ಮುಂದಿನ ಶತಮಾನ ರೂಪಿಸುವ ಶಕ್ತಿ ವಿದ್ಯಾರ್ಥಿಗಳ ಮೇಲಿದೆ: ಶಾಸಕ ರವಿಸುಬ್ರಮಣ್ಯ ಆದರ್ಶ ಸಮೂಹ ಸಂಸ್ಥೆಗಳ ಸ್ವರ್ಣಮಹೋತ್ಸವದಲ್ಲಿ ಭಾಗಿ,

Spread the love

ಮುಂದಿನ ಶತಮಾನ ರೂಪಿಸುವ ಶಕ್ತಿ ವಿದ್ಯಾರ್ಥಿಗಳ ಮೇಲಿದೆ: ಶಾಸಕ ರವಿಸುಬ್ರಮಣ್ಯ ಆದರ್ಶ ಸಮೂಹ ಸಂಸ್ಥೆಗಳ ಸ್ವರ್ಣಮಹೋತ್ಸವದಲ್ಲಿ ಭಾಗಿ,

ಬೆಂಗಳೂರು ನವೆಂಬರ್‌ 26: ಮುಂದಿನ ಶತಮಾನ ಭಾರತ ದೇಶದ್ದು, ವಿಶ್ವವೇ ಇದನ್ನು ಎದುರು ನೋಡುತ್ತಿದೆ. ಇದನ್ನ ಸಾಕಾರಗೊಳಿಸುವ ಶಕ್ತಿ ನಮ್ಮ ದೇಶದ ವಿದ್ಯಾರ್ಥಿ ಸಮೂಹಕ್ಕಿದೆ. ಇರುವ ಅವಕಾಶಗಳ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ದೇಶದ ಅಭಿವೃದ್ದಿಗೆ ಕೊಡುಗೆ ನೀಡಿ ಎಂದು ಶಾಸಕ ರವಿಸುಬ್ರಮಣ್ಯ ಕರೆ ನೀಡಿದರು. ಇಂದು ನಗರದ ಆದರ್ಶ ಸಮೂಹ ಸಂಸ್ಥೆಗಳ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು. ಆದರ್ಶ ಕಾಲೇಜು ಹೆಸರಿನಂತೆ ಹಲವಾರು ಆದರ್ಶಗಳನ್ನು ಪರಿಪಾಲಿಸುತ್ತಾ ಬಂದಿರುವ ಶೈಕ್ಷಣಿಕ ಸಂಸ್ಥೆಯಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾದ ಈ ಕಾಲೇಜು 5 ದಶಕಗಳನ್ನು ಪೂರೈಸಿದ್ದು. ನಗರ, ರಾಜ್ಯ ಮತ್ತು ದೇಶದ ಅಭಿವೃದ್ದಿಗೆ ಕೊಡುಗೆಯನ್ನು ನೀಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳನ್ನು ನೀಡಿದೆ. ನಿಸ್ವಾರ್ಥವಾದ ಸೇವೆಯನ್ನು ನೀಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಇದು ಒಂದಾಗಿದೆ ಎಂದರು. ಭಾರತ ವಿಶ್ವಗುರುವಾಗುತ್ತ ದಾಪುಗಾಲನ್ನ ಇಡುತ್ತಿದೆ. ಮುಂದಿನ ಶತಮಾನವನ್ನು ಭಾರತ ದೇಶ ಮುನ್ನಡೆಸುತ್ತದೆ ಎನ್ನುವ ನಿರೀಕ್ಷೆಯನ್ನ ವಿಶ್ವವೇ ಎದುರು ನೋಡುತ್ತಿದೆ. ನಮ್ಮ ಇಂದಿನ ಯುವಶಕ್ತಿ ಮುಂದಿನ ಭಾರತವನ್ನು ನಡೆಸುವ ಶಕ್ತಿಯನ್ನು ಹೊಂದಿದೆ. ನಮ್ಮ ಸಮಾಜ ಯುವ ಶಕ್ತಿಯ ಮೇಲೆ ಅಪರಿಮಿತ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇಂದು ಸ್ಪರ್ಧಾತ್ಮಕ ಯುಗ, ನಮ್ಮ ಸ್ಪರ್ಧಿಗಳೂ ನಮ್ಮ ಪಕ್ಕದ ಸೀಟ್‌ನಲ್ಲೇ ಇದ್ದಾರೆ. ಪರಿಶ್ರಮ ಇಲ್ಲದೇ ಇದ್ದರೆ ಯಾವುದೇ ಸಾಧನೆ ಇಲ್ಲ. ನಾನು ಬೇರೆಯವರಿಗೆ ಆಧರ್ಶವಾಗಿ ಬದುಕುತ್ತೇನೆ. ಏನನ್ನಾದರೂ ಸಾಧಿಸುತ್ತೇನೆ ಎಂದು ಮನಸ್ಸು ಮಾಡಿಕೊಂಡು ಉತ್ತಮ ಯೋಜನೆ ಮತ್ತು ಯೋಚನೆ ಹೊಂದಿದ್ದರೆ ಅದನ್ನ ಸಾಧಿಸಬಹುದಾಗಿದೆ. ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌ ನಂತಹ ಯೋಜನೆಗಳಲ್ಲಿ ಬೆಂಗಳೂರು ನಗರ ಭಾರತ ದೇಶದಲ್ಲೇ ಮುಂದಿದೆ. ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಮುಂದೆ ಈಗ ಇರುವ ಅವಕಾಶಗಳು ಅಪರಿಮಿತ. ಅವುಗಳ ಸದುಪಯೋಗ ಪಡೆದುಕೊಂಡರೆ ಉತ್ತಮ ಅಭಿವೃದ್ದಿ ಹೊಂದಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪಿಯ, ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಆದರ್ಶ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾದ ಪದಮ್‌ ರಾಜ್‌ ಮೆಹ್ತಾ, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಜಿತೇಂದ್ರ ಮರಾಡಿಯಾ, ಎಸ್‌ಆರ್‌ಎನ್‌ ಆದರ್ಶ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಕುಂತಲಾ ಸ್ಯಾಮ್ಯುಲ್ಸನ್‌, ಎಸ್‌ಆರ್‌ನ್‌ ಆದರ್ಶ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್‌ ಪ್ರಶಾಂತ್‌ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮನರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಕರ್ನಾಟಕದ ವಿವಿಧ ಸಂಸ್ಕೃತಿಗಳನ್ನು ಪ್ರತಿಬಿಂಬಿಸಿದವು. ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *