ಲಸಿಕೆ ಪಡೆದುಕೊಂಡಂತಹ ಕಾರ್ಮಿಕರೊಂದಿಗೆ ಕೈಗಾರಿಕೆಗಳ ಕಾರ್ಯಪ್ರಾರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

Spread the love

ಲಸಿಕೆ ಪಡೆದುಕೊಂಡಂತಹ ಕಾರ್ಮಿಕರೊಂದಿಗೆ ಕೈಗಾರಿಕೆಗಳ ಕಾರ್ಯಪ್ರಾರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ: ಕೈಗಾರಿಕಾ ಸಚಿವ ಜಗದೀಶ್ಶೆಟ್ಟರ್

ಎಫ್‌ಐಸಿಸಿಐ ವತಿಯಿಂದ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆಯ ವೆಬಿನಾರ್‌

ಸಾಂಕ್ರಾಮಿಕ ರೋಗದಿಂದ ಕೈಗಾರಿಕಾ ಕ್ಷೇತ್ರದ ಮೇಲೆ ಆದಂತಹ ಪರಿಣಾಮದ ಅಧ್ಯಯನಕ್ಕೆ ಕೈಗಾರಿಕಾ ಇಲಾಖೆಯಿಂದ ಹಾನಿ ಮೌಲ್ಯಮಾಪನ ಪ್ರಕ್ರಿಯೆ

ಬೆಂಗಳೂರು ಜೂನ್‌ 08: ಕೈಗಾರಿಕಾ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯ ವೇಗ ಪಡೆದುಕೊಂಡಿರುವುದು ಸಂತಸದ ಸಂಗತಿ. ಲಸಿಕೆ ಪಡೆದುಕೊಂಡಂತಹ ಕಾರ್ಮಿಕರೊಂದಿಗೆ ಕೈಗಾರಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ಎಫ್ ಐ ಸಿ ಸಿ ಐ ವತಿಯಿಂದ ಆಯೋಜಿಸಿದ್ದ ವೇಬಿನಾರ್ ನಲ್ಲಿ ಭಾಗವಹಿಸಿ ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಲಾಕ್‌ಡೌನ್‌ ನಿಂದಾಗಿ ಕೈಗಾರಿಕೆಗಳ ಮೇಲೆ ಆಗಿರುವ ಸಮಸ್ಯೆಗಳನ್ನು ಆಲಿಸಿದರು. ನಂತರ ಅವರು ಮಾತನಾಡಿ, ಕೋವಿಡ್‌ ಎರಡನೇ ಅಲೆಯಿಂದಾಗಿ ರಾಜ್ಯದ ಪರಿಸ್ಥಿತಿ ಬಹಳ ಬಿಗಡಾಯಿಸಿತ್ತು. ಈ ಹಿನ್ನಲೆಯಲ್ಲಿ ಲಾಕ್‌ಡೌನ್‌ ನಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು. ಲಾಕ್‌ಡೌನ್‌ನಿಂದಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ, ದೇಶಾದ್ಯಂತ ಲಸಿಕಾ ಕಾರ್ಯ ವೇಗ ಪಡೆದುಕೊಳ್ಳುತ್ತಿದ್ದು, ಕೈಗಾರಿಕಾ ಸಂಸ್ಥೆಗಳು ತಮ್ಮ ಕಾರ್ಮಿಕರು ಮತ್ತು ಅವಲಂಬಿತರಿಗೆ ಲಸಿಕೆ ದೊರಕಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದ್ದು, ಲಸಿಕೆಯನ್ನು ಪಡೆದುಕೊಂಡಿರುವ ಕಾರ್ಮಿಕರೊಂದಿಗೆ ಕೈಗಾರಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ನಾಳೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಕೈಗಾರಿಕೆಗಳ ಎಲ್ಲಾ ಕ್ಷೇತ್ರಗಳ ಮೇಲೆ ಲಾಕ್‌ ಡೌನ್‌ ಪರಿಣಾಮವನ್ನು ಬೀರಿದೆ. ಇದರ ಬಗ್ಗೆ ಅಧ್ಯಯನ ಮಾಡುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯ ವತಿಯಿಂದ ಪ್ರತಿ ಕೈಗಾರಿಕಾ ಕ್ಷೇತ್ರಕ್ಕೂ ಸಂಬಂಧಿಸಿದಂತೆ ಹಾನಿ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಅಲ್ಲದೆ, ಕೇಂದ್ರ ಹಣಕಾಸು ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿದ್ದು ಎಂಎಸ್‌ಎಂಇ ಹಾಗೂ ಇತರೆ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಗಳ ಘೋಷಣೆಯ ನಿರೀಕ್ಷೆಯಲ್ಲಿದ್ದೇವೆ. ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನಡೆಯಲಿರುವ ಸಭೆಯಲ್ಲಿ ರಾಜ್ಯ ಸರಕಾರದ ವತಿಯಿಂದ ಆಗಬೇಕಾಗಿರುವಂತಹ ಸಡಲಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರಾಜಕುಮಾರ್ ಖತ್ರಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಎಫ್ ಐ ಸಿ ಸಿ ಐ ಅಧ್ಯಕ್ಷ ರಾದ ಕೆ ಉಲ್ಲಾಸ್ ಕಾಮತ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಾದ ರೇವಣ್ಣ ಗೌಡ ಸೇರಿದಂತೆ ನೂರಾರು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *