ಕೋವಿಡ್ ಗೆ ಬಲಿಯಾದ ಹಿರಿಯ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಒಂದು ಲಕ್ಷ ರೂ. ವೈಯಕ್ತಿಕ ಧನಸಹಾಯ

Spread the love

ಕೋವಿಡ್ ಗೆ ಬಲಿಯಾದ ಹಿರಿಯ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಒಂದು ಲಕ್ಷ ರೂ. ವೈಯಕ್ತಿಕ ಧನಸಹಾಯ

ಬೆಳಗಾವಿ: ಎಷ್ಟೇ ಅಧಿಕಾರ, ಶ್ರೀಮಂತಿಕೆ ಇದ್ದರೂ ಬಡವರ ಸಂಕಷ್ಟಕ್ಕೆ ಮಿಡಿಯುವ ಮನಸ್ಸಿರುವುದು ಮುಖ್ಯ. ಹೃದಯ ಶ್ರೀಮಂತಿಕೆ, ಉದಾರ ಮನೋಭಾವದವರಲ್ಲಿ ಮಾತ್ರ ಇಂತಹ ಗುಣ ಕಾಣಲು ಸಾಧ್ಯ. ಇಂತಹ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತೊಮ್ಮೆ ಸಾಬೀತುಪಡಿಸಿದರು. ಹಾದು, ಪತ್ರಿಕಾರಂಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಈಚೆಗೆ ಕೋವಿಡ್ ಗೆ ತುತ್ತಾಗಿ ನಮ್ಮನ್ನಗಲಿದ ಹಿರಿಯ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಶುಕ್ರವಾರ ವೈಯಕ್ತಿಕವಾಗಿ ಒಂದು ಲಕ್ಷ ನಗದು ರೂಪದ ಸಹಾಯ ನೀಡುವ ಮೂಲಕ ಬಡಪತ್ರಕರ್ತನ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಇತರರಿಗೆ ಮಾದರಿಯಾದರು. ಗುರುವಾರ ಮುಂಜಾನೆ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಅವರು, ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಧನಸಹಾಯ ನೀಡಿದರು. ಈ ವೇಳೆ ಮಾತನಾಡಿದ ಅವರು, ಹಿರಿಯ ಪತ್ರಕರ್ತರಾಗಿದ್ದ ಸಂಜೀವಕುಮಾರ ನಾಡಿಗೇರ ಅವರು ತಮ್ಮ ವೃತ್ತಿ ಜೀವನದಲ್ಲಿ ವಸ್ತುನಿಷ್ಠ, ನಿರ್ಭೀತ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದರು. ಅವರ ಅಗಲಿಕೆ ನನಗೆ ಅಪಾರ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹಾರೈಸಿದ ಅವರು, ಪತ್ನಿಗೆ ವಿಧವಾ ವೇತನ ಸೇರಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಾಡಿಗೇರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲು ಅವಿರತ ಶ್ರಮಿಸಿದ ಹಿರಿಯ ಪತ್ರಕರ್ತ,  ಮೆಹಬೂಬ ಮಕಾನದಾರ ಮಾತನಾಡಿ, ಸುಮಾರು ಇಪ್ಪತ್ತು ವರ್ಷಗಳಿಂದ ಪತ್ರಕರ್ತರಾಗಿ ಕನ್ನಡಮ್ಮ, ವಿಜಯಕರ್ನಾಟಕ, ಕನ್ನಡಪ್ರಭ, ಹಸಿರುಕ್ರಾಂತಿ ಸೇರಿ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಸ್ತುನಿಷ್ಠ ಬರವಣಿಗೆಗೆ ಹೆಸರಾಗಿದ್ದರು. ಜಿಲ್ಲೆಯ ಅನೇಕ ಜನಪ್ರತಿನಿಧಿಗಳ ರಾಜಕೀಯ ಬೆಳವಣಿಗೆಗೆ ಬರಹ ರೂಪದ ಕಾಣಿಕೆ ನೀಡಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಅವರು ಕೋವಿಡ್ ಗೆ ಬಲಿಯಾದಾಗ ಜಿಲ್ಲೆ ಯಾವೊಬ್ಬ ಜನಪ್ರತಿನಿಧಿಯೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಆದರೆ ನೆರೆಯ ಜಿಲ್ಲೆಯವರಾದರೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಮ್ಮ ಮನವಿಗೆ ಸ್ಪಂದಿಸಿ ವೈಯಕ್ತಿಕ ಸಹಾಯಧನ ನೀಡಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳಲ್ಲಿ ಬಡವರ ಸಂಕಷ್ಟಕ್ಕೆ ಮಿಡಿಯುವ ಗುಣಗಳಿದ್ದರೆ ಸಮಾಜಕ್ಕೆ ಸಹಾಯವಾಗಲಿದೆ ಎಂದರು. ಮೃತ ಸಂಜೀವಕುಮಾರ ಪತ್ನಿ ಸಂಗೀತಾ, ಮಕ್ಕಳಾದ ವಿನಾಯಕ, ಪ್ರವೀಣ ಸಚಿವರಿಂದ ಧನ ಸಹಾಯ ಸ್ವೀಕರಿಸಿದರು.

ವರದಿ -ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *