ಬಸವ ಜಯಂತಿ,……
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ ಸಮಯ……
ಈ ಬಸವ ಜಯಂತಿ ಬಸವಣ್ಣನವರನ್ನು ವಿಜೃಂಭಿಸುವುದು, ಆರಾಧಿಸುವುದು, ಭಕ್ತಿ ಪೂರ್ವಕವಾಗಿ ಪೂಜಿಸುವುದು, ಅತಿಮಾನುಷ ವ್ಯಕ್ತಿಯಂತೆ ಭಾವಿಸುವುದು, ಪವಾಡ ಪುರುಷರಂತೆ ಹರಕೆ ಹೊರುವುದು, ಸಂಘಟನಾತ್ಮಕವಾಗಿ ಒಗ್ಗೂಡಲು ಅವರ ಹೆಸರನ್ನು ಉಪಯೋಗಿಸಿಕೊಳ್ಳುವುದು, ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದು, ಪ್ರತಿಮೆಗಳನ್ನು ಸ್ಥಾಪಿಸುವುದು, ಅಧ್ಯಯನ ಪೀಠಗಳನ್ನು ಸೃಷ್ಟಿ ಮಾಡುವುದು, ದೊಡ್ಡ ದೊಡ್ಡ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವುದು, ರಸ್ತೆ, ವಿಶ್ವವಿದ್ಯಾಲಯ, ಸಾರಿಗೆ ನಿಲ್ದಾಣಗಳು ಮುಂತಾದುವುಗಳಿಗೆ ಹೆಸರಿಡುವುದು ಇವೆಲ್ಲವುಗಳನ್ನು ಹೊರತುಪಡಿಸಿ ಸಮ ಸಮಾಜದ, ಮಾನವೀಯ ಸಮಾಜದ, ನಾಗರೀಕ ಸಮಾಜದ ನಿರ್ಮಾಣದ ಹಾದಿಯಲ್ಲಿ ಏನಾದರೂ ಪ್ರಯತ್ನಗಳು ಸಾಗುತ್ತಿದೆಯೇ ಎಂಬುದನ್ನು ನೋಡಬೇಕಿದೆ……
ಬಸವಣ್ಣನವರು ಸಾಮಾನ್ಯ ಮನುಷ್ಯರೇ. ಆದರೆ ಅಸಾಮಾನ್ಯ ಮನಸ್ಸು ಅಥವಾ ಹೃದಯವುಳ್ಳವರು. ಅತ್ಯಂತ ಜೀವಪರ ನಿಲುವಿನ, ಸಕಲ ಜೀವಾತ್ಮಗಳಿಗೆ ಲೇಸನೆ ಬಯಸಿದ ಪ್ರಾಮಾಣಿಕ, ನಿಷ್ಕಳಂಕ, ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಹೊಂದಿದ ಸಮಾನತೆಯ ಹರಿಕಾರರು…..
ಪ್ರಾಕೃತಿಕ ಮತ್ತು ಸ್ವಾಭಾವಿಕ ಭಿನ್ನತೆಗಳನ್ನು ಹೊರತುಪಡಿಸಿ ಇಡೀ ಮಾನವ ಕುಲ ಒಂದೇ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎನ್ನುವ ಅತ್ಯಮೂಲ್ಯ ಚಿಂತನೆಗಳನ್ನು ನಾಡಿಗೆ ನೀಡಿದ ನೈಜ ಸಾಂಸ್ಕೃತಿಕ ನಾಯಕ ಬಸವಣ್ಣ, ನಡೆನುಡಿ ಸಂಸ್ಕೃತಿಯ ಪ್ರತಿಪಾದಕ ಬಸವಣ್ಣ, ಅಸಮಾನತೆಯ ವಿರುದ್ಧ ಬಂಡಾಯವೆಂದು ಸಮಾನತೆಗಾಗಿ ಹೋರಾಡಿದ ನೈಜ ಹೋರಾಟಗಾರ ಬಸವಣ್ಣ,……..
ಎಂದಿನಂತೆ ಬಸವಣ್ಣನವರನ್ನು ವಿಭೂತಿ, ಲಿಂಗಗಳ ಮೂಲಕವಾಗಲಿ, ವಚನಗಳ ಕಂಠಪಾಠದಿಂದಾಗಲಿ, ವಚನ ಸಾಹಿತ್ಯದ ಅಧ್ಯಯನದಿಂದಾಗಲಿ, ವಚನ ಸಂಸ್ಕೃತಿಯ ಉಪನ್ಯಾಸ, ಪ್ರವಚನ, ಭಾಷಣ, ಲೇಖನ, ಬರಹಗಳಿಂದಾಗಲಿ ನೈಜ ಬಸವಣ್ಣನವರನ್ನು ಅರಿಯುವುದು ಕೇವಲ ಒಂದು ಜ್ಞಾನಾರ್ಜನೆಯ ವಿಧಾನವಷ್ಟೇ…..
ನಮ್ಮೊಳಗಿನ ಮಾನವ ಪ್ರಜ್ಞೆ, ಹೃದಯ ವೈಶಾಲ್ಯತೆ, ಶುದ್ಧ ಮನಸ್ಥಿತಿ ಮಾತ್ರ ಬಸವಣ್ಣನವರು ನಮಗೆ ಅರ್ಥವಾಗಲು ಇರಬೇಕಾದ ಮೂಲಭೂತ ಅಂಶಗಳು. ಬಸವಣ್ಣನವರಂತಹ ವ್ಯಕ್ತಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಣೆಯಾದ ನಂತರವೂ ಇಲ್ಲಿನ ಜನಜೀವನದಲ್ಲಿ ಯಾವುದೇ ಗಂಭೀರ ಬದಲಾವಣೆಯಾಗದೆ ಎಂದಿನಂತೆ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ, ಗುಂಪುಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದಾದರೆ ಬಸವ ಅನುಯಾಯಿಗಳು ಅಥವಾ ಸಮಸಮಾಜ ಆಶಯದ ಜನರು ಬಸವಣ್ಣನವರನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದೇ ಅರ್ಥೈಸಬೇಕಾಗುತ್ತದೆ……
ಏಕೆಂದರೆ ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ವ್ಯಕ್ತಿತ್ವದ ಚಿಂತನೆಗಳು ನಮ್ಮ ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲವಾದರೆ ಎರಡು ರೀತಿಯಲ್ಲಿ ಭಾವಿಸಬೇಕಾಗುತ್ತದೆ. ಅವರ ಚಿಂತನೆಗಳು ಕೇವಲ ಆದರ್ಶಗಳಾಗಿ ವಾಸ್ತವದಿಂದ ದೂರವಿರುವುದರಿಂದ ಆ ಚಿಂತನೆಗಳ ಗಟ್ಟಿತನವನ್ನೇ ಪ್ರಶ್ನಿಸಬೇಕಾಗುತ್ತದೆ ಅಥವಾ ಗಟ್ಟಿತನದ ಚಿಂತನೆಗಳು ಸಾಮಾನ್ಯ ಜನರಿಗೆ ತಲುಪುವಲ್ಲಿಯೇ ವಿಫಲವಾಗಿ ಜನರ ಮಾನಸಿಕ ಗುಣಮಟ್ಟವೇ ಆ ಚಿಂತನೆಯ ಮಟ್ಟದಲ್ಲಿಲ್ಲ ಎಂದು ಜನರನ್ನೇ ಗುರಿ ಮಾಡಿ ಟೀಕಿಸಬೇಕಾಗುತ್ತದೆ……
ವಚನ ಸಂಸ್ಕೃತಿ ಅಥವಾ ಬಸವ ತತ್ವವೆಂಬುದು ಒಂದು ಜೀವನ ವಿಧಾನ, ಒಂದು ಸಾಮಾಜಿಕ ವ್ಯವಸ್ಥೆ. ಅದು ವಾಸ್ತವವಾಗಿ ಅನುಷ್ಠಾನವಾಗಿದ್ದೇ ಆದರೆ ಜನರ ಜೀವನ ಮಟ್ಟ ಅತ್ಯುತ್ತಮವಾಗಿರುತ್ತದೆ. ಯಾವುದೇ ಮೇಲುಕೀಳಿನ ವ್ಯತ್ಯಾಸಗಳಿಲ್ಲದೆ, ಅಸಹಜ ನಡುವಳಿಕೆಗಳಿಲ್ಲದೆ, ಮೋಸ ವಂಚನೆಗಳಿಲ್ಲದೆ, ಒಂದು ಸಮ ಸಂಸ್ಕೃತಿಯ, ಸಮ ಸಮಾಜ ಅಸ್ತಿತ್ವದಲ್ಲಿರುತ್ತದೆ…..
