Spread the love
ಭಾರತ  ಸ್ವಾತಂತ್ರ್ಯ ವನ್ನು ಪಡೆದು ಎಪ್ಪತೈದು ವರ್ಷಗಳನ್ನು ಪೂರೈಸಿದೆ . ಸರ್ವರಿಗೂ ಸಮಾನವಾದ ಸಂವಿಧಾನವನ್ನು  1950 ರಲ್ಲಿ ಅಂಗೀಕರಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೂ ತಲುಪಿದೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ, ಹೊಟೆಲ್ನಲ್ಲಿ ಸಮ ಪಂಕ್ತಿ ಭೋಜನವಿಲ್ಲದ ಒಂದು ಸಮುದಾಯ ಅಸ್ಪೃರಾಗಿಯೇ ಉಳಿದುಬಿಟ್ಟಿದ್ದಾರೆ.

ಅಸ್ಪೃಶ್ಯತೆ ಏನಂದರೆ : ಸಮಾಜದಿಂದ ನಿರಾಕರಿಸಿದ ಎಂದು ಪರಿಗಣಿಸಿಸಲ್ಪಟ್ಟ ಒಂದು ಗುಂಪನ್ನು ಬಹಿಷ್ಕರಿಸುವ ರೂಢಿಯಾಗಿದೆ.  ಜಾತಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದೆವೆ ಎಂದು ಘೋಷಿಸಿಕೊಂಡ ಮೇಲ್ವರ್ಗ ಕೆಳವರ್ಗವನ್ನು ಕೀಳಾಗಿ ನಡೆಸಿಕೊಂಡು ಸಮಾನತೆಯನ್ನು ಕಿತ್ತುಕೊಂಡಿರುವುದು. ವಿಜಯನಗರ  ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ರುದ್ರತಾಂಡವ ವಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಕೆಲವು ಹಳ್ಳಿಗಳ ಹೋಟೆಲ್ಗಳಿಗೆ ದಲಿತರು ಮತ್ತು ಕೆಳವರ್ಗದವರಿಗೆ ಉಪಹಾರ ತಿಂಡಿ ಸೇವಿಸಲು ಮತ್ತು ಟೀ ಕುಡಿಯಲು ಅವರಿಗೆ  ತಟ್ಟೆ ಮತ್ತು ಲೋಟಗಳನ್ನು ಬೇರೆಯದೇ ಇಟ್ಟಿರುತ್ತಾರೆ. ಅ ತಟ್ಟೆ ಲೋಟಗಳು ಮತ್ತು ಜಗ್ಗುಗಳು ಪಾಚಿ ಗಟ್ಟಿರುತ್ತವೆ. ಏಕೆಂದರೆ ಮೇಲ್ವರ್ಗದವರು ಆ ತಟ್ಟೆ ಲೋಟಗಳನ್ನು  ಮುಟ್ಟಬಾರದೆಂದು ಹೋಟೆಲ್ನ ಯಾವುದೋ ಒಂದು ಮೂಲೆಯಲ್ಲಿ ಇಟ್ಟಿರುತ್ತಾರೆ. ದಲಿತರು ತಿಂಡಿ ಮತ್ತು ಟೀ ಕುಡಿಯಲು ಬಂದರೆ ಲೋಟ ಮತ್ತು ತಟ್ಟೆಯನ್ನು ದಲಿತರೇ ತೊಳೆದುಕೊಂಡು ತಿನ್ನಬೇಕು ಮತ್ತು ಕುಡಿಯಬೇಕು. ಮೇಲ್ಜಾತಿಯವರು ಮಾತ್ರ ಮನುಷ್ಯರು, ದಲಿತರು ಮನುಷ್ಯರೇ  ಅಲ್ಲ ಎಂಬಂತ ಅಮಾನವೀಯ ಧೋರಣೆ ಅವರದ್ದು. ಹೋಟೆಲ್ನಲ್ಲಿ ದಲಿತರಿಗಾಗಿಯೇ ಬೇರೆ ಜಾಗವನ್ನು ಮೀಸಲಿಡುತ್ತಾರೆ ಮತ್ತು ಮೇಲ್ವರ್ಗದವರು ಕೂರುವ ಜಾಗದಲ್ಲಿ ದಲಿತರು ಕೂಡುವಂತಿಲ್ಲ. ಒಂದು ವೇಳೆ ಮೇಲ್ವರ್ಗದವರು ಕೂಡುವ ಜಾಗದಲ್ಲಿ ದಲಿತರು ಕುಳಿತು ಬಿಟ್ಟರೆ ದಲಿತರ ಮೇಲೆ ಹಲ್ಲೆ ಮಾಡುತ್ತಾರೆ . ಹೋಟೆಲ್ ನಲ್ಲಿ ತಟ್ಟೆ ಅಥವಾ ಲೋಟ ಇಲ್ಲದೆ ಹೋದರೆ ಪೇಪರ್ ನಲ್ಲಿ ತಿಂಡಿ ತಿನ್ನಬೇಕು ಮತ್ತು ನೀರನ್ನು  ಬೊಗಸೆಯಲ್ಲಿ ಕುಡಿಯಬೇಕು. ಇನ್ನು ಇಷ್ಟಕ್ಕೆ ಮುಗಿಯಲಿಲ್ಲ ದಲಿತರು ದಾರಿಯಲ್ಲಿ ನಡೆದುಕೊಂಡು ಬಂದರೆ  ಮೇಲ್ವರ್ಗದವರು ದೂರ ಸರಿದು ಹೋಗುತ್ತಾರೆ .  