ಕಮಿಷನರ್ ಆಫರ್ ಕೇಳಿ ಯುವಕ- ಯುವತಿಯರು ಖುಷ್ ! ಪಿಎಸ್ಐ, ಪೊಲೀಸ್ ಆಗಲು ಬಂದರು 600ಕ್ಕೂ ಹೆಚ್ಚು ಜನ…..

Spread the love

ಕಮಿಷನರ್ ಆಫರ್ ಕೇಳಿ ಯುವಕಯುವತಿಯರು ಖುಷ್ ! ಪಿಎಸ್ಐ, ಪೊಲೀಸ್ ಆಗಲು ಬಂದರು 600ಕ್ಕೂ ಹೆಚ್ಚು ಜನ…..

ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಪೊಲೀಸ್ ಇನ್ಸ್ ಪೆಕ್ಟರ್ ಆಗಿ, ಪೊಲೀಸ್ ಸಿಬಂದಿಯಾಗಿ ಇಲಾಖೆ ಸೇರಲು ಬನ್ನಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ನೀಡಿದ ಆಫರ್ ಬಗ್ಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಪೊಲೀಸ್ ಇನ್ಸ್ ಪೆಕ್ಟರ್ ಆಗಿ, ಪೊಲೀಸ್ ಸಿಬಂದಿಯಾಗಿ ಇಲಾಖೆ ಸೇರಲು ಬನ್ನಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ನೀಡಿದ ಆಫರ್ ಬಗ್ಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಯುವಕರು ಮತ್ತು ಯುವತಿಯರು ಭಾರೀ ಸಂಖ್ಯೆಯಲ್ಲಿ ಸ್ಪಂದಿಸಿದ್ದು, ಒಂದೇ ದಿನದಲ್ಲಿ 600ಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ. ಬೆಳಗ್ಗಿನಿಂದಲೇ ಯುವಕರು ಸರದಿಯಂತೆ ಕಮಿಷರ್ ಕಚೇರಿಗೆ ಬಂದಿದ್ದನ್ನು ನೋಡಿದ ಪೊಲೀಸ್ ಅಧಿಕಾರಿಗಳು ನೋಂದಣಿ ಪ್ರಕ್ರಿಯೆಯನ್ನು ಹಿಂಭಾಗದ ಮೈದಾನಕ್ಕೆ ವರ್ಗಾಯಿಸಿದರು. ಸುಡುತ್ತಿದ್ದ ಬಿಸಿಲಿನ ಮಧ್ಯೆಯೇ ಪೊಲೀಸರಾಗಲು ಬಂದಿದ್ದ ಅಭ್ಯರ್ಥಿಗಳು ತಾಳ್ಮೆಯಿಂದ ಸಾಲುಗಟ್ಟಿ ನಿಂತು ತಮ್ಮ ನೋಂದಣಿ ಮಾಡಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರಬೇಕು ಮತ್ತು ಪಿಎಸ್ಐ ಅಥವಾ ಪೊಲೀಸ್ ಪೇದೆಯ ಹುದ್ದೆಗೆ ಅರ್ಜಿ ಸಲ್ಲಿಸಿ, ಪ್ರಾಥಮಿಕ ಅರ್ಹತೆಯನ್ನು ಪಡೆದಿರುವ ಬಗ್ಗೆ ದಾಖಲಾತಿ ಹೊಂದಿರಬೇಕೆಂಬ ನಿಯಮ ವಿಧಿಸಲಾಗಿತ್ತು. ಆದರೆ, ಹುದ್ದೆ ಗಿಟ್ಟಿಸಲು ಬಂದಿದ್ದವರಲ್ಲಿ ಹೊಸಬರು ಕೂಡ ಇದ್ದರು. ಕೆಲವರು ಸ್ವಂತ ಆಸಕ್ತಿಯಿಂದ ತಾನು ಇನ್ಸ್ ಪೆಕ್ಟರ್ ಆಗಬೇಕೆಂದು ಹೇಳಿಕೊಂಡು ಬಂದವರೂ ಇದ್ದರು. ಕಮಿಷನರ್ ಕಚೇರಿಯಿಂದ ನೀಡಿರುವ ಮಾಹಿತಿ ಪ್ರಕಾರ, ಇಂದು ಒಂದೇ ದಿನ ಒಟ್ಟು 604 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಪಿಎಸ್ಐ ಹುದ್ದೆಗೆ 218 ಅಭ್ಯರ್ಥಿಗಳು ಹಾಗೂ ಪಿಸಿ ನೇಮಕಾತಿಗೆ 386 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 566 ಅಭ್ಯರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದು, 38 ಮಂದಿ ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ ಬಂದಿದ್ದಾರೆ. ಈ ಪೈಕಿ 481 ಮಂದಿ ಯುವಕರು ಮತ್ತು 123 ಯುವತಿಯರು. 372 ಅಭ್ಯರ್ಥಿಗಳು ಪದವೀಧರರಾಗಿದ್ದರೆ, 232 ಪದವಿಯೇತರ ಶಿಕ್ಷಣವನ್ನು ಪಡೆದವರು.  ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಪೊಲೀಸ್ ಹುದ್ದೆಗೆ ಬರುವುದು ಅತ್ಯಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ನೂರು ಮಂದಿಗೆ ಒಂದು ತಿಂಗಳ ಕಾರ್ಯಾಗಾರ ನಡೆಸಲು ಮುಂದಾಗಿದ್ದರು. ಆಮೂಲಕ ದ.ಕ. ಜಿಲ್ಲೆಯವರೇ ಪೊಲೀಸ್ ಇಲಾಖೆ ಸೇರುವಂತೆ ಪ್ರೇರಣೆ ನೀಡಿದ್ದರು. ಈ ರೀತಿಯ ವಿಭಿನ್ನ ಆಫರ್ ಕೇಳಿದ ಯುವಕರು ಖುಷ್ ಆಗಿದ್ದು, ಸಂತಸದಲ್ಲೇ ಇಂದು ಕಮಿಷನರ್ ಕಚೇರಿಗೆ ಬಂದಿದ್ದರು. ಆದರೆ, ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವ ಕಾರಣ ಇಷ್ಟೊಂದು ಮಂದಿಗೆ ನಿರಾಸೆ ಮಾಡುವುದು ಬೇಡವೆಂದು ಎರಡು ಪಾಳಿಯಲ್ಲಿ ಕಾರ್ಯಾಗಾರ ನಡೆಸಲು ಕಮಿಷನರ್ ಮುಂದಾಗಿದ್ದಾರೆ. ಮೊದಲಿಗೆ ನೂರು ಮಂದಿಯನ್ನು ಆಯ್ಕೆ ಮಾಡಿ, ಊಟ, ವಸತಿ ಸಹಿತ ಕಾರ್ಯಾಗಾರ ನಡೆಸಲಿದ್ದಾರೆ. ಆಬಳಿಕ ನೂರು ಜನರ ಇನ್ನೊಂದು ತಂಡವನ್ನು ರಚಿಸಿ, ವಸತಿಯೇತರ ಕಾರ್ಯಾಗಾರ ನಡೆಸಲು ಮುಂದಾಗಿದ್ದಾರೆ. ತರಬೇತಿ ಕಾರ್ಯಾಗಾರಕ್ಕೆ ಅಗತ್ಯ ಬಿದ್ದರೆ ಅರ್ಹತಾ ಪರೀಕ್ಷೆ ನಡೆಸುವುದಾಗಿ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಕಾರ್ಯಾಗಾರದ ಬಗ್ಗೆ ಮಾಹಿತಿಯನ್ನು ಮುಂದೆ ತಿಳಿಸಲಾಗುವುದು ಎಂದಿದ್ದಾರೆ. ಕಳೆದ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ 15 ಮಂದಿ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಅದರಲ್ಲಿ ನಾಲ್ಕು ಮಂದಿ ಕೊನೆಗೆ ತಾವು ಬರುವುದಿಲ್ಲ ಎಂದು ಹೇಳಿದ್ದರು. ಪೊಲೀಸ್ ಇಲಾಖೆಯಲ್ಲಿ ಈ ಪರಿ ಸೌಲಭ್ಯಗಳನ್ನು ನೀಡುತ್ತಿದ್ದರೂ, ಕರಾವಳಿ ಭಾಗದ ಜನರು ಯಾಕೆ ಇಲಾಖೆ ಸೇರುತ್ತಿಲ್ಲ ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ತಮ್ಮ ಮೂಲ ಚಿತ್ರದುರ್ಗ ಜಿಲ್ಲೆ ಆಗಿದ್ದರೂ, ಕರಾವಳಿ ಜನರು ಮತ್ತು ಈ ಭಾಗದ ಬಗ್ಗೆ ವಿಶೇಷ ಮಮಕಾರ ಇಟ್ಟವರ ರೀತಿ ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಬಾರಿ ದ.ಕ. ಜಿಲ್ಲೆಯ ತುಳುವರಿಗಾಗಿಯೇ ಉಚಿತ ಕಾರ್ಯಾಗಾರ ಏರ್ಪಡಿಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *