ಮಕ್ಕಳ ಹೆಸರಲ್ಲಿ ಸಸಿಗಳನ್ನು ನಾಟಿ ಮಾಡಿ: ಬಂಡೆಪ್ಪ ಖಾಶೆಂಪುರ್

Spread the love

ಮಕ್ಕಳ ಹೆಸರಲ್ಲಿ ಸಸಿಗಳನ್ನು ನಾಟಿ ಮಾಡಿ: ಬಂಡೆಪ್ಪ ಖಾಶೆಂಪುರ್

ಬೀದರ್ (ಜೂ.30): ಶಾಲೆಗಳಲ್ಲಿ ಖಾಲಿ ಇರುವ ಸ್ಥಳಗಳಲ್ಲಿ, ಕಾಂಪೌಂಡ್ ಗಳ ಸುತ್ತಮುತ್ತಲಿನ ಜಾಗಗಳಲ್ಲಿ ಶಾಲೆಯಲ್ಲಿ ಓದುವ ಮಕ್ಕಳ ಹೆಸರಲ್ಲಿ ಸಸಿಗಳನ್ನು ನಾಟಿ ಮಾಡುವ ಮೂಲಕ ಅವುಗಳ ಪಾಲನೆ ಪೋಷಣೆಯ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಿದರೆ ಒಳ್ಳೆಯದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ (ಪಿ) ಗ್ರಾಮದ ಪಾರ್ಮ್ ಹೌಸ್‌ ನಲ್ಲಿ ‘ಪ್ರಾದೇಶಿಕ ಅರಣ್ಯ ವಲಯ ಬೀದರ್, ರೋಟರಿ ಕ್ಲಬ್ ಬೀದರ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಬೀದರ್ ಸಂಯುಕ್ತಾಶ್ರಯದಲ್ಲಿ ನಡೆದ ವನ ಮಹೋತ್ಸವ’ ಕಾರ್ಯಕ್ರಮವನ್ನು ‘ಸಸಿ ನೆಡುವ ಮೂಲಕ ಉದ್ಘಾಟಿಸಿ’ ಮಾತನಾಡಿದ ಅವರು, ಮಕ್ಕಳಲ್ಲಿ ಗಿಡಮರಗಳನ್ನು ಬೆಳಸುವ ಉತ್ಸಾಹ, ಆಸಕ್ತಿ ಇರುತ್ತದೆ. ಅವರಿಗೆ ವಿಧ್ಯಾಭ್ಯಾಸದ ಜೊತೆಗೆ ಪರಿಸರ ಉಳಿಸಿ ಬೆಳೆಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ತಾವು ನೆಟ್ಟ ಸಸಿಗಳನ್ನು ತಾವೇ ಬೆಳಸುವ ಕೆಲಸ ಮಾಡಿದ್ದೇ ಆದರೆ ಅದಕ್ಕಿಂತ ಉತ್ತಮ ಕೆಲಸ ಇನ್ನೊಂದು ಇಲ್ಲ. ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ. ಬರಡು ಭೂಮಿ, ಬಂಜರು ಭೂಮಿಗಳಲ್ಲಿ ಭೂಮಿಯ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅರಣ್ಯ ಇಲಾಖೆಯವರು ಗಿಡಮರಗಳನ್ನು ಬೆಳಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಅನೇಕ ಕಡೆಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿ, ಬರಡು ಭೂಮಿ ಇದೆ. ಅಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಗಿಡಮರಗಳನ್ನು ಬೆಳಸುವ ಕೆಲಸ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಮಾನವ ತಾನು ಬದುಕುವ ಜೊತೆಗೆ ಪರಿಸರ, ಪ್ರಕೃತಿಯನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗಬೇಕು. ಗಿಡಮರಗಳನ್ನು ಉಳಿಸಿ ಬೆಳಸಬೇಕು. ಗಿಡಮರಗಳು ಇಲ್ಲದೇ ಪರಿಸರ ಉಳಿಯಲು ಸಾಧ್ಯವಿಲ್ಲ. ಗಿಡಮರಗಳಿಂದ ನಮಗೆ ಜೀವಿಸಲು ಬೇಕಾಗುವ ಅತ್ಯಮೂಲ್ಯ ಗಾಳಿ, ಆಕ್ಸಿಜನ್ ದೊರೆಯುತ್ತದೆ. ಅಂತಹ ಆಕ್ಸಿಜನ್ ನೀಡುವ ಮರಗಳನ್ನು ನಾವು ನಾಶ ಮಾಡುತ್ತಿದ್ದೇವೆ. ಗಿಡಮರಗಳನ್ನು ಉಳಿಸಿ ಬೆಳಸುವ ಕೆಲಸವನ್ನು ಮಾಡುವ ಬದಲು ನಗರೀಕರಣ, ಅಭಿವೃದ್ಧಿಯ ಹೆಸರಲ್ಲಿ ಗಿಡಮರಗಳನ್ನು ನಾಶ ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ಪ್ರಕೃತಿಯಲ್ಲಿ ಗಿಡಮರಗಳ ಪಾತ್ರ ಬಹಳಷ್ಟು ಇದೆ. ಗಿಡಮರಗಳು ಇಲ್ಲದೇ ಬದುಕು ಇಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಸಾಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಈ ಸಂದರ್ಭದಲ್ಲಿ ಬೀದರ್ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿ ಪ್ರವೀಣ್ ಮೋರೆ, ರೋಟರಿ ಕ್ಲಬ್ ಅಧ್ಯಕ್ಷರಾದ ಅವಶೆಟ್ಟಿ ಪಾಟೀಲ್, ಇಂಜಿನಿಯರ್ ರವಿ ಮೂಲ್ಗೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್ ನ ಮಂಜುಳಾ ಮೂಲ್ಗೆ ಸೇರಿದಂತೆ ಅನೇಕರಿದ್ದರು.

ವರದಿ – ಮಹೇಶ ಶರ್ಮ

Leave a Reply

Your email address will not be published. Required fields are marked *