ಮೇಲ್ವರ್ಗದ ಜನರು ದಲಿತರು ಒಂದೇ ತರಗತಿಯಲ್ಲಿ ಓದಿದ ಸಹಪಾಠಿಗಳೇ ಆಗಿದ್ದರು ಅವರನ್ನು ಏಕವಚನದಲ್ಲಿ ಮಾತನಾಡಿಸುವಂತಿಲ್ಲ. ಏಕವಚನದಲ್ಲಿ ಮಾತನಾಡಿಸಿದರೆ ಅವರ ಮೇಲೆ ಹಲ್ಲೆ ಮಾಡುತ್ತಾರೆ ಮತ್ತು ದಲಿತರಿಗೆ ದೇವಸ್ಥಾನಗಳ ಒಳಗಡೆ ಪ್ರವೇಶವಿಲ್ಲ. ದಲಿತರು ದೇವರಿಗೆ ಪೂಜೆ ಸಲ್ಲಿಸಬೇಕಾಗಿದ್ದರೆ ಹೊರಗಡೆ ನಿಂತುಕೊಂಡು ಪೂಜೆ ಮಾಡುವ ಪೂಜಾರಿಯನ್ನು ಕರೆದು ಪೂಜೆ ಮಾಡಿಸಿ ಕೊಳ್ಳಬೇಕು. ದೇವರಿಗೆ ದೇವಸ್ಥಾನದ ಹೊರಗೆ ನಿಂತೇ‌ ಕೈ ಮುಗಿಯಬೇಕು.  ಹಳ್ಳಿಗಳಲ್ಲಿ  ಚೌರ ಮಾಡುವವರು, ದಲಿತರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡುವುದಿಲ್ಲ. ಏಕೆ ನೀವು ದಲಿತರಿಗೆ ಕಟಿಂಗ್ ಶೇವಿಂಗ್ ಮಾಡುವುದಿಲ್ಲ ? ಎಂದು ಕೇಳಿದರೆ ನೀವು ಕೆಳವರ್ಗದವರು ಆದ್ದರಿಂದ ನಿಮಗೆ ಕಟಿಂಗ್ ಶೇವಿಂಗ್ ಮಾಡುವುದಿಲ್ಲ ಬೇಕಾದರೆ ನಮ್ಮ ಕೆಲಸವನ್ನು ನಿಲ್ಲಿಸುತ್ತೇವೆ ಆದರೆ ನಿಮಗೆ ಶೇವಿಂಗ್ ಮಾಡುವುದಿಲ್ಲ .ನಿಮಗೆ ಕಟಿಂಗ್ ಶೇವಿಂಗ್ ಮಾಡಿದರೆ ಮೇಲ್ವರ್ಗದವರು ಯಾರು ನಮ್ಮ ಹತ್ತಿರ ಕಟಿಂಗ್ ಶೇವಿಂಗ್ ಮಾಡಿಸಲು ಬರುವುದಿಲ್ಲ ಇದು ಹೇಳುತ್ತಾರೆ . ಇದಕ್ಕೂ ಮೀರಿ  ಕೇಳಿದರೆ ದಲಿತರ ಮೇಲೆ ಹಲ್ಲೆ ನಡೆಯುತ್ತದೆ.  ದಲಿತರು ಕಟಿಂಗ್ ಶೇವಿಂಗ್ ಮಾಡಿಸಲು ಸುಮಾರು 20 ರಿಂದ 30 ಕಿಲೋ  ಮೀಟರ್ ದೂರದ  ಪಟ್ಟಣಕ್ಕೆ ಹೋಗಬೇಕು. ದಲಿತರು ಸ್ಥಿತಿ ತಂದೆ- ಮಕ್ಕಳು ತಮ್ಮ ಹಳ್ಳಿಗಳಲ್ಲಿ ತಾವೇ ಕಟಿಂಗ್ ಶೇವಿಂಗ್ ಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ಮೂಡಿದೆ.  ಪ್ರಾಣಿಗಳಿಗಿಂತ ಕಡೆಯಾದ ದಲಿತರು: ಮೇಲ್ವರ್ಗದವರು ಸಾಕಿದ ಪ್ರಾಣಿಗಳು ಅಂದರೆ ನಾಯಿ-ಬೆಕ್ಕು ಅವರ ಮನೆ ಒಳಗಡೆ ಪ್ರವೇಶವಿರುತ್ತದೆ ಆದರೆ ದಲಿತರಿಗೆ ಮಾತ್ರ ಪ್ರವೇಶವಿರುವುದಿಲ್ಲ ಏಕೆ ದಲಿತರು ಮನುಷ್ಯರು ಆಲ್ವಾ? ನಾಯಿಗಿಂತಲೂ ಕೀಳಾದರೇ ದಲಿತರು.  