ಆದರೆ ಇಂದಿನ ಸಾಮಾಜಿಕ ವ್ಯವಸ್ಥೆ ಬಹುತೇಕ ಬಸವ ತತ್ವಕ್ಕೆ ವಿರುದ್ಧವಾಗಿಯೇ ಮುಂದುವರಿಯುತ್ತಿದೆ. ಸಾಮಾನ್ಯರನ್ನು ಬಿಡಿ, ಬಸವ ಅನುಯಾಯಿಗಳೇ ಬಸವ ಚಿಂತನೆಯಿಂದ ಬಹು ದೂರ ಸಾಗಿ ಬಂದಿದ್ದಾರೆ. ಬಸವಣ್ಣ ಒಂದು ಭಕ್ತಿಯ ಸಂಕೇತವಾಗಿ ಮಾತ್ರ ಅಸ್ತಿತ್ವದಲ್ಲಿದ್ದಾರೆ. ಒಂದು ಜಾತಿಯಾಗಿ, ಒಂದು ಓಟಿನ ರಾಜಕಾರಣದ ಆಕರ್ಷಣೆಯಾಗಿ ಮಾತ್ರ ಮಹತ್ವದ ಪಾತ್ರ ವಹಿಸುತ್ತಿದ್ದಾರೆ…….
ಇನ್ನೊಂದು ಕಡೆ ಬಸವಣ್ಣನವರನ್ನು
ಸಾಮಾನ್ಯಗೊಳಿಸುವ, ಅಪ್ರಸ್ತುತಗೊಳಿಸುವ ಅಥವಾ ಅವರ ಚಿಂತನೆಗಳನ್ನು ಸರಳೀಕರಣಗೊಳಿಸಿ ನಿರ್ಲಕ್ಷಿಸುವ ಪ್ರಯತ್ನಗಳು ಸಹ ಒಂದಷ್ಟು ಜನರಿಂದ ನಡೆಯುತ್ತಿದೆ. ಏಕೆಂದರೆ ಅವರಿಗೆ ಸಮಸಮಾಜಕ್ಕಿಂತ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯೇ ಬೇಕಾಗಿದೆ….
ಆದ್ದರಿಂದ ಇಂತಹ ಸಂದರ್ಭದಲ್ಲಿ ಕೇವಲ ಬಸವ ಅನುಯಾಯಿಗಳು ಮಾತ್ರವಲ್ಲ, ವೀರಶೈವ ಅಥವಾ ಲಿಂಗಾಯಿತ ಸಮುದಾಯದವರು ಮಾತ್ರವಲ್ಲ, ಇಡೀ ಸಮಾಜ ಬಸವಣ್ಣನವರ ವಚನ ಸಂಸ್ಕೃತಿಯ ಆಶಯವನ್ನು ಸ್ವತಃ ಅಳವಡಿಸಿಕೊಳ್ಳುವ ಮೂಲಕ, ನಡೆನುಡಿ ಸಂಸ್ಕೃತಿಯನ್ನು, ಶ್ರಮ ಸಂಸ್ಕೃತಿಯನ್ನು ಕಿಂಚಿತ್ತಾದರೂ ಕಾರ್ಯರೂಪಕ್ಕೆ ತರುವ ಮೂಲಕ ಬಸವ ಜಯಂತಿಯ ಈ ಸಂದರ್ಭದಲ್ಲಿ ಒಂದಷ್ಟು ಮನಃಪರಿವರ್ತನೆ ಮಾಡಿಕೊಳ್ಳಬೇಕಾಗಿದೆ…..
ಅದು ಸಾಧ್ಯವಾಗದೇ ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾದರೆ, ಬಸವಣ್ಣ ಸಂಸ್ಕೃತ ನಾಯಕ ಎಂಬ ಘೋಷಣೆ ಕಾಗದದ ಮೇಲಷ್ಟೇ ಉಳಿಯುತ್ತದೆ. ನೋಡಿ ಸ್ವಲ್ಪ ಮನಸ್ಸು ಮಾಡಿ. ಬಸವ ತತ್ವವನ್ನು ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನುಷ್ಠಾನಗೊಳಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ…. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..