ನಮ್ಮಲ್ಲಿ ಏಕಭಾಷಾ ಯಜಮಾನಿಕೆ ನಡೆಯೋದಿಲ್ಲ: ಡಾ.ನಿರಂಜನಾರಾಧ್ಯ….

Spread the love

ನಮ್ಮಲ್ಲಿ ಏಕಭಾಷಾ ಯಜಮಾನಿಕೆ ನಡೆಯೋದಿಲ್ಲ: ಡಾ.ನಿರಂಜನಾರಾಧ್ಯ….

ಬೆಂಗಳೂರು: ಸರಕಾರ ಶಿಕ್ಷಣ ಪದ್ಧತಿಯಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ಹಿಂದಿ ಹೇರಿಕೆಯ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿದೆ. ನಮ್ಮದು ಬಹುಭಾಷಾ ರಾಷ್ಟ್ರ ನಮ್ಮಲ್ಲಿ ಏಕ ಭಾಷಾ ಯಜಮಾನಿಕೆ ನಡೆಯೋದಿಲ್ಲ ಎಂದು ಶಿಕ್ಷಣ ತಜ್ಞ ವಿ.ಪಿ. ಡಾ.ನಿರಂಜನಾರಾಧ್ಯ ಟೀಕಿಸಿದರು. ರಾಜ್ಯಗಳ ಶಿಕ್ಷಣದ ಸ್ವಾಯತ್ತತೆಯ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ದಾಳಿ ವಿರೋಧಿಸಿ, ಹಿಂದೆ ಹೇರಿಕೆ ಖಂಡಿಸಿ ಹಾಗೂ  ಸಂವಿಧಾನ ಬದ್ಧ ಎಲ್ಲಾ ಭಾಷೆಗಳಲ್ಲಿ ಶಿಕ್ಷಣ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ,  ರಾಜ್ಯ ಸರ್ಕಾರದ ಕೋಮುವಾದ ಖಾಸಗೀಕರಣದ ದಾಳಿಗಳಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ ಆಗ್ರಹಿಸಿ ನಗರದ ಅಲುಮ್ನಿ ಅಸೋಸಿಯೇಷನ್ ಹಾಲ್ ನಲ್ಲಿ ಆಯೋಜಿಸಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿ ನಿರ್ಧಾರ. ಪಠ್ಯಕ್ರಮ ಚೌಕಟ್ಟಿಲ್ಲದೆ ಪಠ್ಯ ಪರಿಷ್ಕರಣೆ, ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯುವ ಹಿಜಾಬ್ ನಿಷೇಧ, ವೈಜ್ಞಾನಿಕ ಶಿಕ್ಷಣವನ್ನು ಅಣಿಕಿಸುವ ರೀತಿಯಲ್ಲಿ ಧ್ಯಾನ, ವೇದಗಣಿತ, ಸನಾತನ ಶಿಕ್ಷಣ ಪದ್ಧತಿ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಇತ್ಯಾದಿ ಗೊಂದಲಗಳನ್ನು ಸರ್ಕಾರವೇ ಸೃಷ್ಟಿಸಿದೆ. ಕೋವಿಡ್ ಸೋಂಕಿನ ನಂತರ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯುಂಟಾಗಿದೆ. ಅದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಹಲವು ಸಾಮಾಜಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಬೇಕಾದ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ವರ್ಷ ಸೈಕಲ್ ವಿತರಣೆ ಮಾಡಿಯೇ ಇಲ್ಲ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ವಿಚಾರದಲ್ಲೂ ಗೊಂದಲ ಸೃಷ್ಠಿ ಮಾಡಲಾಗಿದೆ. ಕಳೆದ ಒಂದೂವರೆ ವರ್ಷದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಪೂರ್ಣವಾಗಿ ಸೋತಿರುವುದು ಎದ್ದು ಕಾಣುತ್ತಿದೆ ಎಂದರು. ಎಸ್ಎಫ್ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಮಾತನಾಡಿ, ಸರ್ಕಾರ ಆನ್ಲೈನ್ ಶಿಕ್ಷಣದ ಹೆಸರಲ್ಲಿ ಡಿಜಿಟಲ್ ಡಿವೈಡ್ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಮಾತನಾಡಿದರು. ರಾಜ್ಯಾಧ್ಯಕ್ಷ  ಅಮರೇಶ್ ಕಡಗಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಪದಾಧಕಾರಿ ರಮೇಶ ವೀರಾಪೂರು ನಿರೂಪಿಸಿದರು. ರಾಜ್ಯ ಉಪಾಧ್ಯಕ್ಷ ಭೀಮನಗೌಡ ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕೇಂದ್ರ ಸದಸ್ಯರಾದ ಶಿವಕುಮಾರ್ ಮ್ಯಾಗಳಮನಿ, ಗಾಯತ್ರಿ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *