ಲೇಖನ – 20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ.

Spread the love

ಲೇಖನ – 20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ.

ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಗಣ ಪರ್ವಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ  ಸಂಪೂರ್ಣವಾಗಿ ಗಣ ಪರ್ವ ನಿಂತಿದ್ದವು. ಮತ್ತೆ 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ಮೂಲಕ ಗಣ ಪರ್ವಗಳು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ  ಲಿಂ. ಮಾತಾಜಿಯ ನೇತೃತ್ವದಲ್ಲಿ ಪ್ರಾರಂಭವಾಗಿವೆ. ದೇಶ ಎಂದೂ ಮರೆಯದ ಐತಿಹಾಸಿಕ ಕೆಲಸ ಮಾತಾಜಿಯವರು ಮಾಡಿದ್ದಾರೆ. ಮಾತಾಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಚಟುವಟಿಕೆಗಳು ಸಧ್ಯ ನಿತ್ಯ ನಿರಂತರವಾಗಿ ನಡೆಯುತ್ತಿವೆ.  ಇದರ ಒಂದು ಭಾಗವೇ ಕಲ್ಯಾಣ ಪರ್ವ ಕಾರ್ಯಕ್ರಮ ಶರಣ ಬಂಧುಗಳೆ. ಮನುಕುಲದ ಉದ್ಧಾರಕ,ಸತ್ಯ ತತ್ವದ ಪ್ರತಿಪಾದಕ,ಶರಣ ಗಣಮೇಳದ ರೂವಾರಿ ಅಣ್ಣ ಬಸವಣ್ಣನವರು ಹಾಗೂ ಶರಣರು ಮೆಟ್ಟಿದ ಧರೆ ಪಾವನ ಭೂಮಿ ಬಸವಕಲ್ಯಾಣದ ಭವ್ಯವಾದ ಬಸವೇಶ್ವರ ಪ್ರತಿಮೆಯ  ಬಸವ ಮಹಾಮನೆಯ ಆವರಣದಲ್ಲಿ 20ನೇ ಕಲ್ಯಾಣ ಪರ್ವ ಕಾರ್ಯಕ್ರಮ ಕ್ಷಣಗಣನೆ ಆರಂಭವಾಗಲಿದೆ. 18,19,20ರ ಈ ಮೂರು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧ, ಅರ್ಥಪೂರ್ಣ, ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನ ನೆಲೆಯಲ್ಲಿ ಕಾರ್ಯಕ್ರಮವು ಜರುಗಲಿದೆ. ಕಲ್ಯಾಣ ಪರ್ವಕ್ಕೆ ಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ಮೊದಲಾದ ಭಾಗಗಳಿಂದ ಸಾವಿರಾರು ಶರಣ ಬಂಧುಗಳು ಭಾವಹಿಸಲಿದ್ದಾರೆ.ಮೂರು ದಿವಸಗಳ ಕಾಲ ಯೋಗ , ಇಷ್ಟಲಿಂಗ ಪೂಜೆ, ಪ್ರಾರ್ಥನೆ,ಶರಣ ಸ್ಮರಣೆ, ಧರ್ಮಚಿಂತನೆ,ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ ,ಪೀಠಾರೋಹಣ,ಪಥ ಸಂಚಲನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. 108 ಅಡಿ ಎತ್ತರದ ಪ್ರತಿಮೆ :  ವಿಶ್ವಗುರು ಬಸವಣ್ಣನವರ 108 ಅಡಿ ಎತ್ತರದ ಪ್ರತಿಮೆಯನ್ನು 2001ರಲ್ಲಿ ನಿರ್ಮಿಸಿದ ಕೀರ್ತಿ ಮಾತಾಜಿಯವರಿಗೆ ಸಲ್ಲುತ್ತದೆ.  ಕುಳಿತ ಭಂಗಿಯಲ್ಲಿರುವ ಬಸವಣ್ಣನವರ ಹಸನ್ಮುಖಿಯ ಈ ಪ್ರತಿಮೆ ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದು, ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಜಗತ್ತಿನ ಜನ, ಮತ್ತೆ ಕಲ್ಯಾಣಕ್ಕೆ ಬಂದು ನೋಡುವಂತಾಗಿದೆ. ಧನ್ಯನಾಗಬೇಕು : ಕಲ್ಯಾಣದಲ್ಲಿ ಜರುಗುತ್ತಿರುವ ಕಲ್ಯಾಣ ಪರ್ವ ಕಾರ್ಯಕ್ರಮದ ಮೂಲಕ ಬಸವಾದಿ ಶರಣರ ಸಂದೇಶವನ್ನು ನಾಡಿನ ಉದ್ಧಕ್ಕೂ ಪಸರಿಸುವ ಕಾರ್ಯ ರಾಷ್ಟ್ರೀಯ ಬಸವದಳ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಜನಸಾಮಾನ್ಯರಿಗೆ ಬಸವ ತತ್ವದ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅನನ್ಯ. ಮಹಾ ಮಾನವತಾವಾದಿ  ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ  ಸಮಸ್ತ ಬಸವಭಕ್ತರು, ಬಸವ ತತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಕಲ್ಯಾಣ ಪರ್ವಕ್ಕೆ ಬಂದು ಧನ್ಯರಾಗಬೇಕಾಗಿದೆ. ಕಾರ್ಯಕ್ರಮದ ವಿವರ ಮಾಹಿತಿ:  ಉದ್ಘಾಟನಾ ಸಮಾರಂಭ, ಇಷ್ಟಲಿಂಗಾರ್ಚನೆ, ಸಮುದಾಯ ಪ್ರಾರ್ಥನೆ, ಶರಣರ ಸ್ಮರಣೆ, ಸಮುದಾಯ ಪ್ರಾರ್ಥನೆ, ವೈಚಾರಿಕ ಚಿಂತನ ಗೋಷ್ಠಿ ನಡೆಯಲಿವೆ. ಜ್ಞಾನ ದಾಸೋಹದೊಡನೆ ಅನ್ನದಾಸೋಹವನ್ನು ಸಹ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.  ಅಲ್ಲಮಪ್ರಭು ಪೀಠಾರೋಹಣ ಕಾರ್ಯಕ್ರಮ, ಮತ್ತು ಸಮಾರೋಪ ಸಮಾರಂಭ ಜರುಗಲಿದೆ. ಸರ್ವರಿಗೂ ಆದರದ ಸ್ವಾಗತ: 12ನೇ ಶತಮಾನವು ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ಪವಿತ್ರ ಭೂಮಿಯಲ್ಲಿ ಕಲ್ಯಾಣ ಪರ್ವ ಜರುಗುತ್ತಿದೆ. ಜೀವನಕ್ಕೆ ಬೇಕಾಗುವ ಮೌಲ್ಯಾಧಾರಿತ ಸಿದ್ಧಾಂತಗಳು ವಚನಗಳಲ್ಲಿ ಅಡಗಿವೆ. ಇಂತಹ ವಚನಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು ಜನರಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ. ವಚನ ಸಾಹಿತ್ಯವು ಲಿಂಗಾಯತ ಧರ್ಮದ ಪವಿತ್ರ ಗ್ರಂಥವಾಗಿದೆ. ಕೂಡಲಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಮಾನವೀಯ ಸಮಾನತೆ ಸಾರಿದ ಪುಣ್ಯಕ್ಷೇತ್ರಗಳಾಗಿವೆ‌. ಲಿಂಗಾಯತರು ಒಮ್ಮೆಯಾದರೂ ಈ ಸ್ಥಳಗಳಿಗೆ ಭೇಟಿ ನೀಡಬೇಕು, ಭೇಟಿ ನೀಡಿದಾಗಲೇ ನಮ್ಮ ಜೀವನ ಪಾವನವಾಗುತ್ತದೆ. ಕಾರಣ ನಮ್ಮ ದೇಹದಲ್ಲಿ ಜೀವ ಇರುವವರೆಗೂ ಒಮ್ಮೆ  ಯಾದರೂ ಕಲ್ಯಾಣ ಪರ್ವದಲ್ಲಿ ಭಾಗಿಯಾಗುವ ಮೂಲಕ ಪಾವನರಾಗೊಣ. ಈ ಪವಿತ್ರ ಸಮಾವೇಶ ಕಲ್ಯಾಣ ಪರ್ವಕ್ಕೆ ಜಾತಿ ಮತ ಪಂಥಗಳ ಭೇದವಿಲ್ಲದೆ, ಸರ್ವರಿಗೂ ಆದರದ ಸ್ವಾಗತವಿದೆ. ಮಾಸ್ಕ್ ಹಾಕಿಕೊಂಡು,ದೇಹಿಕ ಅಂತರ ಕಾಪಾಡಿಕೊಂಡು,ಸರ್ಕಾರದ ನೀತಿ ನಿಯಮಗಳನ್ನು  ಪಾಲಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ….

ಲೇಖಕರುಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ.

Follow this link to join my WhatsApp group: https://chat.whatsapp.com/FZyDkLKJeoCKnFlrLTCqgN

Leave a Reply

Your email address will not be published. Required fields are marked *