ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಾಣ ಮಾಡುವಲ್ಲಿ  ಮೊದಲಿಗರು : ಬಂಡೆಪ್ಪಾ ಖಾಶೆಂಪೂರ….

Spread the love

ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಾಣ ಮಾಡುವಲ್ಲಿ  ಮೊದಲಿಗರು : ಬಂಡೆಪ್ಪಾ ಖಾಶೆಂಪೂರ….

ಚಿಟಗುಪ್ಪಾ : ವಿಶ್ವ ಗುರು ಬಸವಣ್ಣನವರು ಸಮಾಜಿಕ,ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಮೊದಲಿಗರಾಗಿದ್ದಾರೆ.ಅದೇ ರೀತಿ ಅನಕ್ಷರಸ್ಥ ಅನೇಕ ಶಿವಶರಣರನ್ನು ಅಕ್ಷರಸ್ಥರಾಗಿ ಮಾಡಿ ವಚನಗಳ ರಚನೆಗೆ ಕಾರಣಿಭೂತರಾಗಿದ್ದಾರೆ ಎಂದು  ಮಾಜಿ ಸಚಿವರು, ಬೀದರ ದಕ್ಷಿಣ ಕ್ಷೇತ್ರದ ಹಾಲಿ ಶಾಸಕರಾದ ಬಂಡೆಪ್ಪಾ ಖಾಶೆಂಪೂರವರು  ನುಡಿದರು. ನಗರದ ಶ್ರೀ ಸಂತ ಶಿರೋಮಣಿ ಮಡಿವಾಳೇಶ್ವರ ಗವಿಯಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಥಮ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದ ಅವರು ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಇದಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಅಕ್ಷರದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಮತ್ತು ಸನ್ಮಾರ್ಗವನ್ನು ಬೋಧಿಸುವವರು ನಿಜವಾದ ಶಿಕ್ಷಕರು. ಒಬ್ಬ ಶಿಲ್ಪಿ ಕಲ್ಲನ್ನು ಕಡೆದು ಸುಂದರವಾದ ಮೂರ್ತಿಯನ್ನು ಮಾಡುತ್ತಾನೆ. ಅದೇ ರೀತಿ ಶಿಕ್ಷಕರು ಸಹ ಮಕ್ಕಳನ್ನು ತಿದ್ದಿ ತಿಡಿ ಸುಂದರವಾದ ಅವರ ಉಜ್ವಲ ಭವಿಷ್ಯ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕೆಂದು ತಿಳಿಸಿದರು.ಅಜ್ಞಾನವನ್ನು ಹೋಗಲಾಡಿಸಿ,ಸುಜ್ಞಾನವನ್ನು ಬಿತ್ತುವ ಮೂಲಕ ಮಕ್ಕಳಿಗೆ ಉತ್ತಮ ಜ್ಞಾನಾರ್ಜನೆ ಮಾಡುತ್ತಿರುವ ಶಿಕ್ಷಕರ ಕಾರ್ಯ ದೊಡ್ಡದು ಹಾಗೂ ಶ್ರೇಷ್ಠವಾಗಿದೆ ಎನ್ನತ್ತಾ,ಸರಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಹಾಗೂ ಬಡ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡುವುದು ಸೇರಿದಂತೆ ಈ ಭಾಗದ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳೂಂದಿಗೆ ತೇರ್ಗಡೆ ಹೊಂದುವ ದಿಸೆಯಲ್ಲಿ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕೆಂದರು. ಶಿಕ್ಷಕರು ಅತ್ಯುತ್ತಮವಾಗಿ ಬೋಧನೆ ಮಾಡುವ ಮೂಲಕ ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಹೋದರೆ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ ಎಂದರು.  ವಿಷಯ ಪರಿವೀಕ್ಷಕರು ಅಪರ ಆಯುಕ್ತರ ಕಛೇರಿ ಸಾ.ಶಿ.ಇ. ಕಲಬುರಗಿಯ ನಾಗೇಂದ್ರ ಅವರಾದಿಯವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ನೀಡುತ್ತಾ, ಈ ದಿನವನ್ನು ಆತ್ಮವಿಮರ್ಶೆಯ ದಿನವನ್ನಾಗಿ ಶಿಕ್ಷಕರ ಬಂಧುಗಳು  ಆಚರಣೆ ಮಾಡಿದರೆ ಇನ್ನು ಸ್ವಾರ್ಥಕವಾಗುತ್ತದೆ ಮತ್ತು ಸೂಕ್ತವಾಗುತ್ತದೆ ಎಂದರು. ಯಾಕೆಂದರೆ ಈ ದಿನ ಶಿಕ್ಷಕ ವೃಂದದವರು ಆತ್ಮ ವಿಮರ್ಶೆ ಮಾಡುವ ಮೂಲಕ  ಬದ್ಧತೆಯಿಂದ ಕೆಲಸ ಮಾಡುತ್ತಿದ್ದೆವು ಇಲ್ಲವೋ ಎಂಬುದು ತಮ್ಮನ್ನು ತಾವು ಖಾತ್ರಿ ಮಾಡಿಕೊಳ್ಳಬೇಕು. ಈ ತನ್ಮೂಲಕ ಶಿಕ್ಷಕರ ಹುದ್ದೆಗೆ ತಕ್ಕಂತೆ ಕೆಲಸ ಮಾಡುವ ವಿಚಾರಗಳ ಚಿಂತನ ಮಂಥನ ಕಾರ್ಯವಾಗಬೇಕು ಜೊತೆಗೆ ಕರ್ತವ್ಯವಾಗಬೇಕೆಂದು ತಿಳಿಸಿದರು. ಈ ದಿಕ್ಕಿನಲ್ಲಿ ನಾವೆಲ್ಲರೂ ಸಮಯಕ್ಕೆ ತಕ್ಕಂತೆ ಬದಲಾವಣೆ ಆಗುವ ವಿಚಾರಗಳು ನಮ್ಮಲ್ಲಿ ಮೂಡಬೇಕು. ಅಂದಾಗ ಮಾತ್ರ ನಾವು ಮಕ್ಕಳಿಗೆ ಹೊಸ ಹೊಸ ವಿಚಾರಗಳು ಕಲಿಸಲು ಸಾಧ್ಯ ಎಂದರು. ಇನ್ನು ಶಿಕ್ಷಕರಲ್ಲಿ ಇರಲೇಬೇಕಾದ ಮಹತ್ವದ ವಿಚಾರಗಳೆಂದರೆ ಸಮಯ ಪಾಲನೆ, ಮಕ್ಕಳಿಗೆ ಕಾಳಜಿ ತೋರಿಸುವುದು, ಎಲ್ಲಾ ಮಕ್ಕಳಿಗೆ ಮಾನವೀಯ ಮೌಲ್ಯಗಳ ಮಮತೆಯ

