ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಗೆಲುವಿಗಾಗಿ ಸಿಪಿಐ ಬೆಂಬಲ.

Spread the love

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಗೆಲುವಿಗಾಗಿ ಸಿಪಿಐ ಬೆಂಬಲ.

ಕೊಪ್ಪಳ:  ಬಿಜೆಪಿ ಸೋಲಿಸಲು ಮುಂದಾಗಿರುವ ದೇಶದ ಜಾತ್ಯಾತೀತ, ಪ್ರಜಾಪ್ರಭುತ್ವವಾದಿ ರಾಜಕೀಯ ಪಕ್ಷಗಳ ಒಕ್ಕೂಟವಾದ I.N.D.I.A ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರ ಗೆಲುವಿಗಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವರೊಂದಿಗೆ ಸಭೆ ನಡೆಸಿದ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)

ಜಿಲ್ಲಾ ಮಂಡಳಿ ಹಾಗೂ ಸಾಮೂಹಿಕ ಸಂಘಟನೆಗಳಿಂದ ಮತ ಚಲಾಯಿಸಲು ಮುಖಂಡರು ಕರೆ ನೀಡಿದರು.

ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು.ಗಂಗಾವತಿಯಲ್ಲಿ ಎರಡು ವಾರಗಳ ಹಿಂದೆ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ರಾಜಕೀಯ ಸಮಾವೇಶ ನಡೆಸಲಾಯಿತು.ದೇಶಪ್ರೇಮಿ ಭಾರತದ ಪ್ರಜೆಗಳೇ,ನಮ್ಮ ದೇಶದ 18ನೇ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆ ಭಾರತದ ಜನತೆಯ ಭವಿಷ್ಯವನ್ನು ನಿರ್ಣಯಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ.2014ರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ‘ಅಚ್ಚೇ ದಿನ್’ದಿಂದ ‘ಅಮೃತ ಕಾಲ’ದ ವರೆಗೆ ಒಂದು ದಶಕದಲ್ಲಿನ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡಿದರೆ ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ. ಇದರ ಪರಿಣಾಮ ದೇಶದ ಶೇ. 1ರಷ್ಟು ಶ್ರೀಮಂತರ ಬಳಿ ಶೇ. 40 ರಷ್ಟು ಸಂಪತ್ತು ಶೇಖರಣೆ ಆಗಿದೆ. ಶೇ. 50 ರಷ್ಟು ಭಾರತದ ಜನಸಂಖ್ಯೆ ಕೇವಲ ಶೇ. 3 ರಷ್ಟು ಸಂಪತ್ತಿನಲ್ಲಿ ಪಾಲು ಪಡೆದಿದ್ದಾರೆ. ಇದು ಸರ್ಕಾರದ ಉಳ್ಳವರ ಪರವಾದ ನೀತಿಗೆ ಸಾಕ್ಷಿಯಾಗಿದೆ. ಈ ನೀತಿ ಬದಲಾಗಬೇಕಿದೆ ಇಲ್ಲವಾದರೆ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತ ಮುಂದೆ ಹೆಚ್ಚೆಚ್ಚು ಸಂಘರ್ಷಗಳಿಗೆ ಕಾರಣವಾಗಿ ದೇಶದ ಬಹುಸಂಖ್ಯೆಯ ಜನ ಹಸಿವಿನಿಂದ ಸಾಯಬೇಕಾಗುತ್ತದೆ. ಈಗಾಗಲೇ ಹಸಿವಿನ ಸಾವುಗಳಿಗೆ ನಮ್ಮ ದೇಶ ಸಾಕ್ಷಿಯಾಗಿದೆ. ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನ ಪಡೆದು ಕಳಪೆ ಪ್ರದರ್ಶನ ನೀಡಿದೆ. ಸಂವಿಧಾನ ಅಪಾಯದಲ್ಲಿದೆ.

