ಕೊಪ್ಪಳ : ಜಂಟಿ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ(ಜೆಸಿಟಿಯು) ಹಾಗೂ ಸಂಯುಕ್ತ ಕಿಸಾನ್ ಮೋರ್ಛಾ ಜಂಟಿಯಾಗಿ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ಗಳ ಜಾರಿಯನ್ನು ವಿರೋಧಿಸಿ ನಗರದ ಅಶೋಕ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ತಹಶೀಲ್ ಕಛೇರಿಯ ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಮತ್ತು ಮಹಾವೀರ ಅಳ್ಳಳ್ಳಿ ಅವರ ಮೂಲಕ ಮನವಿ ರವಾನಿಸಲಾಯಿತು.
ಮನವಿಯಲ್ಲಿ ರೈತ ವಿರೋಧಿ ನೀತಿಗಳನ್ನು ರದ್ದುಗೊಳಿಸಿ. ದುಡಿಯುವ ವರ್ಗದ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿ ಮೇ 20, 2025, ಮಂಗಳವಾರ ರಂದು ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಯಿತು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ದುಡಿಯುವ ಜನರ ಬದುಕನ್ನು ಛಿದ್ರಗೊಳಿಸುವ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಶ್ರಮ ವಿರೋಧಿ ಕಾಯ್ದೆಗಳನ್ನು ತರಲು ಹೊರಟಿವೆ. ದುಡಿಯುವ ಜನರ ಬದುಕಿನ ಮೇಲೆ ನಡೆಯಲಿರುವ ಈ ಪ್ರಹಾರವನ್ನು ವಿರೋಧಿಸಿ ಜೆಸಿಟಿಯು [ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್] ಮತ್ತು ಎಸ್.ಕೆ.ಎಂ.[ಸಂಯುಕ್ತ ಕಿಸಾನ್ ಮೋರ್ಛಾ] ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ದೇಶವ್ಯಾಪಿಯಾಗಿ ರೈತರು ಮತ್ತು ಕಾರ್ಮಿಕರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ತಂದಿದ್ದ ನೀತಿಗಳನ್ನೇ ಮುಂದುವರೆಸುತ್ತಿರುವುದರಿಂದ ಮತ್ತು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಟ್ಟ ಮಾತುಗಳನ್ನೆಲ್ಲಾ ಮರೆತಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧವೂ ರೈತ – ಕಾರ್ಮಿಕರು ಸೇರಿ ತೀವ್ರ ಸ್ವರೂಪದ ಪ್ರತಿಭಟನೆ ದಾಖಲಿಸಬೇಕಿದೆ.
ಭಾರತದ ಕಾರ್ಮಿಕರೆಂದರೆ ಯಾವುದೇ ಭದ್ರತೆ ಇಲ್ಲದೆ, ಮಾಲೀಕರಿಗೆ ಯಾವುದೇ ಹೊಣೆಗಾರಿಕೆ ಇಲ್ಲದೆ, ಅಗ್ಗದ ಕೂಲಿ ದರದಲ್ಲಿ ಅತಿ ಹೆಚ್ಚು ಗಂಟೆ ದುಡಿಯುವ, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಕೆಲಸ ಮಾಡುವ ನವ ಗುಲಾಮರನ್ನಾಗಿ ಮಾಡುವುದು.ಮನಬಂದಂತೆ ಕಾರ್ಮಿಕರನ್ನು ದುಡಿಸಿಕೊಳ್ಳುವ, ಬೇಡವಾದರೆ ಬಿಸಾಕುವ ಸಂಪೂರ್ಣ ಸ್ವಾತಂತ್ರ್ಯ ಮಾಲೀಕರಿಗೆ ನೀಡುವುದು. ಅಗ್ಗದ ದರದಲ್ಲಿ ಭೂಮಿ, ಉಚಿತ ಕರೆಂಟು – ನೀರು ಒದಗಿಸಿ, ತೆರಿಗೆಯಲ್ಲಿ ಸಬ್ಸಿಡಿ ನೀಡಿ, ಬ್ಯಾಂಕ್ ಲೋನ್ ಮನ್ನಾ ಮಾಡಿ, ಹೊಸ ಕಂಪನಿಗಳಿಗೆ 20 ಲಕ್ಷ ಕೋಟಿಯವರೆಗೂ ಉತ್ತೇಜನ ನಿಧಿ ಕೊಟ್ಟು ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರದ ಒಡೆತನದಲ್ಲಿದ್ದ ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸೆಲ್, ಗ್ಯಾಸ್, ಮಿಲಿಟರಿ ಉತ್ಪಾದನೆ, ವಿಮಾನ, ರೈಲ್ವೆ, ಸ್ಟೀಲ್ – ಉಕ್ಕು – ಕಲ್ಲಿದ್ದಲನ್ನು ತಯಾರಿಸುವ ಕೈಗಾರಿಕೆಗಳು, ಬ್ಯಾಂಕ್ – ಎಲ್ ಐ ಸಿ, ಎಲ್ಲವುಗಳನ್ನೂ ಖಾಸಗೀಕರಣ ಮಾಡಿ ಖಾಸಗೀ ಖದೀಮರಿಗೆ ಅರ್ಪಿಸುವುದು. ಸರ್ವಂ ಕಾರ್ಪೋರೇಟ್ ಮಯಂ. ಕಾರ್ಮಿಕರ ಪಾಲಿಗೆ ಸರ್ವಂ ಸರ್ವನಾಶಂ. ಸಾರ್ವಜನಿಕರ ಮತ್ತು ದೇಶದ ಸಕಲ ಸಂಪತ್ತು ಅದಾನಿ – ಅಂಬಾನಿ ಸ್ವಾಹಂ ಸ್ವಾಹಂ ವಾಗುತ್ತಿದೆ. ಮಿಲಿಯಂತರ ಜನ ಹಸಿವು, ಬಡತನ,ನಿರುದ್ಯೋಗ,ಶಿಕ್ಷಣ,ಇನ್ನಿತರ ಸಮಸ್ಯೆಗಳಿಂದ ಜನ ಜರ್ಜರಿತರಾಗಿದ್ದಾರೆ .