ಪ್ರೀತಿ ಹಂಚುವುದು.  ನಿರಂತರವಾದ ಅಧ್ಯಯನ ಮಾಡುವ ಮೂಲಕ ಹೊಸ ವಿಚಾರಗಳನ್ನು ಕಲಿತು,ವಿಧ್ಯಾರ್ಥಿಗಳಿಗೆ ಹೊಸತನವನ್ನು ಕಲಿಸುವುದು ಮತ್ತು ಶಿಕ್ಷಕರ ಮನಸ್ಸನ್ನು ಏಕಾಗ್ರತೆಯಲ್ಲಿ ಎಂದರೆ ಹತೋಟಿಯಲ್ಲಿ ಇಟ್ಟಿಕೊಳ್ಳುವ ಕೆಲಸ ಮಾಡುವುದು.  ಹೀಗೆ ಇವುಗಳನ್ನೆಲ್ಲಾ ಶಿಕ್ಷಕರು ಅಳವಡಿಸಿಕೊಂಡಿದೆ ಆದರೆ ಶಿಕ್ಷಕರು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳು ಮಾಡಲು ಸಾಧ್ಯ ಎಂದರು.ಇನ್ನು ಈ ದೇಶದ ಹೆಮ್ಮೆಯ ಮಗಳಾದ ಸಾವಿತ್ರಿಬಾಯಿ ಪುಲೆಯವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿಕಾರಿ ಬದಲಾವಣೆಗಳ ಕುರಿತ ಅವರ ಆದರ್ಶ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬಾಳಿಗೆ ನಂದಾದೀಪ ವಾಗೋಣವೆಂದು ಕರೆಯನ್ನು ನೀಡಿದರು. ವಿಧಾನ ಪರಿಷತ್ತಿನ ಸದಸ್ಯರಾದ ಚಂದ್ರಶೇಖರ ಬಿ.ಪಾಟೀಲ ರವರು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎನ್ನುವಂತೆ ವಿಧ್ಯಾರ್ಥಿಗಳಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎನ್ನುವುದು ಮರೆಯಬಾರದು. ನಿಷ್ಠೆ,ಪ್ರಮಾಣಿಕವಾಗಿ ತಮ್ಮ ಕಾಯಕವನ್ನು ನಿರ್ವಹಣೆ ಮಾಡಿಕೊಂಡು ಬರುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕು. ಜಗತ್ತಿನ ಎಲ್ಲ ಜವಾಬ್ದಾರಿಗಳಿಗಿಂತ ಶಿಕ್ಷಕರ ಹುದ್ದೆ ಶ್ರೇಷ್ಠವಾದದ್ದು. ಒಬ್ಬ ಶಿಕ್ಷಕನಲ್ಲಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಯಿದೆ ಆ ದಿಶೆಯಲ್ಲಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಹುಮನಾಬಾದ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗಶೆಟ್ಟಿ ಡುಮಣಿಯವರು ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು. ಚಿಟಗುಪ್ಪಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜಪ್ಪಾ ಜಮಾದಾರರವರು ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿ ಶಿಕ್ಷಕರ ಸಮಸ್ಯೆಗಳಿಗೆ ಸ್ವಂದಿಸುವಂತೆ ವೇದಿಕೆ ಮೇಲಿದ್ದ ಗಣ್ಯರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಮಾಲಾಶ್ರೀ ಎಸ್ ಭೊತಾಳೆ,ಉಪಾಧ್ಯಕ್ಷರಾದ ಸೌಭಾಗ್ಯವತಿ ಅಶೋಕ ಸ್ವಾಮಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ಶಂಕರ ಕನಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಗುಂಡಪ್ಪಾ ಹೆಚ್ ಸಿದ್ದಣಗೋಳ, ಪುರಸಭೆ ಮುಖ್ಯಾಧಿಕಾರಿ ಆರ್. ಶ್ರೀಪಾದ ರಾಜಪುರೋಹಿತರು,ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರರಡ್ಡಿ ಮಾಲಿ ಪಾಟೀಲ, ಚಿಟಗುಪ್ಪಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ ಬೇಲೂರೆ,ಚಿಟಗುಪ್ಪಾ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅನೀಲಕುಮಾರ ಸಿರಮುಂಡಿ,ಚಿಟಗುಪ್ಪಾ ತಾಲೂಕು ಪ.ಜಾ/ಪ.ಪಂ ಪ್ರಾ.ಮಾ.ಶಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಕುಮಾರ ಹರನಾಳೆ,ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜಶೇಖರ ಉಪ್ಪಿನ, ತಾಲೂಕು ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ರಮೇಶ ಸಲಗರ, ಪ್ರಾಥಮಿಕ ಶಾಲಾ ಸಿ ಆರ್ ಪಿ ರಾಂಪೂರಿ ಭವನಪುರಿ, ಸತೀಶ ಮಾಳಾ, ಸಂತೋಷ ತಾಂಡೂರ,ವಿಕ್ಟರ್ ಡಿಸೋಜಾ, ರೇವಶೆಟ್ಟಿ ತಂಗಾ,ಸಿದ್ರಾಮ ತೋಟೆ,ಸಂತೋಷ ಭಾಗ್ಯನಗರ,ಗಂಡಪ್ಪಾ ಕೋರೆ,ಬಸವರಾಜ ಮಂಗಲಗಿ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಶಿವಕುಮಾರ ಪಾರಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನೀಲಕಂಠ ಇಸ್ಲಾಂಪೂರ ನಿರೂಪಿಸಿದರು. ಮಹೇಶ ಮನ್ನಾಎಖೇಳಿ ವಂದಿಸಿದರು. ತಾಲೂಕಿನ ಪ್ರೌಢ, ಪ್ರಾಥಮಿಕ ಶಾಲಾ ಶಿಕ್ಷಕ – ಶಿಕ್ಷಕಿಯರು ವಿಧ್ಯಾರ್ಥಿಗಳು,ನಗರದ ಗಣ್ಯರು, ನಾಗರಿಕ ಬಂಧುಗಳು ಉಪಸ್ಥಿತರಿದ್ದರು. (ಚಿತ್ರ :1 – ವಿಧಾನ ಪರಿಷತ್ತಿನ ಸದಸ್ಯರು ಮಾತನಾಡುತ್ತಿರುವುದು. ಚಿತ್ರ : 2 – ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ನಮನ ಸಲ್ಲಿಸಲಾಯಿತು. ಚಿತ್ರ : 3 – ಮಾಜಿ ಸಚಿವರು, ಹಾಲಿ ಶಾಸಕರಾದ ಬಂಡೆಪ್ಪಾ ಖಾಶೆಂಪೂರವರು ಮಾತನಾಡುತ್ತಿರುವುದು ಚಿತ್ರ : 4 & 5 :- ಚಿಟಗುಪ್ಪಾ ನಗರದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯನ್ನು ಮಾಜಿ ಸಚಿವರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪಾ ಖಾಶೆಂಪೂರವರು ಉದ್ಘಾಟಿಸಿದರು.ವಿಧಾನ ಪರಿಷತ್ತಿನ ಸದಸ್ಯರಾದ ಚಂದ್ರಶೇಖರ ಬಿ.ಪಾಟೀಲ, ಪುರಸಭೆ ಅಧ್ಯಕ್ಷರಾದ ಮಾಲಾಶ್ರೀ ಭೋತಾಳೆ,ಉಪಾಧ್ಯಕ್ಷರಾದ ಸೌಭಾಗ್ಯವತಿ ಅಶೋಕ ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು)

ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *