ನಿನ್ನೆ ಪಹೆಲ್ಗಾಮ್‌ನಲ್ಲಿ ಲಷ್ಕರ್-ಎ-ತೋಯಿಬಾದ ಉಪಶಾಖೆಯಾದ “ದಿ ರೆಸಿಸ್ಟೆನ್ಸ್ ಫ್ರಂಟ್” ನ ಭೀಕರ, ಭಯೋತ್ಪಾದಕ ದಾಳಿಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನ್ ವಾದಿ) ಮಾಸ್ ಲೈನ್ ಕೇಂದ್ರ ಹಾಗೂ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಇಬ್ಬರು ವಿದೇಶಿಗರು ಮತ್ತು ಇಬ್ಬರು ಸ್ಥಳೀಯರು ಸೇರಿದಂತೆ ಒಟ್ಟು 26 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ, ಕೆಲವರು ಗಂಭೀರ ಸ್ಥಿತಿಯಲಿದ್ದಾರೆ.
ಸಿಪಿಐ(ಎಂಎಲ್) ಮಾಸ್ ಲೈನ್ ದುಃಖತಪ್ತ ಕುಟುಂಬಗಳಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದೆ.
ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ ಶಕ್ತಿಗಳು, ಎಲ್ಲಾ ಧಾರ್ಮಿಕ ಮೂಲಭೂತವಾದಿಗಳ ಮತ್ತು ಕೋಮುವಾದಿಗಳ ಪೋಷಕರಾಗಿದ್ದಾರೆ.
ಈ ಭೀಕರ ಭಯೋತ್ಪಾದನೆಯ ದುರ್ಘಟನೆ ಕಾರ್ಪೊರೇಟ್ ಕುಳಗಳಿಗೆ ಖುಷಿ ತಂದಿರಬಹುದು.
ಯಾಕೆಂದರೆ; ಜನರಿಗೆ ಜಾತಿ, ಭಾಷೆ,ಧರ್ಮದ ನಶೆ ಏರಿಸಿ ಪರಸ್ಪರ ಬಡಿದಾಡಿ ಕೊಳ್ಳುವಂತೆ ಮತ್ತು ಸಾಮೂಹಿಕ ಹತ್ಯೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದೆ ಅವರ ಪ್ರಮುಖ ಆದ್ಯತೆಯಾಗಿದೆ.
ದೇಶವನ್ನು ಲೂಟಿ ಮಾಡುವ ನೀತಿಗಳು ಮತ್ತು ಕಾಯ್ದೆಗಳು ಜನರಿಗೆ ಅರ್ಥವಾಗದಂತೆ ಮಾಡುವುದೇ ಅವರ (ಕಾರ್ಪೊರೇಟ್ ಗಳಿಗೆ) ಮುಖ್ಯ ಅಜಂಡವಾಗಿದೆ.
ಈ ಭೀಕರ ಭಯೋತ್ಪಾದಕ ದಾಳಿಯು ಕಾಶ್ಮೀರ ಒಟ್ಟಾರೆ ಪರಿಸ್ಥಿತಿಯನ್ನು ಸಂಪೂರ್ಣ ಸ್ಥಿರಗೊಳಿಸುವ ಮೋದಿ ಸರ್ಕಾರದ ಸಮರ್ಥನೆಯ ಪೊಳ್ಳನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ.
370 ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ರಾಜ್ಯವನ್ನು ಪೂರ್ಣ ಪ್ರಮಾಣದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು, ರಾಜಕೀಯ ಸಮಸ್ಯೆಗೆ ಸೂಕ್ತ ಉತ್ತರವಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತದೆ.
ಜನರ ಆಶೋತ್ತರಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮತ್ತು ಜನರಿಗೆ ಪೂರಕವಾದ ಅರ್ಥ ಪೂರ್ಣ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಡೆಸುವುದು ಪ್ರಾಥಮಿಕ ಆದ್ಯತೆಯಾಗಬೇಕು.
ಕೋಮುವಾದಿ ಶಕ್ತಿಗಳ ವಿಶೇಷವಾಗಿ ಹಿಂದುತ್ವ ಶಕ್ತಿಗಳ ದ್ವೇಷದ ಪ್ರತಿಯೊಂದು ಪ್ರಯತ್ನವನ್ನು ವಿರೋಧಿಸಲು ನಾವು ಭಾರತದ ಜನರಿಗೆ, ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮನವಿ ಮಾಡುತ್ತೇವೆ. ಕೋಮು ಧ್ರುವೀಕರಣವನ್ನು ಮತ್ತು ಈ ಭಯೋತ್ಪಾದಕ ದಾಳಿಯನ್ನು ಕಾಶ್ಮೀರದ ಜನರು ಈಗಾಗಲೇ ಬಹಿರಂಗವಾಗಿ ಖಂಡಿಸಿದ್ದಾರೆ.ಮಾನವರನ್ನು ಬಲಿ ಪಡೆಯುವ ಮುಖ್ಯವಾಗಿ ಅಮಾಯಕ ಜನರನ್ನು ಕೊಲ್ಲುವ ಜಗತ್ತಿನ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸಿ ಹೋರಾಡಲು CPI (ML) ಮಾಸ್ ಲೈನ್ ಕರೆ ಕೊಡುತ್ತದೆ. ಪ್ರದೀಪ್ ಸಿಂಗ್ ಠಾಕೂರ್ ಪ್ರಧಾನ ಕಾರ್ಯದರ್ಶಿ ಡಿ.ಹೆಚ್.ಪೂಜಾರ ರಾಜ್ಯ ಕಾರ್ಯದರ್ಶಿ ಸಿಪಿಐ (ಎಂಎಲ್) ಮಾಸ್ ಲೈನ್ 23ನೇ ಏಪ್ರಿಲ್ 2025.