ಮೇಲ್ವರ್ಗದ  ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮಾತ್ರ ಓಟ್ ಕೇಳಲು ದಲಿತರ ಮನೆಗೆ ಹೋಗುತ್ತಾರೆ. ಅವರು ಕೆಳವರ್ಗದವರು ನಾವು ಮೇಲ್ವರ್ಗದವರು ಎಂದು ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ , ಬೇರೆ ಜಾಗ ಬೇರೆ ಲೋಟ ಕೊಡುವಾಗ, ಬೊಗಸೆಯಲ್ಲಿ ನೀರು ಕುಡಿಸುವಾಗ,‌ ಕಟಿಂಗ್ ಶೇವಿಂಗ್ ಮಾಡುವಾಗ ಇದ್ದ ಜಾತಿಯತೆ ಓಟ್ ವೋಟ್ ಕೇಳುವಾಗ ಮಾತ್ರ ಎಲ್ಲಿ ಹೋಗಿರುತ್ತದೆ. ಜಾತಿ ಪದ್ಧತಿ ಅಸ್ಪೃಶ್ಯತೆ ಜೀವಂತವಾಗಿರುವ ತನಕ ದೇಶದ ಬೆಳವಣಿಗೆ ಅಸಾಧ್ಯ . ನಮ್ಮಲ್ಲೇ ಹರಿಯುವ ರಕ್ತ ನಾವು ಕುಡಿಯುವ ನೀರು ಉಸಿರಾಡುವ ಗಾಳಿ ಜೀವಿಸುವ ನೆಲ ಎಲ್ಲವೂ ಒಂದೇ ಆಗಿದ್ದಾಗ ಮನುಷ್ಯರನ್ನು ಮಾತ್ರ ಜಾತಿ ಹೆಸರಿನಲ್ಲಿ ಪ್ರತ್ಯೇಕಿಸುವುದು ಎಷ್ಟರ ಮಟ್ಟಿಗೆ  ಸರಿ ?  ಇಂದು ದೇಶದ ಬೆಳವಣಿಗೆಯಲ್ಲಿ ಶ್ರಮಿಸುವ ಕಾರ್ಮಿಕ ವರ್ಗದವರು ದಲಿತರು ಅಸ್ಪೃಶ್ಯತೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವುದು ಗೊತ್ತಾಗಿದೆ. ಭಾರತ ಸಂವಿಧಾನದ ಆಶಯದಂತೆ ಹಾಗೂ ಕಾನೂನುಗಳನ್ನು ಪಾಲಿಸುವುದರಲ್ಲಿ ಜಿಲ್ಲಾಡಳಿತಗಳು ಸಂಪೂರ್ಣ ವಿಫಲವಾಗಿದೆ ಎಂದು ದಲಿತ ಪರ ಸಂಘಟನೆಗಳ ಮುಖ್ಯಸ್ಥರು ಆರೋಪಿಸಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಕೇವಲ ವೇದಿಕೆಗಳಲ್ಲಿ ಮಾತ್ರ ಮಾತನಾಡುತ್ತಾರೆ. ಎರಡು ಜಿಲ್ಲೆಗಳ ಸಮೀಕ್ಷೆ ಮತ್ತು ಮಾಹಿತಿ ಸಂಗ್ರಹಣೆ ಆಧಾರದ ಮೇಲೆ ಸಾಮಾಜಿಕ ಪಿಡುಗು  ಅಸ್ಪೃಶ್ಯತೆ ನಿರ್ಮೂಲನೆ ಮಾಡದೆ ಹೋದರೆ ಜಿಲ್ಲಾಡಳಿತವನ್ನು ಹೊಣೆಗಾರರನ್ನಾಗಿ ದಲಿತ ಪರ ಸಂಘಟನೆಗಳ ಮುಖ್ಯಸ್ಥರು ಎಂದು ಎಚ್ಚರಿಸಿದರು. ಕಾನೂನು ಕೇವಲ ಪುಸ್ತಕದಲ್ಲಿದ್ದರೆ ಏನೂ ಪ್ರಯೋಜನವಿಲ್ಲ. ಅದು ಆಚರಣೆಗೆ ಬರಬೇಕು. ದಲಿತರಿಗೂ ಅವರ ಹಿತರಕ್ಷಣೆಗಿರುವ ಕಾನೂನಿನ ಅರಿವು ಬರಬೇಕು. ಅವರ ಮೇಲಾಗುವ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡುವ  ನೈತಿಕ ಬಲ ಅವರೊಳಗೆ ಬರಬೇಕು. ಅದಕ್ಕಾಗಿ  ಸರ್ಕಾರ ಅವರ ಬೆಂಬಲಕ್ಕೆ ನಿಲ್ಲಬೇಕು.

ವರದಿ – ಅಣ್ಣಪ್ಪ  ಕೆ

Leave a Reply

Your email address will not be published. Required fields are marked *