸಮುದಾಯದ ದಾನಪ್ಪ (23) ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದ್ದು ನಾಲ್ಕು ಜನರನ್ನು ಬಂಧಿಸಲಾಗಿದೆ. ಪ್ರಕರಣದ ಹಿನ್ನೆಲೆ

ಬರಗೂರು ಗ್ರಾಮದ ಕುರುಬ ಸಮುದಾಯದ ಮರಿಬಸಪ್ಪನವರ ಎರಡನೇ ಮಗಳಾದ ಸುನೀತಾ (20) ಮತ್ತು ಮಾದಿಗ ಸಮುದಾಯದ ಕರಿ ಹನುಮಂತಪ್ಪನವರ ಎರಡನೇ ಮಗ ದಾನಪ್ಪ (23) ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಪೋಷಕರಿಗೆ ತಿಳಿದು ಹುಡುಗಿಯ ತಂದೆ ಮರಿಬಸಪ್ಪ ಈ ಹಿಂದೆಯೇ ಹುಡುಗ ದಾನಪ್ಪನನ್ನು ಕರೆದು ಜಾತಿನಿಂದನೆ ಮಾಡಿದ್ದಲ್ಲದೆ, ಹಲ್ಲೆ ನಡೆಸಿ ಹುಡುಗಿಯ ತಂಟೆಗೆ ಬರಬಾರದೆಂದು ತಾಕೀತು ಮಾಡಿದ್ದರು ಎಂದು ಹುಡುಗನ ತಂದೆ ಕರಿ ಹನುಮಂತಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಮುಂದಿನ ವಾರ ಹುಡುಗಿಯ ಮದುವೆ ನಿಗಧಿಯಾಗಿದ್ದು, ಹಾಗಿದ್ದರೂ ಆಕೆ ದಾನಪ್ಪನೊಡನೆ ಮಾತನಾಡುತ್ತಿದ್ದಳು ಎಂದು ಆಕೆಯ ತಂದೆ ಮರಿಬಸಪ್ಪ ಜೂನ್ 22 ರ ರಾತ್ರಿ ಮಾತನಾಡುವುದಾಗಿ ದಾನಪ್ಪನನ್ನು ಕರೆಸಿಕೊಂಡಿದ್ದಾರೆ. ತದನಂತರ ಆತನನ್ನು ಬೆದರಿಸಿ, ಹೊಲದಲ್ಲೆಲ್ಲ ಅಟ್ಟಾಡಿಸಿಕೊಂಡು ತೀವ್ರ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ಕರಿ ಹನುಮಂತಪ್ಪ ತಿಳಿಸಿದ್ದಾರೆ. “22 ರ ರಾತ್ರಿ ಮನೆಯಿಂದ ಹೊರಹೋದ ಮಗ ವಾಪಸ್ ಬರುತ್ತಾನೆಂದು ರಾತ್ರಿ 12 ಗಂಟೆವರೆಗೆ ಕಾದೆವು. ಅವನು ಬಾರದಿದ್ದಾಗ ರಾತ್ರಿಯೆಲ್ಲ ಹುಡುಕಿದರೂ ಆತ ಸಿಗಲೇ ಇಲ್ಲ, ಬೆಳಿಗ್ಗೆ ಎದ್ದ ಕೂಡಲೇ ಮಗದ ಶವ ಆತ ಕೆಲಸ ಮಾಡುವ ಮರಿಸ್ವಾಮಿಯೆಂಬುವವರ ಹೊಲದಲ್ಲಿ ಪತ್ತೆಯಾಗಿದೆ ಎಂಬ ಆಘಾತ ಸುದ್ದಿ ಬರಸಿಡಿಲಂತೆ ಬಡಿಯಿತು” ಎಂದು ಮೃತನ ತಂದೆ ಅಳಲು ತೋಡಿಕೊಂಡಿದ್ದಾರೆ.

ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಹುಡುಗಿ ಸುನೀತಾ, ಆಕೆಯ ತಂದೆ ಮರಿಬಸಪ್ಪ, ತಾಯಿ ಲಲಿತಮ್ಮ, ಆಕೆಯ ಅಕ್ಕನ ಗಂಡ ಹುಲುಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಸಂಶಯದಲ್ಲಿ ಗ್ರಾಮಸ್ಥರಾದ ಕೋರಪ್ಪ, ಯಮನಪ್ಪ ಮತ್ತು ನಿಂಗಪ್ಪ ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಹೋರಾಟಕ್ಕೆ ಕರೆ ದಲಿತ ಯುವಕನ ಕೊಲೆ ನಡೆದ ನಂತರ ಬರಗೂರು ಗ್ರಾಮದಲ್ಲಿ ಭಯಭೀತ ವಾತವಾರಣ ನಿರ್ಮಾಣವಾಗಿದೆ. ಇದು ಮರ್ಯಾದೆಹೀನ ಹತ್ಯೆಯಾಗಿದೆ. ಹಾಗಾಗಿ ಕೂಡಲೇ ಅಲ್ಲಿನ ದಲಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಗಲಭೆ ನಡೆಯದಂತೆ ತಡೆಯಲು ಶಾಂತಿ ಸಭೆ ನಡೆಸಬೇಕಿದೆ. ಕ್ಷೇತ್ರದ ಶಾಸಕರಾದ ದಲಿತ ಸಮುದಾಯದ ಬಸವರಾಜ್ ದಡೆಸಗೂರುರವರು ಗ್ರಾಮಕ್ಕೆ ತೆರಳಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿಯವರು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಭೇಟಿ ಮಾತನಾಡಿರುವ ಅವರು, “ಜಿಲ್ಲೆಯಲ್ಲಿ ಪದೇ ಪದೇ ಜಾತಿ ದೌರ್ಜನ್ಯದ ಘಟನೆಗಳು ವರದಿಯಾಗುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸಮಾಜ ಕಲ್ಯಾಣ ಇಲಾಖೆಯಾಗಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸರ್ಕಾರ ರಾಜ್ಯದಲ್ಲಿ ನಡೆಯುವ ದಲಿತರು ಮತ್ತು ಶೋಷಿತರ ಮೇಲಿನ ಕೊಲೆ, ಶೋಷಣೆ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಘಟನೆ ನಡೆದ ನಂತರದ ಕ್ರಮಗಳಿಗಿಂತ ಇಂತಹ ಅಮಾನುಷ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ. ನಾನುಗೌರಿ.ಕಾಂ ಜೊತೆ ಮಾತನಾಡಿದ ಕರಿಯಪ್ಪ ಗುಡಿಮನಿಯವರು, “ಕಕ್ಕರಗೋಳ ಗ್ರಾಮದ ದಲಿತ ಯುವಕ ರಾಘವೇಂದ್ರನ ಬರ್ಬರ ಕೊಲೆ ನಡೆದು ಒಂದು ವರ್ಷವಾಗಿದೆ. ಇತ್ತೀಚೆಗೆ ಜಿಲ್ಲೆಯ ಹೊಸಳ್ಳಿಯಲ್ಲಿ ದಲಿತರಿಗೆ ಕ್ಷೌರ ಮಾಡದೆ ಹಲ್ಲೆ ನಡೆಸಿದ್ದಕ್ಕೆ ಅವರು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂತಹ ಹತ್ತಾರು ಘಟನೆಗಳು ನಡೆಯುತ್ತಲೇ ಇವೆ. ಹಾಗಾಗಿ ಸರ್ಕಾರವೇ ಈ ಜಾತಿ ದೌರ್ಜನ್ಯ ಕೊನೆಗೊಳಿಸಲು ಯತ್ನಿಸಬೇಕು. ಪ್ರತಿ ಗ್ರಾಮದಲ್ಲಿ ಸವಿತಾ ಸಮಾಜದ ನಿರುದ್ಯೋಗಿ ಯುವಕರಿಗೆ ಕಟಿಂಗ್-ಶೇವಿಂಗ್ ಅಂಗಡಿಯಿಟ್ಟುಕೊಟ್ಟು ಎಲ್ಲಾ ಜಾತಿಯವರಿಗೆ ಕ್ಷೌರ ಮಾಡುವಂತೆ ಮಾಡಬೇಕು. ಆ ಮೂಲಕ ಶಾಂತಿ -ಸಾಮರಸ್ಯ ಕಾಪಾಡಬೇಕು. ಪ್ರಸ್ತುತ ಪ್ರಕರಣದಲ್ಲಿ ಮೃತ ದಾನಪ್ಪನ ಕುಟುಂಬಕ್ಕೆ ಸೂಕ್ತ ಪರಿಹಾರ, ಭೂಮಿ ಮತ್ತು ಸರ್ಕಾರಿ ಹುದ್ದೆ ಕೊಡಬೇಕು” ಎಂದರು. ಈ ಕ್ರಮಗಳಿಗೆ ಜಿಲ್ಲಾಡಳಿತ, ಶಾಸಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು. ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸಿ ಸಮರ್ಪಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಆ ಮೂಲಕ ಈ ರೀತಿಯ ಘಟನೆಗಳು ನಡೆಯದಂತೆ ತಡೆಯಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿಯ ವತಿಯಿಂದ ತೀವ್ರ ಹೋರಟ ಹಮ್ಮಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *