ಈ ನಾಡು ಅರಸು ಹಾರೈಸಿದಂತಾಗಲಿ..! || ಆಮಿರ್ ಅಶ್ಅರೀ ಬನ್ನೂರು ಬರಹ.
1915 ಆಗಸ್ಟ್ 20 ರಂದು ಪ್ರಸ್ತುತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು.
ಕ್ಷತ್ರಿಯ ವಂಶಸ್ಥರಾದ ಅರಸು ಬದುಕಿಗಾಗಿ ಬೇಸಾಯವನ್ನು ಆರಿಸಿಕೊಂಡರು. ಕೃಷಿಯೊಂದಿಗೆ ಓದಿನ ಮೇಲೆಯೂ ಗಮನಹೊಂದಿದ್ದ ಅರಸು ಮೈಸೂರಿನಲ್ಲಿ ಇಂಟರ್‍ಮೀಡಿಯಟ್ ಓದಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪಡೆದರು. ಪದವಿ ಬಳಿಕ ಹುಟ್ಟೂರು ಕಲ್ಲಹಳ್ಳಿಗೆ ಮರಳಿ ಬೇಸಾಯವನ್ನು ಮುಂದುವರಿಸುತ್ತಾರೆ. ಯಾವಾಗಲೂ ಬದುಕನ್ನು ಸತ್ಯ ಮತ್ತು ಪಾರದರ್ಶಕದ ಮೇಲೆ ಮುನ್ನಡೆಸಲು ಹಂಬಲಿಸುತ್ತಿದ್ದ ಅರಸು ಗ್ರಾಮದ ನ್ಯಾಯ ಪಂಚಾಯ್ತಿಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಅದು ಅವರಿಗೆ ರಾಜಕೀಯ ವರವನ್ನು ತಂದುಕೊಡುತ್ತದೆ. 1941 (ಸ್ವಾತಂತ್ರ್ಯ ಪೂರ್ವ)ರಲ್ಲಿಯೇ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾದರು. ಅದವರ ಮೊದಲ ರಾಜಕೀಯ ರಂಗ ಪ್ರವೇಶನ ಮತ್ತು ಗೆಲುವಾಗಿತ್ತು. ಅವರು ಮೈಸೂರು ಅರಸರ ಸಂಬಂಧಿಗಳಾಗಿದ್ದರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಜೈಲುವಾಸವನ್ನು ಅನುಭವಿಸುತ್ತಾರೆ. ನಂತರ 1952ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಂತ್ರಿಮಂಡಲದಲ್ಲೂ ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಪಶುಸಂಗೋಪನೆ, ಕಾರ್ಮಿಕ, ಸಾರಿಗೆ, ಪ್ರವಾಸೋದ್ಯಮ, ರೇಷ್ಮೆ ಹಾಗೂ ವಾರ್ತಾ ಮತ್ತು ಪ್ರಚಾರ ಮತ್ತು ಮೀನುಗಾರಿಕೆ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರೆಂಬ ಹೆಗ್ಗಳಿಕೆ ಅರಸು ಮೇಲಿನದು. ಹೀಗೆ ದೊರೆತ ಈ ಎಲ್ಲಾ ಅವಕಾಶ ಮತ್ತು ಜವಾಬ್ದಾರಿಯುತ ಸ್ಥಾನಗಳ ನಡುವೆ ಪ್ರತ್ಯೇಕವೆನಿಸುವುದು 1972 ಮಾರ್ಚ್ 20ರಂದು ಮುಖ್ಯಮಂತ್ರಿ ಪದವಿಯನ್ನು ಸ್ವೀಕರಿಸುವುದು. ಅದು ಆಗ ಮೈಸೂರು ರಾಜ್ಯವಾಗಿತ್ತು. ಸುದೀರ್ಘ 5ವರ್ಷಗಳ ಅವಧಿಯ ಬಳಿಕ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿದ ದೇವರಾಜ ಅರಸು ಪರಿವಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತದೆ. ಆವಾಗಲೂ 2ನೇ ಬಾರಿಗೆ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಅದು ಕರ್ನಾಟಕದ ಪಾಲಿನ ಮೊಟ್ಟಮೊದಲ ಮುಖ್ಯಮಂತ್ರಿಯೂ ಆಗಿತ್ತು. ರಾಜ್ಯ ಕಂಡ ಮುತ್ಸದಿ ರಾಜಕಾರಣಿ ಅರಸು 1969 ರಿಂದ 1979 ದಶಕದ ರಾಜಕೀಯದಲ್ಲಿ ರಾಜ್ಯವನ್ನು ಪ್ರಗತಿಗೆ ಕೊಂಡೊಯ್ಯಲು ಪಣ ತೊಟ್ಟಿದ್ದ ಅಭಿವೃದ್ಧಿಯ ಹರಿಕಾರ. ಅವರ ಆಡಳಿತಾವಧಿಯನ್ನು “ಅರಸು ಯುಗ” ವೆಂದು ಬಣ್ಣಿಸಿದ್ದಾರೆ. ದೀರ್ಘಕಾಲ ರಾಜ್ಯದ ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದು ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿ, ಅವರ ಆರೋಗ್ಯಕರ ಜೀವನಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದರು.
ಅರಸು ರಾಜಕೀಯ ಮತ್ತು ಅಭಿವೃದ್ಧಿಗೂ ಸೈ ಎನಿಸಿಕೊಂಡವರು. ಮೂಲಭೂತ ಸೌಕರ್ಯಗಳು ಸಮಾಜದ ಕಟ್ಟ ಕಡೆಯ ಪ್ರಜೆಯ ತಟ್ಟೆಗೂ ತಲುಪಬೇಕೆಂಬ ದೂರ ದೃಷ್ಟಿ ಹೊಂದಿದ್ದರು. ವೃದ್ಧರಿಗೆ “ವೃದ್ಧಾಪ್ಯ” ವೇತನ ಜಾರಿಗೆ ತಂದು ಮಾಸಾಶನ 40 ರೂಪಾಯಿಯಷ್ಟು ನೀಡಿದರು. ಅನಾಥರಿಗೆ, ಅಂಗವಿಕಲರಿಗೆ ಆರ್ಥಿಕ ನೆರವು ಒದಗಿಸಿದರು. “ಸ್ಟೈಫೆಂಡರಿ” ಎಂಬ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಬದುಕಿನ ನಿರಾಸೆಯನ್ನು ಕಟ್ಟಿ ಹಾಕಿದರು. ಗ್ರಾಮಾಂತರ ಪ್ರದೇಶದ ಮಕ್ಕಳ ಆರೋಗ್ಯದ ಕಲ್ಯಾಣಕ್ಕಾಗಿ ‘ಪೌಷ್ಟಿಕ ಆಹಾರ’ ಯೋಜನೆ, ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ “ಉಚಿತ ನಿವೇಶನ, ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣ” ಯೋಜನೆ, “ಭಾಗ್ಯಜ್ಯೋತಿ” ಯೋಜನೆ ಮೂಲಕ ದುರ್ಬಲರ ಮನೆಗಳಲ್ಲಿ ದೀಪ ಬೆಳಗಿಸಿದರು. ಬಡವರ ನೆರವಿಗಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿದನು ನಾವಿಂದು ನೆನಪಿಸಿಕೊಳ್ಳಬೇಕು. ಮೈಸೂರು ಸಾಂಸ್ಕೃತಿಕ ನಗರವಾಗುವಲ್ಲಿ ದೇವರಾಜ ಅರಸು ಪಾತ್ರ ದೊಡ್ಡದಿದೆ. ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸಿದರು. ಪ್ರಜೆಗಳ ಕಲ್ಯಾಣಕ್ಕಾಗಿ ಮಿಡಿಯುತ್ತಿದ್ದ ಅರಸು ಹಲವಾರು ಯೋಜನೆಗಳನ್ನು ಕೈಗೊಂಡಿದ್ದರು. ಪಾರದರ್ಶಕ ರಾಜಕಾರಣಕ್ಕೆ ಪರ್ಯಾಯ ಹೆಸರಾದ ದೇವರಾಜ ಅರಸು ಕೃಷಿ, ವ್ಯಾಪಾರ ಮತ್ತು ಕುಶಲಕಲೆಗಳನ್ನು ಪ್ರೋತ್ಸಾಹಿಸಿದರು. ನೀರಾವರಿ ಯೋಜನೆಗಳನ್ನು ಕೈಗೊಂಡು ಕೆರೆಗಳನ್ನು ನಿರ್ಮಿಸಿದರು. ವ್ಯಾಪಾರಿಗಳಿಗೆ ಸುರಕ್ಷಿತ ಮಾರ್ಗಗಳನ್ನು ಒದಗಿಸಿ, ವಾಣಿಜ್ಯ ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟು ನಾಗರಿಕ ಸಮಾಜದ ಆರ್ಥಿಕ ಅಭಿವೃದ್ಧಿಗೆ ತಿಲಾಂಜಲಿ ಹಾಡಿದರು. ಹಿಂದೂ, ಜೈನ ಮತ್ತು ಮುಸ್ಲಿಮ್ ಸಮುದಾಯಗಳಿಗೆ ಸಮಾನ ಬೆಂಬಲ ನೀಡುತ್ತ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಪಾದಿಸಿದರು.
ಅಸಮಾನತೆ, ಅಸಹಿಷ್ಣುತೆ ಮತ್ತು ಅಸ್ಪೃಶ್ಯತೆ ತೊಡೆದುಹಾಕಲು ತನ್ನದೆಯಾದ ವಿಶಿಷ್ಟ ಕಾರ್ಯತಂತ್ರವನ್ನು ಅರಸು ಹೆಣೆದಿದ್ದರು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಜೀತ ಪದ್ಧತಿಯನ್ನು ಮುಕ್ತಿಗೊಳಿಸಿದರು. ಕನಿಷ್ಠ ಕೂಲಿಯನ್ನು ನಿಗದಿಪಡಿಸಿದ ಪದ್ಧತಿ ಕೃಷಿ ಕಾರ್ಮಿಕರಿಗೆ ಆರ್ಥಿಕ ಬೆಂಬಲವಾಯಿತು. ಕಣ್ಣೀರಿನಲ್ಲಿ ಕಳೆಯುತ್ತಿದ್ದ ಲಕ್ಷಾಂತರ ಬಡ ಜನರನೂ ಸಾಲಮನ್ನಣೆಯಿಂದ ಸಮಾಧಾನಿಸಿದರು. ಶಿಷ್ಯವೇತನ, ಶುಲ್ಕ ರಿಯಾಯಿತಿ, ಉಚಿತ ಊಟದ ವ್ಯವಸ್ಥೆ ಹೀಗೆ ಹತ್ತು ಹಲವು ಸಮಾಜಮುಖಿ ಯೋಜನೆಗಳನ್ನು ಕೈಗೊಂಡಿದ್ದ ಅರಸು ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತೀಕರಿಸಿದರು. ಶ್ರೇಣಿಕೃತ ಅಸಮಾನತೆಯನ್ನು ನೆಲಸಮ ಮಾಡಿದ ಅಪರೂಪದ ರಾಜಕಾರಣಿಯಾಗಿದ್ದ ಅರಸು ಅವರ ಯೋಜನೆಗಳೆಲ್ಲವೂ ಬಡವರ ಪಾಲಿನ ಚೈತನ್ಯವಾಗಿತ್ತು. ಇಂತಹ ಉತ್ಕೃಷ್ಟ ಮತ್ತು ವಿಕಸನ ಚಿಂತನೆಗಳ ಮುಂದುವರಿದ ಭಾಗವಾಗಬೇಕು ಪ್ರಸ್ತುತ ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆ. ಸರ್ಕಾರದ ಸವಲತ್ತುಗಳು ತಳಮಟ್ಟದ ನಾಗರಿಕನಿಗೆ ತಲುಪಿದಾಗ ಮಾತ್ರವೇ ಅಭಿವೃದ್ಧಿಯ ನಾಡನ್ನು ಕಂಡುಕೊಳ್ಳಲು ಸಾಧ್ಯ. ದೇವರಾಜು ಅರಸರಂತೆ ನಾಡು ಕಂಡ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ನೆಪದಲ್ಲಿ ಕೋಟಿಗಟ್ಟಲೆ ಹಣಗಳನ್ನು ವ್ಯಹಿಸಿ ಕಾರ್ಯಕ್ರಮಗಳನ್ನು ಆಯೋಜಿಸಿ, ದೀರ್ಘ ಭಾಷಣ ಮಾಡುವ ನೀಚ ಚಾಳಿಯನ್ನು ಕೈ ಬಿಟ್ಟುಕೊಂಡು ಸರ್ಕಾರಗಳು ರಾಜ್ಯದಿಂದ ಹಿಡಿದು ಹಳ್ಳಿಗಳ ಆಂತರಿಕ ಭಾಗಗಳಿಗೂ ಇಳಿದು, ಅಲ್ಲಿನ ಸಮಸ್ಯೆಳನ್ನು ಸರಿಪಡಿಸಿಬೇಕು. ಹಾಗಾದಲ್ಲಿ ಮಾತ್ರವೇ ಮಹಾತ್ಮರ ಸ್ಮರಣೆಗಳ ಸ್ವರೂಪವನ್ನು ಕಂಡುಕೊಳ್ಳಲು ಸಾಧ್ಯ.
ಅಧಿಕಾರದ ವ್ಯಾಮೋಹದಿಂದ ಆಮಿಷಗಳು ಒಡ್ಡಿ, ಉಚಿತವಾಗಿ ಕೊಟ್ಟು ಮತ್ತೊಂದು ಬದಿಯಲ್ಲಿ ಕಿತ್ತುಕೊಳ್ಳುವುದು ಅರಸು ಆಡಳಿತ ವ್ಯವಸ್ಥೆ ಮತ್ತು ಚಿಂತನೆಯಾಗಿರಲಿಲ್ಲ. ಈ ನಾಡು ಜಾತಿ, ಧರ್ಮ ಮತ್ತು ವೈಯಕ್ತಿಕ ಹಿತಾಶಕ್ತಿಗಳ ಕಪಿಮುಷ್ಠಿಗಳಿಂದ ತಕ್ಷಣವೇ ಬಿಡುಗಡೆ ಕಂಡು, ಅರಸು ಹಾರೈಸಿಂತಾಗಲಿ. ಆಗಸ್ಟ್ 20 ದೇವರಾಜ ಅರಸು ಜನ್ಮದಿನ. ದೇವರಾಜ ಅರಸು ಜನ್ಮದಿನಾಚರಣೆ ಶುಭಾಶಯಗಳು.
•ಆಮಿರ್ ಅಶ್ಅರೀ ಬನ್ನೂರು