ಆರ್‌ಎಸ್‌ಎಸ್ ವಿಚಾರಧಾರೆಯನ್ನು ಅನುಸರಿಸುತ್ತಿರುವ ಬಿಜೆಪಿ ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಗೊಂಡ ಭಾರತದ ಸಂವಿಧಾನವನ್ನು ಎಂದೂ ಒಪ್ಪಿಲ್ಲ. ಬದಲಾಗಿ ದಲಿತರ, ಹಿಂದುಳಿದ ಜಾತಿಗಳ, ಮಹಿಳೆಯರ ವಿರುದ್ಧವಾಗಿರುವ ಮನುಸ್ಮೃತಿಯನ್ನು ಭಾರತದ ಸಂವಿಧಾನವನ್ನಾಗಿಸಲು ಅದು ಸಂಚು ರೂಪಿಸುತ್ತಿದೆ. ಅಲ್ಲದೆ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಗಿರುವ ಬಿಜೆಪಿ, ಮನುಸ್ಮೃತಿಯ ಮೌಲ್ಯಗಳನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ದೇಶದ ಮೇಲೆ ಹೇರುವ ಪ್ರಕ್ರಿಯೆಯಲ್ಲಿ ಸದಾ ನಿರತವಾಗಿದೆ. ಮನುಸ್ಮೃತಿಯನ್ನು ಆಧರಿಸಿ ಶ್ರೇಣೀಕೃತ ಸಮಾಜವನ್ನು ಗಟ್ಟಿಗೊಳಿಸಲು ಆರ್‌ಎಸ್‌ಎಸ್. ಬಿಜೆಪಿ ಪರಿವಾರ ಈಗಾಗಲೇ ಕೆಲಸ ಆರಂಭಿಸಿದೆ. ಅದಕ್ಕಾಗಿ ಬಹುಸಂಖ್ಯೆಯ ರೈತ, ಕಾರ್ಮಿಕರನ್ನು (ಶೂದ್ರ ವರ್ಣ) ಕಾರ್ಪೊರೇಟ್ ವ್ಯಾಪಾರಿಗಳ (ವೈಶ್ಯ ವರ್ಣ) ಗುಲಾಮಗಿರಿಗೆ ತಳ್ಳುವ ಸಲುವಾಗಿ ರೈತ-ಕಾರ್ಮಿಕರ ಸ್ವಾವಲಂಬಿ ಬದುಕನ್ನು ನಾಶ ಮಾಡಲು ರೈತ-ಕಾರ್ಮಿಕ ವಿರೋಧಿ ಮಾರಕ ಕಾನೂನುಗಳನ್ನು ಅನುಷ್ಠಾನ ಮಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರವು, ‘ಒಂದು ದೇಶ, ಒಂದು ಆಡಳಿತ’ ಎಂಬ ನೀತಿಯನ್ನು ಜಾರಿ ಮಾಡುತ್ತ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ದಮನ ಮಾಡುತ್ತ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದೆ. ಹೀಗೆ ಬಿಜೆಪಿ ಮತ್ತು ಅದರ ಪರಿವಾರ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮನುಸ್ಮೃತಿಯ ಆಧಾರದಂತೆ ದೇಶವನ್ನು ಆಳುವ ಅಧಿಕಾರವನ್ನು ಕ್ಷತ್ರಿಯ ವರ್ಣದಂತೆ ನಡೆಸುತ್ತಿದೆ. ಈ ಮನುಸ್ಮೃತಿ ಆಧಾರಿತ ಸಮಾಜದಲ್ಲಿ ಬೌದ್ಧಿಕವಾಗಿ ಆರ್‌ಎಸ್‌ಎಸ್ ಬ್ರಾಹ್ಮಣ ವರ್ಣದ ಕೆಲಸ ಮಾಡತೊಡಗಿದೆ. ಹೀಗೆ ನಮ್ಮ ಮತನಿರಪೇಕ್ಷ, ಸಮಾಜವಾದಿ ಸಂವಿಧಾನ ಅಪಾಯದಲ್ಲಿದೆ.

ಮೇಲಿನ ತನ್ನೆಲ್ಲ ಕಾರ್ಯಸೂಚಿ ಜಾರಿ ಮಾಡಲು ಹಲವಾರು ಭಾವನಾತ್ಮಕ ವಿಷಯಗಳನ್ನು ಸಮಾಜದಲ್ಲಿ ಬಿತ್ತುತ್ತಿದೆ. ಅಚ್ಚೇ ದಿನ್, ಕಪ್ಪು ಹಣ ವಾಪಸಾತಿ, ಭಯೋತ್ಪಾದನೆ ನಿಗ್ರಹ, ಬೇಟಿ ಬಚಾವ್, ಅಮೃತ ಕಾಲ, ವಿಕಸಿತ ಭಾರತ, ಇತ್ಯಾದಿ ಪದಪುಂಜ ಬಳಸಿ ಜನರನ್ನು ಮರಳು ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾ ಪ್ರಧಾನಿ ‘ನ ಕಾವೂಂಗ ನ ಖಾನೇ ದೂಂಗ’ ಎಂದು ಬೊಗಳೆ ಬಿಟ್ಟು ಚುನಾವಣಾ ಬಾಂಡ್ ಎಂಬ ಹೆಸರಿನಲ್ಲಿ ದೇಶದ ಸಂಪತ್ತಿನ ಲೂಟಿಕೋರರನ್ನು, ಗುತ್ತಿಗೆದಾರರನ್ನು ಐಟಿ, ಇಡಿ, ಸಿಬಿಐ, ಮುಂತಾದವರಿಂದ ಬೆದರಿಸಿ ಅವರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿರುವ ಸತ್ಯ ಇಂದು ಬೆಳಕಿಗೆ ಬಂದಿದೆ. ಆದುದರಿಂದ ದೇಶದ ಸಂವಿಧಾನವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು. ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು, ಬಹುತ್ವ ಭಾರತವನ್ನು ಉಳಿಸಿಕೊಳ್ಳಲು. ರೈತ, ಕಾರ್ಮಿಕ ವಿದ್ಯಾರ್ಥಿ, ಯುವಜನ, ಮಹಿಳೆ. ದಲಿತ, ಆದಿವಾಸಿಗಳ ವಿರೋಧಿ ಬಿಜೆಪಿ ಸೋಲಬೇಕಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಡಾ: ಕೆ.ಎಸ್.ಜನಾರ್ದನ.ಜಿಲ್ಲಾ ಕಾರ್ಯದರ್ಶಿ ಹುಲುಗಪ್ಪ ಅಕ್ಕಿ ರೊಟ್ಟಿ. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಗಂಗಾವತಿ ತಾಲೂಕಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ. ಅಡಿವೆಪ್ಪ ಚಲವಾದಿ. ನೂರ್ ಸಾಬ್ ಹೊಸಮನಿ. ಜಾಫರ್ ಕುರಿ. ಮೌಲಾ ಹುಸೇನ್ ಹಣಗಿ. ರಾಜಾ ಹುಸೇನ್ ತಹಶೀಲ್ದಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ವಿಶೇಷ ವರದಿಗಾರರು :-ಎಸ್.ಎ.ಗಫಾರ್.

Leave a Reply

Your email address will not be published. Required fields are marked *