ಕನಿಷ್ಠ ಶಿಕ್ಷಣ,ಆರೋಗ್ಯ, ಉದ್ಯೋಗ ಎಲ್ಲವೂ ಮಾರಾಟದ ವಸ್ತುವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ಕಾರ್ಮಿಕವರ್ಗಕ್ಕೆ,,ರೈತರಿಗೆ ವಿದ್ಯಾರ್ಥಿ ಯುವ ಜನ, ಮಹಿಳೆಯರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಜೆಸಿಟಿಯು ಮತ್ತು ಎಸ್ ಕೆ ಎಮ್ ವತಿಯಿಂದ ಈ ಮೂಲಕ ಒತ್ತಾಯಿಸುತ್ತದೆ.
ಮುಖ್ಯವಾಗಿ ನಮ್ಮ ಬೇಡಿಕೆಗಳಾದ ಕೇಂದ್ರ ಸರ್ಕಾರವು ಜಾರಿ ಮಾಡಲು ಬಯಸುತ್ತಿರುವ “4 ಲೇಬರ್ ಕೋಡ್” ಗಳನ್ನು ಹಾಗೂ “ಕೃಷಿ ಉತ್ಪನ್ನಗಳ ಮಾರುಕಟ್ಟೆಗಾಗಿ ರಾಷ್ಟ್ರೀಯ ಚೌಕಟ್ಟು ನೀತಿ”ಯನ್ನು ಈ ಕೂಡಲೇ ಹಿಂಪಡೆಯಬೇಕು.ಕೇಂದ್ರ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ರೈತರಿಗೆ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು.ಹಾಗೂ “ಭೂ ತಿದ್ದುಪಡಿ ಕಾಯ್ದೆ”, “ಎಪಿಎಂಸಿ ಕಾಯ್ದೆ”, “ಜಾನುವಾರು ಕಾಯ್ದೆ”,ಬಗರ್ ಹುಕುಂ ರೈತರಿಗೆ ಹಕ್ಕುಪತ್ರ, ರೈತರ ಸಾಲಮನ್ನಾ ಮುಂತಾದ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ರೈತ ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸಭೆ ಕರೆಯಬೇಕು.ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಸಾಮಾಜಿಕ ಭದ್ರತೆ, ಸವಲತ್ತುಗಳನ್ನು ಖಾತ್ರಿಪಡಿಸಿ. ದಿನದ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸುವ ಕಾರ್ಮಿಕ ವಿರೋಧಿ ನಿಲುವು ಹಿಂಪಡಿಯಬೇಕು.ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಉದ್ಯೋಗದ ಹಕ್ಕನ್ನು ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಮಾಡಿ,ಆಶಾ, ಆಂಗನವಾಡಿ, ಬಿಸಿಯೂಟ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ.
ಅನಾಹುತಕಾರಿ ಕಾರ್ಖಾನೆಗಳಲ್ಲಿ ಮಹಿಳೆಯರನ್ನು ದುಡಿಸುವುದು ಮಹಿಳಾ ಕಾರ್ಮಿಕರು ರಾತ್ರಿ ಪಾಳಿಯದಲ್ಲೂ ಕೆಲಸ ಮಾಡಿಸುವ ವಿಚಾರ ಕೈಬಿಡಬೇಕು.ಕಾರ್ಮಿಕರಿಗೆ ಪೆನ್ಷನ್, ಪಿಎಫ್, ಇಎಸ್‌ಐ ವೇಗವಾಗಿ ಜಾರಿಯಾಗಬೇಕು, ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಬಾರದು ಎಂದು ಕೊಪ್ಪಳ ಜಿಲ್ಲಾ ಜಂಟಿ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಮುಖಂಡರಾದ ಎಐಯುಟಿಯುಸಿ ಶರಣು ಗಡ್ಡಿ ,ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಸರ್ದಾರ್,ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್,ಆಶಾ ಸಂಘದ ಕೊಪ್ಪಳ ತಾಲ್ಲೂಕ ಅಧ್ಯಕ್ಷೆ ಸುನೀತಾ ಆಚಾರ,
ಮುಖಂಡ ಗಾಳೆಪ್ಪ ಮುಂಗೋಲಿ,ಮುದುಕಪ್ಪ, ಈರಪ್ಪ, ವೇಕಟೇಶ್ ರೆಡ್ಡಿ,ಗ್ರಾಮ ಪಂಚಾಯತಿ ನೌಕರ ಸಂಘದ ತಾಲೂಕಾಧ್ಯಕ್ಷ ಅಂಬರೀಶ್ ಗಾಣಿಗ,ಸ್ವಚ್ಛ ವಾಹಿನಿಯ ಸಂಚಾಲಕಿ ರತ್ನ ಕೇಸ್ಲಾಪುರ್, ರಂಗಮ್ಮ, ತಾಜುದ್ದೀನ್ ಬೆಳಗಟ್ಟಿ. ಮಂಜುನಾಥ್. ಶಾಂತಮ್ಮ ಎಲಿಗಾರ್, ಪ್ರದೀಪ್ ಮುಂತಾದವರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.