“ಶರಣರ ಮರಣವೇ ಮಹಾನವಮಿ” “ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ”!

Spread the love

ಶರಣರ ಮರಣವೇ ಮಹಾನವಮಿ” “ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ“!

ಸಿಂಧನೂರು ಪ್ರಗತಿಪರ ಸಂಘಟನೆಗಳ ಮುಖಂಡರ ತಂಡ ತಾಲೂಕಿನ ಸಿದ್ದಪರ್ವತ ಸೋಮಲಾಪೂರದ ಅಂಭಾಮಠಕ್ಕೆ ಇಂದು ತೆರಳಿ ಮಹಿಷಾಸೂರನ ಪ್ರತಿಮೆಗೆ ಮಾಲರ್ಪಣೆ ಮಾಡಿ,  ಗೌರವವನ್ನು ಸಲ್ಲಿಸಲಾಯಿತು. ಬಿಎಸ್ ಪಿಯ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪೂರ ಪ್ರಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಯೋಜಕರಾದ, ಎಂ.ಗಂಗಾಧರ ಮಾತನಾಡಿ, ಮಹಿಷ ಎಮ್ಮೆಗಳ ರಾಜ. ಮೈಸೂರು ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿದ್ದದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡಲು ಬಯಲು ಹುಡುಕುತ್ತಿದ್ದರು. ಅದು ಸಾಲದಾದಾಗ ಅರಣ್ಯವನ್ನು ಕಡಿದು, ಬೆಂಕಿ ಹಾಕಿ ನಾಶ ಮಾಡಿ ಬಯಲಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಿದ ಮಹಿಷ ತನ್ನ ನಾಡನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ತಮ್ಮ ತಂತ್ರಗಾರಿಕೆಗೆ ವಿರೋಧ ತೋರಿದ ಮಹಿಷನನ್ನು ಆರ್ಯರು ರಾಕ್ಷಸನಂತೆ ಚಿತ್ರಿಸಿದರು. ಅತಿ ಸಾಮಾನ್ಯ ನಾಯಕಿಯಾಗಿದ್ದ ಚಾಮುಂಡಿಯನ್ನು ಮಹಿಷನ ವಿರುದ್ಧ ಆರ್ಯರು ಎತ್ತಿಕಟ್ಟಿದರು. ಅವಳಿಗೆ ಬೆಂಬಲಿಸಿ ಮಹಿಷನನ್ನು ಕುತಂತ್ರದಿಂದ ಕೊಂದರು. ಆ ನಂತರವೇ ಚಾಮುಂಡಿಯನ್ನು ದೇವತೆಯೆಂದೂ ಈ ಬೆಟ್ಟವನ್ನು ಚಾಮುಂಡಿ ಬೆಟ್ಟವೆಂದೂ ಹೆಸರಿಟ್ಟರು. ಅಲ್ಲಿಯವರೆಗೂ ಮಹಾಬಲಗಿರಿಯಾಗಿದ್ದ ಬೆಟ್ಟವು ಚಾಮುಂಡಿಬೆಟ್ಟವಾಯಿತು. ದೊರೆಯಾಗಿದ್ದ ಮಹಿಷನು ಮಹಿಷಾಸುರನಾದನು. ನಾಡನ್ನಾಳಿದ ಮಹಿಷ ಇಲ್ಲಿ ಬಿಸಿಲಿನಲ್ಲಿ ನಿಲ್ಲುವ ಅಗತ್ಯವಿರಲಿಲ್ಲ. ಆರ್ಯರ ತಂತ್ರ, ಜಾತಿ ಪದ್ಧತಿ, ಶೋಷಣೆಗಳಿಗೆ ಯಾರು ವಿರೋಧಿಸಿದರೊ ಅವರೆಲ್ಲ ಊರ ಆಚೆಗೆ ತಳ್ಳಲ್ಪಟ್ಟರು. ಹಾಗಾಗಿಯೇ ಹೊಲೆ–ಮಾದಿಗರು ಊರಿನ ಆಚೆಯೂ ಶೋಷಣೆಯನ್ನು ಒಪ್ಪಿಕೊಂಡ ಮೇಲ್ಜಾತಿಯವರು ಊರಿನ ಒಳಗೂ ವಾಸ ಮಾಡಿದಂತ ಇತಿಹಾಸವೇ ಮಹಿಷಾಸೂರನ ಇತಿಹಾಸವಾಗಿದೆ. ಶರಣ ಬಸವಣ್ಣ ಜಾತಿವಿನಾಶ ಚಳವಳಿ ರೂಪಿಸಿದ ಮಹಾ ಬಂಡಾಯಗಾರ. ಸಮಗಾರ ಹರಳಯ್ಯ ಮತ್ತು ಬಸವಣ್ಣನವರ ಬಾಂಧವ್ಯ ಅತ್ಯಂತ ನಿಕಟವಾಗಿತ್ತು. ಇವರಿಬ್ಬರ ಬಾಂಧವ್ಯ ಎಷ್ಟೊಂದು ನಿಕಟವಾಗಿತ್ತೆಂದರೆ ಬಸವಣ್ಣನು ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹ ನಡೆಸುವ, ಆ ಮೂಲಕ ಜಾತಿ ವಿನಾಶ ಮಾಡುವ ಕ್ರಾಂತಿಕಾರಿ ಹಂತ ತಲುಪಿತ್ತು. ಮಾದಿಗ ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ನಡೆದುಹೋಯಿತು.  ಬಸವಣ್ಣನ ಕ್ರಾಂತಿಕಾರಿ ನಡಿಗೆಯನ್ನು ನೋಡಿದ ಸಂಪ್ರದಾಯವಾದಿ ಪುರೋಹಿತಶಾಹಿಗಳು ಸಹಿಸದಾದರು. ಜಾತಿ ಜಾತಿಗಳ ನಡುವೆ ಮೇಲು-ಕೀಳಿನ ಜಾತಿ ವಿಧ್ವೇಷದ ಕಿಚ್ಚು ಹಚ್ಚಿದರು. ‘ಸಮಾಜಬಾಹಿರವೂ, ನೀತಿಬಾಹಿರವೂ, ಧರ್ಮಬಾಹಿರವೂ ಆದ ಕೆಲಸಗಳಲ್ಲಿ ತೊಡಗಿರುವ ಶರಣರನ್ನು ಕೊಚ್ಚಿಕೊಲ್ಲದ ಹೊರತು ಸನಾತನ ಧಾರ್ಮಿಕ ವ್ಯವಸ್ಥೆಗೆ ಉಳಿಗಾಲವಿಲ್ಲ’ ಎಂದು ರೊಚ್ಚಿಗೆದ್ದ ಪಟ್ಟಭದ್ರ ಜನ ಸಾವಿರಾರು ಶರಣರ ತಲೆಗಳನ್ನು ಕಡಿದು ಚೆಂಡಾಡಿದರು. ಸಾವಿರಾರು ಶರಣರನ್ನು ಆನೆಗಳ ಕಾಲುಗಳಿಗೆ ಸರಪಳಿ ಬಿಗಿದು ಎಳೆಯಿಸಿ ಕೊಲ್ಲುವ ‘ಎಳೆಹೂಟೆ’ಶಿಕ್ಷೆ ನೀಡಿ ಕೊಂದುಹಾಕಿದರು. ಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು ಬಿಡದೆ ಹುಡುಕಿಸಿ ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು.  ಈ ಘಟನೆ ನಡೆದದ್ದು ಮಹಾನವಮಿಯ ದಿವಸ. ಇಂತಹ ಕರಾಳ ನವಮಿಯ ದಿನ ಶರಣರು, ತಮಗೊದಗಿದ ಮರಣಕ್ಕೆ ಅಂಜದೆ  ‘ಮರಣವೇ ಮಹಾನವಮಿ’ ಎಂದು ದೇಹತ್ಯಾಗ ಮಾಡಿದರು. ಲಭ್ಯವಿರುವ ಉಲ್ಲೇಖಿತ ದಾಖಲೆಗಳ ಪ್ರಕಾರ ಲಕ್ಷದ ಮೇಲೆ ತೊಂಭತ್ತಾರು ಸಾವಿರ ವಚನಕಾರರು ಹನ್ನೆರಡನೇ ಶತಮಾನದಲ್ಲಿದ್ದರು. ಸಾವಿರ ಸಾವಿರ ಸಂಖ್ಯೆಯ ಶರಣರ ದೇಹಗಳು ಛಿದ್ರಛಿದ್ರವಾಗುತ್ತಿರುವ, ವಚನ ಕಟ್ಟುಗಳು ಉರಿದು ಬೂದಿಯಾಗಿಹೋಗುವ ಇಂತಹ ಸಾಮಾಜಿಕ ಸಂಕ್ಷೋಭಿತ ಪರಿಸ್ಥಿತಿಗೆ ಸಿಲುಕಿದ ಅನೇಕ ವಚನಕಾರರು, ಕೆಲವಾದರೂ ಅಮೂಲ್ಯ ವಚನಕಟ್ಟುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜೀವರಕ್ಷಿಸಿಕೊಳ್ಳಲು, ಆ ಮೂಲಕ ವಚನ ಚಳವಳಿಯ ಆಶಯಗಳನ್ನು ಜೀವಂತವಾಗಿರಿಸಲು ಕಲ್ಯಾಣ ತೊರೆದು ದಿಕ್ಕಾಪಾಲಾಗಿ ಓಡಿಹೋದರು. ಇದೆಲ್ಲವೂ ನಡೆದದ್ದು ಮಹಾನವಮಿಯ ದಿವಸ. ಇಂತಹ ಮಹಾನವಮಿ ದಿವಸವನ್ನು ನಾವು ನಾಡಹಬ್ಬವನ್ನಾಗಿ ಆಚರಿಸಲು ಸಾಧ್ಯವೇ?!  ಜಾತಿವಿನಾಶ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಹುದೊಡ್ಡ ಆಶಯ ಮತ್ತು ಗುರಿ. ಇದು ಮೂಲದಲ್ಲಿ ಬುದ್ಧಗುರು ಮತ್ತು ಬಸವಣ್ಣನವರ ಆಶಯ ಮತ್ತು ಗುರಿಯೂ ಆಗಿತ್ತು ಎಂಬುದನ್ನು ನಾವು ಮರೆಯದಿರೋಣ. ಸಾವಿರಾರು ಜನರ ಹತ್ಯೆಗೆ ಕಾರಣವಾದ ‘ಕಲ್ಯಾಣ ಕ್ರಾಂತಿ’ ಎಂಬುದು ಎರಡು ರಾಜ್ಯಗಳ ನಡುವೆ ರಾಜ್ಯ ವಿಸ್ತರಣೆ ಮತ್ತು ಅಧಿಕಾರಕ್ಕಾಗಿ ನಡೆದ ಯುದ್ಧವಲ್ಲ. ರಾಜ್ಯಕ್ಕಾಗಿ ಅಥವಾ ಆಸ್ತಿಪಾಸ್ತಿಗಳ ಪಾಲುಪಾರಿಕತ್ತಿಗಾಗಿ ಅಣ್ಣತಮ್ಮಂದಿರ ನಡುವೆ ನಡೆದ ಸೋದರ ವ್ಯಾಜ್ಯವೂ ಅಥವಾ ದಾಯಾದಿ ಕಲಹವೂ ಅಲ್ಲ. ಇದು ಮಹಾಭಾರತ ಕಥೆಯಲ್ಲ. ಕೋಮುದೊಂಬಿಯೂ (Communal riot) ಅಲ್ಲ. ಮತೀಯ ಧ್ವೇಷದ ಸ್ಫೋಟವೂ ಅಲ್ಲ. ಒಬ್ಬನ ಹೆಂಡತಿಯನ್ನು ಮತ್ತೊಬ್ಬನು ಹೊತ್ತೊಯ್ದುದಕ್ಕೆ ನಡೆದ ಯುದ್ಧವೂ ಇದಲ್ಲ. ಇದು ರಾಮಾಯಣ ಕಥೆಯಲ್ಲ. ಬದಲಾಗಿ ‘ಕಲ್ಯಾಣ ಕ್ರಾಂತಿ, ಎಂಬುದು ವರ್ಣಸಂಕರ ಆಗದಂತೆ, ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು, ಜಾತಿ ಪದ್ಧತಿಯನ್ನು ಪೋಷಿಸಲು ವೈದಿಕಶಾಹಿ ಬ್ರಾಹ್ಮಣರು ನಡೆಸಿದ ಸಂಚಿನ ಪ್ರತಿಫಲ. ಬ್ರಾಹ್ಮಣರ ಆಜ್ಞಾನುಪಾಲಕನಾದ ಅಲ್ಲಿನ ಒಬ್ಬ ರಾಜ ತನ್ನದೇ ಪ್ರಜೆಗಳ ವಿರುದ್ಧ ತನ್ನ ಸೇನೆಯನ್ನೇ ಬಿಟ್ಟು ತನ್ನ ಪ್ರಜೆಗಳನ್ನೇ ಕೊಲ್ಲಿಸಿದ ವಾಸ್ತವ ಗತ ಚರಿತ್ರೆಯಾಗಿದೆ. ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಕಾರ್ಯಾಧ್ಯಕ್ಷ ನರಸಪ್ಪ ಕಟ್ಟಿಮನಿ, ಸಿಂಧನೂರು ಗೆಳೆಯರ ಬಳಗದ ವಿಜಯಕುಮಾರ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ  ಗ್ರಾಮ ಘಟಕ AIAWU ಅಧ್ಯಕ್ಷರಾದ ವೀರೇಶ ,ರಂಗಣ್ಣ ಸೋಮಲಾಪುರ, ಬಿಎಸ್ಪಿಯ ಫಕೀರಪ್ಪ ಸಾಲಗುಂದಾ, ಚಂದ್ರು ಮಡಿವಾಳ ಮಲ್ಕಾಪೂರ, ತೆಲಂಗಾಣದ ಶರಣ ಸಾಧು, ಬಸವರಾಜ ಗೋಮರ್ಸಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಎಂ.ಗಂಗಾಧರ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ-RCF ಸಿಂಧನೂರು. ಹಾಗೂ  ಹುಲುಗಪ್ಪ ಮಲ್ಕಾಪೂರ ಬಹುಜನ ಸಮಾಜ ಪಕ್ಷ-BSP ಸಿಂಧನೂರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *